ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಸಂಜೀವಿನಿ ಸಂಘದ ಉತ್ಪನ್ನಗಳನ್ನು ಬ್ರಾಂಡಿಂಗ್ ಮಾಡಲಾಗುತ್ತಿದ್ದು, ಅಮೆಜಾನ್‌ನಲ್ಲಿ ಸಂಜೀವಿನ ಸಂಘದ ಉತ್ಪನ್ನಗಳನ್ನು ಪರಿಚಯಿಸಿ ಮಾರಾಟ ಮಾಡುವ ಬಗ್ಗೆ ಸರಕಾರ ಚಿಂತನೆ ನಡೆಸಿದೆ. ಜಿಲ್ಲೆಯಲ್ಲಿ 21 ಕಡೆಗಳಲ್ಲಿ ಸಂಜೀವಿನಿ ಸಂತೆಗಳು ನಡೆಯುತ್ತಿದ್ದು, ಸಂಘದ ಸದಸ್ಯರು ಉತ್ತಮ ಲಾಭ ಗಳಿಸುತ್ತಿದ್ದಾರೆ. ಇತರ ಜಿಲ್ಲೆಗಳಿಗೆ ಹೋಲಿಸಿದರೆ ಉಡುಪಿ ಜಿಲ್ಲೆ ಅಗ್ರ ಸ್ಥಾನದಲ್ಲಿದ್ದು ಸಂಘದ ಸದಸ್ಯರು ಉತ್ತಮವಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಸಂಜೀವಿನಿ ಸ್ವಸಹಾಯ ಸಂಘಗಳ ಜಿಲ್ಲಾ ಯೋಜನಾ ನಿರ್ದೇಶಕ ಬಾಬು ಹೇಳಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ, ಉಡುಪಿ ಜಿಲ್ಲಾ ಪಂಚಾಯತ್ ಉಡುಪಿ, ತಾಲೂಕು ಪಂಚಾಯತ್ ಕುಂದಾಪುರ, ಗ್ರಾಮ ಪಂಚಾಯತ್ ಗುಜ್ಜಾಡಿ ಇವರ ಜಂಟಿ ಆಶ್ರಯದಲ್ಲಿ ಗುಜ್ಜಾಡಿ ಗ್ರಾಮ ಪಂಚಾಯತ್ ಸಮೀಪ ಆಯೋಜಿಸಲಾಗಿದ್ದ ಸಮೃದ್ಧಿ ಸಂಜೀವಿನಿ ಒಕ್ಕೂಟದ ‘ಸಂಜೀವಿನಿ ಸಂತೆ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಕುಂದಾಪುರ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಶ್ವೇತಾ ಎನ್., ಸಂಜೀವಿನಿ ಸಂತೆ ವಿಶಿಷ್ಟ ಕಾರ್ಯಕ್ರಮವಾಗಿದ್ದು, ಸಂಘದ ಸದಸ್ಯರು ತಯಾರಿಸಿದ ಉತ್ಪನ್ನಗಳನ್ನು ಸ್ಥಳೀಯವಾಗಿ ಮಾರಾಟ ಮಾಡಿ ಹೆಚ್ಚಿನ ಆದಾಯ ಗಳಿಸಲು ಸಹಕಾರಿಯಾಗುತ್ತಿದೆ. ಸರಕಾರದ ಈ ಯೋಜನೆ ಗ್ರಾಮೀಣ ಜನರಿಗೆ ಅನುಕೂಲವಾಗಲಿದ್ದು, ಸಂಜೀವಿನಿ ಉತ್ಪನ್ನಗಳಿಗೆ ಬೇಡಿಕೆಯೂ ಹೆಚ್ಚಾಗಲಿದೆ ಎಂದರು.
ಗುಜ್ಜಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಯಮುನಾ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಮಾಜಿ ಸದಸ್ಯೆ ಶೋಭಾ ಜಿ.ಪುತ್ರನ್, ಕಾರ್ಯಕ್ರಮ ವ್ಯವಸ್ಥಾಪಕ ಪ್ರಭಾಕರ ಆಚಾರ್ಯ, ಎನ್‌ಆರ್‌ಎಲ್‌ಎಂ ವ್ಯವಸ್ಥಾಪಕ ಅವಿನಾಶ್, ತಾಲೂಕು ವ್ಯವಸ್ಥಾಪಕರಾದ ರಂಜಿತಾ, ಯತೀಶ್, ಪ್ರಶಾಂತ್, ಗ್ರಾಪಂ ಉಪಾಧ್ಯಕ್ಷ ರಾಜು ಪೂಜಾರಿ, ಸದಸ್ಯರಾದ ಹರೀಶ ಮೇಸ್ತ, ಶೇಖರ ದೇವಾಡಿಗ, ಶ್ರೀಧರ, ಲೋಲಾಕ್ಷಿ, ಭಾರತಿ, ಜೆಸಿಂತಾ, ಜಯಂತಿ, ಜಲಜಾ, ಗ್ರಾಪಂ ಕಾರ್ಯದರ್ಶಿ ಶಕುಂತಲಾ, ಸಮೃದ್ಧಿ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ವಿಜಯಾ ಗಾಣಿಗ ಮೊದಲಾದವರು ಉಪಸ್ಥಿತರಿದ್ದರು.
ಪ್ರಮೀಳಾ ಸ್ವಾಗತಿಸಿದರು. ಕವಿತಾ ಗಾಣಿಗ ಕಾರ್ಯಕ್ರಮ ನಿರ್ವಹಿಸಿದರು. ವೀಣಾ ಮೇಸ್ತ ವಂದಿಸಿದರು.