ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕಾಳವಾರದ ಡ್ರೀಮ್ ಫೈನಾನ್ಸ್ ಪಾಲುದಾರ ಅಜೇಂದ್ರ ಶೆಟ್ಟಿ (33) ಕೊಲೆ ಪ್ರಕರಣದ ಪ್ರಮುಖ ಆರೋಪಿಯನ್ನು ಪೊಲೀಸರು ಗೋವಾದಲ್ಲಿ ವಶಕ್ಕೆ ಪಡೆದಿದ್ದು, ಅಲ್ಲಿಂದ ಕರೆತರಲಾಗುತ್ತಿದೆ ಎಂಬ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ.
ಶುಕ್ರವಾರ ತಡರಾತ್ರಿ ಅಜೇಂದ್ರ ಶೆಟ್ಟಿಯ ಮೃತದೇಹ ಅವರ ಡ್ರೀಮ್ ಫೈನಾನ್ಸ್ ಕಚೇರಿಯಲ್ಲೇ ಪತ್ತೆಯಾಗಿತ್ತು. ಅಜೇಂದ್ರ ಸಹೋದರ ಕೊಟ್ಟ ದೂರಿನಂತೆ ಪ್ರಕರಣ ದಾಖಲಿಸಿಕೊಂಡ ಕುಂದಾಪುರ ಗ್ರಾಮಾಂತರ ಠಾಣೆಯ ಪೊಲೀಸರು ಕ್ಷೀಪ್ರವಾಗಿ ಆರೋಪಿ ಅನೂಪ್ ಶೆಟ್ಟಿಯನ್ನು ಕ್ಷಿಪ್ರವಾಗಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ತನಿಖೆ ಆರಂಭಿಸಿದ್ದ ಪೊಲೀಸರಿಗೆ ಪ್ರಾಥಮಿಕ ತನಿಖೆಯಿಂದ ಅಜೇಂದ್ರ ಅವರ ಫೈನಾನ್ಸ್ ವ್ಯವಹಾರದ ಪಾಲುದಾರ ಅನುಪ್ ಶೆಟ್ಟಿಯೇ ಕೊಲೆ ಆರೋಪಿ ಎನ್ನುವ ಶಂಕೆ ವ್ಯಕ್ತವಾಗಿತ್ತು. ಹತ್ಯೆ ಮಾಡಿದ ಬಳಿಕ ಮೊಬೈಲ್ ಸ್ವಿಚ್ ಆಫ್ ಮಾಡಿ ತಲೆಮರೆಸಿಕೊಂಡಿದ್ದಲ್ಲದೇ ಪರಾರಿಯಾಗಲು ತನ್ನ ಬೈಕ್ ಅಲ್ಲಿಯೇ ಬಿಟ್ಟು ಅಜೇಂದ್ರ ಅವರ ಹೊಸ ಕಾರನ್ನೇ ಬಳಸಿಕೊಂಡಿದ್ದನು. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಟೋಲ್ಗೇಟ್ ಗಳಲ್ಲಿ ಅಳವಡಿಸಿದ್ದ ಸಿಸಿ ಟಿವಿ ದೃಶ್ಯಾವಳಿಗಳ ಮೂಲಕ ಆರೋಪಿಯು ಉತ್ತರಕನ್ನಡ ಜಿಲ್ಲೆಯತ್ತ ಹೋಗಿರುವುದು ಖಚಿತಪಡಿಸಿಕೊಂಡು ಆತನ ಪತ್ತೆಗಾಗಿ ಹುಡುಕಾಟ ಆರಂಭಿಸಿದ್ದು, ಆರೋಪಿಯನ್ನು ಗೋವಾದಲ್ಲಿ ಬಂಧಿಸಿದ್ದಾರೆ.
2017ರಲ್ಲಿ ಕಾಳಾವರ ಸಮೀಪ ಡ್ರೀಮ್ ಫೈನಾನ್ಸ್ ಎನ್ನುವ ಆರ್ಥಿಕ ವ್ಯವಹಾರದ ಸಂಸ್ಥೆಯನ್ನು ಯಡಾಡಿ ಮತ್ಯಾಡಿಯ ಅಜೇಂದ್ರ ಶೆಟ್ಟಿ ಹಾಗೂ ಮೊಳಹಳ್ಳಿ ಮೂಲದ ಅನುಪ್ ಶೆಟ್ಟಿ ಪಾಲುದಾರಿಕೆಯಲ್ಲಿ ಆರಂಭಿಸಿದ್ದರು.. ಜು.30ರಂದು ರಾತ್ರಿವರೆಗೆ ಇಬ್ಬರು ಕಚೇರಿಯಲ್ಲಿ ಒಟ್ಟಿಗೆ ಇದ್ದರು ಎನ್ನಲಾಗಿದೆ. ಮೇಲ್ನೋಟಕ್ಕೆ ಹಣಕಾಸಿನ ವ್ಯವಹಾರ ಹಾಗೂ ಹೊಸ ಕಾರು ಖರೀದಿಯ ಬಗ್ಗೆ ವೈಷಮ್ಯದಿಂದಾಗಿ ಕೊಲೆ ಮಾಡಿದ್ದು, ತನಿಕೆಯ ಬಳಿಕ ನಿಖರ ಕಾರಣ ತಿಳಿಯಬೇಕಿದೆ.
