ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಸ್ನೇಹಿತರೊಂದಿಗೆ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ಯುವಕ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಘಟನೆ ತಾಲೂಕಿನ ಸೋಮೇಶ್ವರ ಬೀಚ್ ಬಳಿ ನಡೆದಿದೆ. ಬವಳಾಡಿಯ ಮಂಜುನಾಥ ದೇವಾಡಿಗ ಎಂಬುವವರ ಪುತ್ರ ಶಶಿಧರ್ (22) ಮೃತ ದುರ್ದೈವಿ. ಉಳಿದ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬಿಜೂರು ಗ್ರಾಮದ ಬವಳಾಡಿಯ ಶಶಿಧರ್ ಎಂಬ ಯುವಕ ತನ್ನ ನಾಲ್ವರು ಸ್ನೇಹಿತರೊಂದಿಗೆ ಸೋಮೇಶ್ವರ ದೊಂಬೆ ನಡುವಿನ ಪ್ರದೇಶದ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದರು. ಈ ವೇಳೆ ಅಲೆಗಳ ರಭಸಕ್ಕೆ ನಿಯಂತ್ರಣ ಕಳೆದುಕೊಂಡು ತೆರೆಯೊಂದಿಗೆ ತೇಲಿಹೊಗಿದ್ದಾರೆ. ಕೂಡಲೇ ಸ್ನೇಹಿತನೋರ್ವ ಆತನ ರಕ್ಷಣೆಗೆ ಧಾವಿಸಿ ಹಿಡಿದುಕೊಂಡರೂ, ದಡಕ್ಕೆ ತರಲು ಸಾಧ್ಯವಾಗದೇ ಸಹಾಯಕ್ಕಾಗಿ ಯಾಚಿಸಿದ್ದಾನೆ. ಸ್ಥಳೀಯರು ರೋಪ್ ಮೂಲಕ ಇಬ್ಬರನ್ನು ದಡಕ್ಕೆ ತಂದಿದ್ದಾರೆ. ಅಷ್ಟರಲ್ಲಾಗಲೇ ಶಶಿಧರ್ ಮೃತಪಟ್ಟಿದ್ದ ಎನ್ನಲಾಗಿದೆ.
ಸೌಮ್ಯ ಸ್ವಭಾವದವನಾಗಿದ್ದ ಶಶಿಧರ್ ಒಂದು ವರ್ಷದ ಹಿಂದೆ ಪದವಿ ಮುಗಿಸಿದ್ದು ಸ್ವಲ್ಪ ಸಮಯ ಬೆಂಗಳೂರಿನಲ್ಲಿ ಕೆಲಸ ನಿರ್ವಹಿಸಿ ಸದ್ಯ ಊರಿನಲ್ಲಿಯೇ ಕೆಲಸ ಮಾಡಿಕೊಂಡಿದ್ದ ಎನ್ನಲಾಗಿದೆ. ಶಶಿಧರ್ ತಂದೆ, ತಾಯಿ ಹಾಗೂ ಸಹೋದರಿಯನ್ನು ಅಗಲಿದ್ದಾರೆ. ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.