ನಮ್ಮ ಸುತ್ತ ಮುತ್ತಲ ಪ್ರಪಂಚವನ್ನು ನೋಡಲು ನಮ್ಮೊಳಗೊಂದು ವಿಶೇಷವಾದ ಕಣ್ಣು ಸದಾ ಜಾಗೃತವಾಗಿರಬೇಕು. ಏನೆಲ್ಲಾ ವೈಚಿತ್ರಗಳನ್ನು ಕಾಣಬಹುದು, ಕೇಳಬಹುದು. ‘ನಾನೊಬ್ಬ ಕವಿಯು, ನನ್ನ ಕಣ್ಣೇ ಕಿವಿಯು’ ಎಂದು ಕವಿ ಬೇಂದ್ರೆಯವರು ಕವಿಕರ್ಮದ ಬಗೆಗೆ ಹೇಳಿರುವ ಮಾತು ಈ ಮನುಷ್ಯನ ಈ ಕಾಣುವ, ಕೇಳುವ ಜಾಗೃತ ಪ್ರಜ್ಞೆಯ ಕುರಿತಾಗಿದೆ. ಮನುಷ್ಯನೊಳಗಿನ ಅನುಭವ ಜಗತ್ತು ವಿಸ್ತರಿಸುವುದಕ್ಕೆ ಬದುಕು ಕಲಿಸುವ ಪಾಠ ಬಹಳ ದೊಡ್ಡದು. ನಮ್ಮ ಕಲ್ಪನೆಗೂ ಮೀರಿದ ಅನೇಕ ಸಂಗತಿಗಳು, ವಿಸ್ಮಯಗಳು ನಡೆಯುತ್ತಲೇ ಹೋಗುತ್ತದೆ. ಸೋಲು-ಗೆಲುವು, ಸುಖ-ಕಷ್ಟ, ನೋವು-ನಲಿವು ಒಟ್ಟಾಗಿ ಬೆರೆತ ಈ ಕತ್ತಲು ಬದುಕಿನ ಆಟದಲ್ಲಿ ನಮ್ಮ ಜೀವಿತದ ಒಟ್ಟು ಕಾಲದಲ್ಲಿ ನಾವು ಕಾಣುವುದು ಕೇವಲ 50% ಹಗಲು; 50% ರಾತ್ರಿ ಮಾತ್ರ. ಪೂರ್ತಿ ಹಗಲನ್ನು ಕಾಣದೆ, ಪೂರ್ತಿ ರಾತ್ರಿಯನ್ನು ನೋಡದೆ ಒಂದು ದಿನ ಇಹಕ್ಕೆ ಗುಡ್ ಬೈ ಹೇಳುವ ಈ ನಡುವೆ ಕಂಡದ್ದಕ್ಕಿಂತ ಕಾಣದೇ ಉಳಿದಿರುವ ಸಂಗತಿಗಳೆ ಹೆಚ್ಚು.
ವರ್ತಮಾನವೆನ್ನುವುದು ಭವಿಷ್ಯದ ತಂದೆ: ಭೂತದ ಕೂಸು. ಸದ್ಯ ನಾನೀಗ ಬದುಕಿದ್ದೇನೆ ಎಂದರೆ ಗತದ ಮುಂದುವರಿಕೆಯಾಗಿದ್ದೇನೆ ಎಂದೇ ಅರ್ಥ. ಇದು ಒಂದು ರೀತಿಯಲ್ಲಿ ಖೋ ಖೋ ಆಟ. ಕಾಲದೊಂದಿಗೆ ಮನುಷ್ಯ ನಡೆಸುವ ಪೈಪೋಟಿ ಅಂದು-ಇಂದು-ಮುಂದು ಎನ್ನುವ ಮೂರು ಅಖಂಡ ನೆಲೆಯಲ್ಲಿ ಆಡುವ ಆಟವಾಗಿ ಕಾಣಿಸುತ್ತದೆ. ತಲೆಮಾರುಗಳ ನಡುವಿನ ಈ ಅಂತರದಿಂದಾಗಿ ನಮಗೆ ಕಾಲ ಕೆಟ್ಟು ಹೋದಂತೆ ಕಾಣುತ್ತದೆ. ಅಂದಿನ ದಿನಗಳ ಹಾಗೆ ಇಂದಿನ ದಿನಗಳಿಲ್ಲ ಎಂಬ ಕೊರಗು ಅನೇಕ ಹಿರಿಯರನ್ನು ಕಾಡುತ್ತದೆ. ಯುವಜನತೆ ದಾರಿ ತಪ್ಪುತ್ತಿದೆ, ಮನುಷ್ಯ ಹೆಚ್ಚು ಸ್ವಾರ್ಥ ಪರನಾಗಿದ್ದಾನೆ ಎಂದೆಲ್ಲಾ ನಮ್ಮ ಹಿರಿಯರು ಗೊಣಗುತ್ತಾರೆ. ಕಿರಿಯರಿಗೆ ಕಾಲದ ಬಗೆಗೆ ಆತಂಕವಿಲ್ಲ. ಈ ಕಾಲವೇ ಸುಂದರವೆಂದು ಕೊಳ್ಳುತ್ತಾ ಐಷಾರಾಮಿ ಬದುಕಿನ ಕನಸು ಕಾಣುತ್ತಾರೆ. ನಮ್ಮ ಅಜ್ಜ ಅಜ್ಜಿ ಹೇಳುವ ಅನುಭವ ಕಥನಗಳು ಇಂದಿನ ಮಕ್ಕಳಿಗೆ ವಿಚಿತ್ರವಾಗಿ ಕಂಡರೂ ಆಶ್ಚರ‍್ಯವಿಲ್ಲ.
