ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ, ಮೇ15: ತೌಕ್ತೆ ಚಂಡಮಾರುತದ ಅಬ್ಬರದಿಂದಾಗಿ ಶುಕ್ರವಾರ ರಾತ್ರಿಯಿಂದ ತಾಲೂಕಿನ ಹಲವೆಡೆ ಮಳೆಯಾಗುತ್ತಿದ್ದು, ಒಂದೆಡ ನದಿ ತೀರದ ಪ್ರದೇಶಗಳಿಗೆ ನೀರು ನುಗ್ಗಿದೆ. ಇನ್ನೊಂದೆಡೆ ಕಳೆದ ಕೆಲವು ದಿನಗಳಿಂದ ಕಾಣಿಸಿಕೊಂಡಿದ್ದ ಕಡಲ್ಕೊರೆತದ ಅಬ್ಬರ ಇಂದು ಹೆಚ್ಚಾಗಿದ್ದು ಸಮುದ್ರ ತೀರದ ನಿವಾಸಿಗಳಿಗೆ ಆತಂಕ ಉಂಟುಮಾಡಿದೆ.

ಕುಂದಾಪುರ ತಾಲೂಕಿನ ಕೋಡಿ ಭಾಗದಲ್ಲಿ ಸಮುದ್ರದ ತಡೆಗೋಡೆಯ ತನಕ ನೀರು ಅಪ್ಪಳಿಸುತ್ತಿದೆ. ಬೈಂದೂರು ತಾಲೂಕಿನ ಕಂಚುಗೋಡು, ಮರವಂತೆ, ಮಡಿಕಲ್, ದೊಂಬೆ ಭಾಗದಲ್ಲಿ ಕಡಲ್ಕೋರೆತ ಹೆಚ್ಚಿದ್ದು ಹತ್ತಾರು ತೆಂಗಿನ ಮರಗಳು ಸಮುದ್ರ ಪಾಲಾಗಿದೆ. ತೀರ ಪ್ರದೇಶದಲ್ಲಿದ್ದ ಕೆಲವು ಮೀನುಗಾರಿಕಾ ಶೆಡ್’ಗಳಿಗೂ ಹಾನಿ ಉಂಟಾಗಿದೆ. ಸಮುದ್ರ ತೀರ ಪ್ರದೇಶದಲ್ಲಿ ಕಡಲಕೊರೆತ ಹೀಗೆಯೇ ಮುಂದುವರಿದರೆ ಮೀನುಗಾರಿಕಾ ರಸ್ತೆ, ಶೆಡ್ ಹಾಗೂ ಮನೆಗಳಿಗೆ ಹಾನಿಯಾಗುವ ಅಪಾಯವಿದೆ.
ಬೈಂದೂರು ಪಟ್ಟಣ ಪಂಚಾಯತ್ ವ್ಯಾಪ್ತಿಯ ಯಡ್ತರೆ ದುರ್ಮಿ, ತಾರಾಪತಿ, ಅಳವೆಕೋಡಿ ಭಾಗದಲ್ಲಿಯೂ ನೆರೆ ಉಂಟಾಗಿದ್ದು, ನದಿ ಪಾತ್ರದ ಮನೆಗಳಿಗೆ ನೀರು ನುಗ್ಗಿದೆ. ಸುಬ್ಬರಾಡಿ ಭಾಗದಲ್ಲಿ ನಡೆಯುತ್ತಿರುವ ಕಾಮಗಾರಿ ಸಲುವಾಗಿ ನದಿಗೆ ಮಣ್ಣು ಹಾಕಲಾಗಿದ್ದು ಇದರಿಂದ ನೆರೆಯ ಪ್ರಮಣ ಹೆಚ್ಚಿದೆ ಎನ್ನಲಾಗುತ್ತಿದೆ. ಮಳೆ ಹೀಗೆಯೇ ಮುಂದುವರಿದರೆ ಮತ್ತಷ್ಟು ಮನೆಗಳಿಗೆ ನೆರೆ ಆವರಿಸಲಿದೆ. ಹೆಚ್ಚಿನ ಮಳೆಯಾಗುತ್ತಿರುವುದರಿಂದ ಅಲ್ಲಲ್ಲಿ ಮರಗಳು ನೆಲಕ್ಕುರುಳುತ್ತಿವೆ.
ಸ್ಥಳಕ್ಕೆ ಶಾಸಕರು, ತಹಶಿಲ್ದಾರರ ಭೇಟಿ:
ಬೈಂದೂರು ತಾಲೂಕಿನ ನೆರೆ ಆವೃತ್ತ ಪ್ರದೇಶಗಳಿಗೆ ಬೈಂದೂರು ಶಾಸಕರಾದ ಬಿ.ಎಂ. ಸುಕುಮಾರ ಶೆಟ್ಟಿ, ತಹಶೀಲ್ದಾರ್ ಶೋಭಾಲಕ್ಷ್ಮೀ ಎಂ. ಎಸ್. ಭೇಟಿ ನೀಡಿ ಪರಿಶೀಲನೆ ನಡಸಿದರು.
► ಕಡಲ ಅಲೆಗಳ ರುದ್ರ ನರ್ತನ: ಮನೆ, ದೋಣಿಗೆ ಹಾನಿ. ಬೈಂದೂರು ಶಾಸಕರ ಭೇಟಿ – https://kundapraa.com/?p=48212 .


► ಮರವಂತೆ: ಏರುಗತಿಯಲ್ಲಿ ಸಾಗಿದ ಅಲೆಗಳ ಆರ್ಭಟ. ಆತಂಕದಲ್ಲಿ ಮೀನುಗಾರರು – https://kundapraa.com/?p=48188 .















