ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕಾಳಾವರ ವರದರಾಜ ಎಂ. ಶೆಟ್ಟಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಚುನಾವಣಾ ಸಾಕ್ಷರತಾ ಸಂಘ ಹಾಗೂ ತಹಶೀಲ್ದಾರರ ಕಚೇರಿ, ಕುಂದಾಪುರ ಇವುಗಳ ಸಂಯುಕ್ತ ಆಶ್ರಯದಲ್ಲಿ ವ್ಯವಸ್ಥಿತ ಮತದಾರರ ಶಿಕ್ಷಣ ಮತ್ತು ಚುನಾವಣೆ ಭಾಗವಹಿಸುವಿಕೆ ಕಾರ್ಯಕ್ರಮ ನಡೆಯಿತು.
ಕ್ಷೇತ್ರ ಶಿಕ್ಷಣಾಧಿ ಕಾರಿ ಕಚೇರಿಯ ಬಿ.ಆರ್.ಸಿ. ಸದಾನಂದ ಮಾತನಾಡಿ, ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಭಾರತದ ರಾಜಕೀಯದ ಸ್ಥಿರತೆಗೆ ಮತ ದಾರರ ಮತ ಹಾಗೂ ಚುನಾವಣೆಯಲ್ಲಿ ಭಾಗವಹಿಸುವಿಕೆ ಪ್ರಮುಖವಾದುದು. ರಾಜಕೀಯ ಶಿಕ್ಷಣವುಳ್ಳ ಪ್ರಜ್ಞಾವಂತ ಯುವ ಮತದಾರರ ಮತ ದೇಶಕ್ಕೆ ಭದ್ರತೆ ಒದಗಿಸಬಲ್ಲದು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ದೇಶದ ಭವಿಷ್ಯವನ್ನು ಹಿತದಲ್ಲಿ ಇರಿಸಿಕೊಂಡು ಮತ ನೋಂದಣಿ ಹಾಗೂ ಪರಿಷ್ಕರಣೆ ಮಾಡಿಕೊಳ್ಳುವುದು ಅಗತ್ಯ ಹಾಗೂ ಮತ ಸೋರಿ ಹೋಗದಂತೆ ಜಾಗೃತರಾಗಿರಿ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲ ಡಾ. ರಾಜೇಂದ್ರ ಎಸ್. ನಾಯಕ ಕಾರ್ಯಕ್ರಮದ ಉದ್ದೇಶ ತಿಳಿಸಿದರು. ಕಂದಾಯ ನಿರೀಕ್ಷಕ ದಿನೇಶ, ಹಾಗೂ ಗ್ರಾಮ ಲೆಕ್ಕಿಗ ಆನಂದ ಕೋಟೇಶ್ವರ ಮತ ನೋಂದಣಿ ಕುರಿತು ಮಾಹಿತಿ ನೀಡಿದರು. ಸಂಚಾಲಕಿ ಜ್ಯೋತಿ ಪ್ರಾಸ್ತಾವಿಸಿ, ಸ್ವಾಗತಿಸಿದರು. ಗ್ರಂಥಪಾಲಕ ರವಿಚಂದ್ರ ಎಚ್.ಎಸ್. ವಂದಿಸಿದರು. ತೃತೀಯ ಬಿ.ಕಾಂ. ವಿದ್ಯಾರ್ಥಿನಿ ಸೌಜನ್ಯಾ ನಿರೂಪಿಸಿದರು.