ನಿನ್ನೆ ಒಂದು ಹರಟೆ ಕಾರ‍್ಯಕ್ರಮಕ್ಕೆ ಹೋಗಿದ್ದೆ. ಹರಟೆಯ ವಿಷಯ ’ಆ ಕಾಲ ಚಂದವೋ ಈ ಕಾಲ ಚಂದವೋ?’. ಆ ಕಾಲ ಚಂದ ಅನ್ನುವ ನಮ್ಮ ಗಂಪಿನಿಂದ ಒಬ್ಬರು ವರ್ಣಮಾಲೆಯಲ್ಲಿ ’ಈ’ ಗಿಂತ ಮೊದಲು ’ಆ’ ಬರುತ್ತದೆ, ಆದ್ದರಿಂದ ಯಾವಾಗಲೂ ಹಳೆಯದ್ದಕ್ಕೆ ಮೊದಲ ಆದ್ಯತೆ ಎಂದು ಅಭಿಪ್ರಾಯಪಟ್ಟರು. ವಾಗ್ವಾದಗಳು ತೀವ್ರವಾಗಿಯೇ ನಡೆಯಿತು. ಕೂಡಲೇ ಹಿರಿಯ ಹರಟೆ ಮಲ್ಲರೊಬ್ಬರು, ಆ ಕಾಲ ಚೆನ್ನಾಗಿದೆ ಎಂದು ಹೇಳ್ತಿದ್ದೀರಲ್ಲ, ಆ ಕಾಲವನ್ನು ಈಗ ಹೇಗೆ ವಾಪಾಸು ತರಬಲ್ಲಿರಿ? ಎಂದು ತಾರ್ಕಿಕ ಪ್ರಶ್ನೆಯನ್ನೆ ಎತ್ತಿದರು. ಇದು ಪ್ರಶ್ನೆಗಾಗಿ ಪ್ರಶ್ನೆ ಎಂಬುದು ಅವರಿಗೂ ಗೊತ್ತು, ನಮಗೂ ಗೊತ್ತು, ಸಭೆಗೂ ಗೊತ್ತು. ಆದರೆ ಇದಕ್ಕೆ ಕೊಡಬಹುದಾದ ಉತ್ತರ ಅಷ್ಟು ಸುಲಭವಾಗಿಲ್ಲ. ನಿನ್ನೆ ಎನ್ನುವುದು ಭ್ರಮೆ, ನಾಳೆ ಎನ್ನುವುದು ಕಲ್ಪನೆ. ನಾನು ಅನುಭವಿಸುವ ಈ ಕ್ಷಣ ಮಾತ್ರ ಸತ್ಯ. ಕಾಲ ಸದಾ ಹರಿಯುತ್ತಿರುವ ಪ್ರವಾಹ. ನಿನ್ನೆ-ಇಂದು-ನಾಳೆಗಳು ಆ ಪ್ರವಾಹಕ್ಕೆ ಸೇರುವ ತೊರೆಗಳು. ಕಾಲವು ರೂಪಿಸುವ ಅನೇಕ ಅನುಭವಗಳು ಕೂಡ ಹರಿವ ತೊರೆಗಳು. ಅದನ್ನು ಒಂದೊಂದಾಗಿ ಸ್ಮರಿಸುತ್ತಾ ಹೋಗುವುದೇ ಮಾನವ ಬದುಕಿನ ಮಹಾಕಾವ್ಯ. ಒಬ್ಬೊಬ್ಬರೂ ಒಂದೊಂದು ನೆನಪಿನ ಗಣಿ. ಬರೆದಿಟ್ಟರೆ ಪ್ರತಿಯೊಬ್ಬರೂ ವಾಲ್ಮೀಕಿ.