ಪ್ರತಿದಿನ 9 ಗಂಟೆಯ ಒಳಗೆ ಮನೆ ಸೇರುತ್ತಿದ್ದ ಅಜೇಂದ್ರ ಶುಕ್ರವಾರ ಮಾತ್ರ ತಡರಾತ್ರಿಯಾದರೂ ಮನೆಗೆ ಬಂದಿರಲಿಲ್ಲ. ಇದರಿಂದ ಆತಂಕಗೊಂಡ ಮನೆಯವರು ಹಾಗೂ ಸ್ನೇಹಿತರು ಹುಡುಕಾಟ ನಡೆಸಿದ್ದಾರೆ. ಅಜೇಂದ್ರ ಸಹೋದರ ಮಹೇಂದ್ರ ಶೆಟ್ಟಿ, ಸ್ನೇಹಿತರಾದ ರಕ್ಷಿತ್, ಜಯಕರ ಹಾಗೂ ಪ್ರಥ್ವೀಷ್ ಹುಡುಕಾಡುತ್ತಾ ಕಾಳಾವರದ ಫೈನಾನ್ಸ್ಗೆ ಬಂದಾಗ ಎದುರಿನ ಶೆಟರ್ ಮುಚ್ಚಿದ್ದು ಬೀಗ ಹಾಕಿರಲಿಲ್ಲ. ಅನುಮಾನಗೊಂಡು ಶೆಟರ್ ತೆರೆದು ಒಳಪ್ರವೇಶಿಸಿದಾಗ ಅಜೇಂದ್ರ ಶೆಟ್ಟಿ ರಕ್ತದ ಮಡುವಿನಲ್ಲಿ ಕುಳಿತ ಭಂಗಿಯಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ತಕ್ಷಣ ಅವರನ್ನು ಕೋಟೇಶ್ವರ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದನ್ನು ಖಚಿತಪಡಿಸಿದ್ದರು. ಅಜೇಂದ್ರ ಅವರ ಕೆನ್ನೆ, ಕತ್ತು, ಕಾಲಿನ ಭಾಗದಲ್ಲಿ ಇರಿದ ಗಾಯಗಳಾಗಿದ್ದು, ಹರಿತವಾದ ಆಯುಧದಿಂದ ಕತ್ತು ಸೀಳಿ ಕೊಲೆ ಮಾಡಲಾಗಿತ್ತು.
ಪೊಲೀಸರ ಕ್ಷಿಪ್ರ ಕಾರ್ಯಾಚರಣೆ:
ಶುಕ್ರವಾರ ತಡರಾತ್ರಿಯೇ ಘಟನಾ ಸ್ಥಳಕ್ಕೆ ಉಡುಪಿ ಎಸ್ಪಿ ವಿಷ್ಣುವರ್ಧನ್, ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದರು. ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್, ಸಿಪಿಐ ಗೋಪಿಕೃಷ್ಣ, ಗ್ರಾಮಾಂತರ ಠಾಣೆಯ ಪಿಎಸ್ಐ, ಪ್ರೊಬೇಶರಿ ಪಿಎಸ್ಐಗಳು ಭೇಟಿ ನೀಡಿ ತನಿಕೆ ಮುಂದುವರಿಸಿದ್ದರು. ಫೋರೆನ್ಸಿಕ್ ತಜ್ಞರ ತಂಡ ಕೃತ್ಯ ನಡೆದ ಸ್ಥಳದಲ್ಲಿ ಪರಿಶೀಲನೆ ನಡೆಸಿತ್ತು. ಕುಂದಾಪುರ ಉಪವಿಭಾಗ ವ್ಯಾಪ್ತಿಯ ಪೊಲೀಸರು ಎರಡು ತಂಡಗಳಾಗಿ ಮಾಡಿಕೊಂಡು ಆರೋಪಿಯನ್ನು ಶೀಘ್ರವಾಗಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ:
► ಕುಂದಾಪುರ: ಕಛೇರಿಗೆ ನುಗ್ಗಿ ಫೈನಾನ್ಸ್ ಮಾಲಿಕನ ಕೊಲೆ – https://kundapraa.com/?p=50633 .
ಇದನ್ನೂ ಓದಿ:
► ಕುಂದಾಪುರ: ಕಛೇರಿಗೆ ನುಗ್ಗಿ ಫೈನಾನ್ಸ್ ಮಾಲಿಕನ ಕೊಲೆ – https://kundapraa.com/?p=50633 .
► ವಿಶಾಲ ಕೊಲೆ ಪ್ರಕರಣ: ಆರೋಪಿಗಳ ಹೆಡೆಮುರಿ ಕಟ್ಟುವಲ್ಲಿ ಯಶಸ್ಸಿಯಾದ ಖಾಕಿ ಪಡೆ – https://kundapraa.com/?p=50305 .