ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ತ್ರಾಸಿ ಅರಮ ದೇವಸ್ಥಾನದ ಬಳಿ ಹಾಗೂ ಮೊವಾಡಿ ಬ್ರಿಡ್ಜ್ ಸಮೀಪ ಸೌಪರ್ಣಿಕಾ ನದಿಯಲ್ಲಿ ಅನಧಿಕೃತ ಮರಳುಗಾರಿಕೆಗೆ ನಡೆಸುತ್ತಿದ್ದ ಸ್ಥಳಕ್ಕೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ಒಟ್ಟು 6 ದೋಣಿಗಳನ್ನು ವಶಪಡಿಸಿಕೊಂಡಿದ್ದಾರೆ.
ಸೌಪರ್ಣಿಕಾ ನದಿಯಲ್ಲಿ ಅಕ್ರಮ ಮರಳುಗಾರಿಕೆ ಎಗ್ಗಿಲ್ಲದೇ ನಡೆಯುತ್ತಿದೆ ಎನ್ನುವ ದೂರಿನ ಮೇರೆಗೆ ದಾಳಿ ನಡೆಸಿದ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಭೂವಿಜ್ಞಾನಿ ಸಂಧ್ಯಾ ಅವರು ಸ್ವತಃ ದೋಣಿಯ ಮೂಲಕ ತೆರಳಿ ದಾಳಿ ನಡೆಸಿದ್ದಾರೆ. ತ್ರಾಸಿ, ಮೊವಾಡಿ, ಗುಡ್ಡೆಯಂಗಡಿಯ ಸೌಪರ್ಣಿಕಾ ನದಿಯಲ್ಲಿ ಅನಧಿಕೃತ ಮರಳುಗಾರಿಕೆ ನಡೆಯುತ್ತಿರುವ ಮಾಹಿತಿ ಆಧರಿಸಿ ದಾಳಿ ನಡೆಸಿದ ಸಂದರ್ಭದಲ್ಲಿ ನಾಡ ಬಡಾಕೆರೆ ವ್ಯಾಪ್ತಿಯ ಕೆಲವೆಡೆ ಅನಧಿಕೃತ ಮರಳು ದಂಧೆ ನಡೆಸುವವರು ಮರಳು ಗಣಿಗಾರಿಕೆಗೆ ಬಳಸುವ ದೋಣಿಗಳನ್ನು ಹಾಗೂ ಇನ್ನಿತರ ಪರಿಕರಗಳನ್ನು ನೀರಿನಲ್ಲಿ ಮುಳುಗಿಸಿ ಪರಾರಿಯಾಗಿದ್ದಾರೆ.
ಅನಧಿಕೃತ ಮರಳುಗಾರಿಕೆಯಲ್ಲಿ ತೊಡಗಿಕೊಂಡಿರುವವರು ಸೋಮವಾರ ಮೊವಾಡಿ ಸಮೀಪದಲ್ಲಿ ಯಾಂತ್ರೀಕೃತ ಮರಳುಗಾರಿಕೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ್ದರು. ಯಾಂತ್ರೀಕೃತ ಮರಳುಗಾರಿಕೆಯಿಂದ ತಮ್ಮ ಅಕ್ರಮ ಮರಳುಗಾರಿಕೆಗೆ ಸಮಸ್ಯೆಯಾಗಬಹುದೆಂದು ಸ್ಥಳೀಯರನ್ನು ಸೇರಿಸಿ ಸರ್ಕಾರ ಪರವಾನಿಗೆ ನೀಡಿರುವ ಯಾಂತ್ರೀಕೃತ ಮರಳುಗಾರಿಕೆಯನ್ನು ನಿಲ್ಲಿಸಲು ಪ್ರತಿಭಟನೆ ನಡೆಸಿದ್ದಾರೆ ಎಂದ ಆರೋಪ ಕೇಳಿಬಂದಿದೆ.










