ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಭತ್ತ ಕಟಾವು ಯಂತ್ರದ ದಲ್ಲಾಲಿಗಳು ಕಟಾವಿಗೆ ಹೆಚ್ಚಿನ ದರ ವಿಧಿಸುತ್ತಿರುವ ಬಗ್ಗೆ ಖಂಬದಕೋಣೆ ರೈ.ಸೇ.ಸ. ಸಂಘದ ಸದಸ್ಯರು ಪ್ರತಿ ವರ್ಷವು ದೂರು ನೀಡುತ್ತಿದ್ದು, ಈ ವರ್ಷದ ಭತ್ತ ಕಟಾವು ಯಂತ್ರದ ಬಾಡಿಗೆ ಬೆಲೆ ನಿಗದಿಪಡಿಸುವ ಸಂದರ್ಭದಲ್ಲಿ ಖಂಬದಕೋಣೆ ರೈ.ಸೇ.ಸ ಸಂಘದ ಪ್ರತಿನಿಧಿಗಳನ್ನು ಸಭೆಗೆ ಆಹ್ವಾನಿಸುವಂತೆ ಖಂಬದಕೋಣೆ ರೈತರ ಸೇವಾ ಸಹಾಕಾರಿ ಸಂಘದ ಅಧ್ಯಕ್ಷರಾದ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಹಾಗೂ ರೈತಕೂಟದ ನಿಯೋಗ ಉಡುಪಿ ಜಿಲ್ಲಾಧಿಕಾರಿ ಹಾಗೂ ಕೃಷಿ ನಿರ್ದೇಶಕರಲ್ಲಿ ಮನವಿ ಮಾಡಿದೆ.
ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘವು 9 ಗ್ರಾಮಗಳ ಕಾರ್ಯವ್ಯಾಪ್ತಿಯನ್ನು ಹೊಂದಿದ್ದು ಸುಮಾರು 32 ಸಾವಿರಕ್ಕೂ ಮಿಕ್ಕಿ ಸದಸ್ಯರನ್ನು ಒಳಗೊಂಡಿದೆ ಈ 9 ಗ್ರಾಮ ವ್ಯಾಪ್ತಿಯಲ್ಲಿ ಸುಮಾರು 4800 ಎಕರೆಗೂ ಮಿಕ್ಕಿ ಕೃಷಿ ಭೂಮಿಯಲ್ಲಿ ಭತ್ತ, ನೆಲಗಡಲೆ, ಉದ್ದು ಇತ್ಯಾದಿ ಬೆಳೆಗಳನ್ನು ರೈತರು ಬೆಳೆಯುತ್ತಿದ್ದಾರೆ. ಸಂಘದಲ್ಲಿ ನಿರಂತರವಾಗಿ ಒಂದು ವರ್ಷದಿಂದ ಹಾಗೂ ಕಳೆದ ರೈತಕೂಟದ ಮಾಸಿಕ ಸಭೆಯಲ್ಲಿ ಭತ್ತ ಕಠಾವು ಯಂತ್ರದ ಬಾಡಿಗೆ ದರ ನಿಗದಿಪಡಿಸುವಲ್ಲಿ ಸಂಘವು ಮಧ್ಯ ಪ್ರವೇಶಿಸುವಂತೆ ರೈತರ ಒತ್ತಾಯ ಹಾಗೂ ವಿನಂತಿ ಮಾಡುತ್ತಿದ್ದಾರೆ.
ಸಂಘವು ಕಳೆದ ಇಪ್ಪತ್ತೈದು ವರ್ಷಗಳಿಂದ ರೈತಕೂಟವನ್ನು ಸ್ಥಾಪನೆ ಮಾಡಿದ್ದು, ಈ ಕೂಟದಲ್ಲಿರುವ ಪ್ರಗತಿಪರ ರೈತರು ಕೃಷಿ, ತೋಟಗಾರಿಕೆ ಇನ್ನಿತರ ಬೆಳೆಗಳನ್ನು ಬೆಳೆಯುತ್ತಿದ್ದು, ರೈತರಿಗಾಗಿ ಸಂಘವು ಮಾಸಿಕ ಸಭೆ, ತರಬೇತಿ, ಅಧ್ಯಯನ, ಪ್ರವಾಸ ಮುಂತಾದ ಕೃಷಿ ಪೂರಕ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸುತ್ತಾ ಬಂದಿದೆ.
ಈ ವರ್ಷ ಕಟಾವು ಪೂರ್ವದಲ್ಲಿ ರೈತರ ಈ ಸಮಸ್ಯೆಯನ್ನು ಬಗೆಹರಿಸುವರೇ, ರೈತರ ಅನುಕೂಲ ಹಾಗೂ ರೈತರಿಗೆ ಸಹಕರಿಸುವುದಕ್ಕಾಗಿ ರೈತಕೂಟದ ಸದಸ್ಯರನ್ನೊಳಗೊಂಡ ನಿಯೋಗದ ಮನವಿ ಮಾಡಿದೆ.