ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೊಲ್ಲೂರು: ರಾಜ್ಯದಲ್ಲಿ ಪೈಲೆಟ್ ಕಾರ್ಯಕ್ರಮವಾಗಿ ದೇಶದಲ್ಲಿಯೇ ಮೊದಲ ಭಾರಿಗೆ ಸಣ್ಣ ರೈತರ ಟ್ರ್ಯಾಕ್ಟರ್‌ಗಳಿಗೆ ಎಕರೆಗೆ ರೂ. 250ರಂತೆ ಗರಿಷ್ಠ 5 ಎಕರೆ ತನಕ ಡೀಸೆಲ್ ಸಬ್ಸಿಡಿ ನೀಡಲು ನಿರ್ಧರಿಸಲಾಗಿದೆ. ಈ ಯೋಜನೆ ಎಪ್ರಿಲ್ 1ರಿಂದ ಜಾರಿಗೆ ಬಂದಿದ್ದು, ಇದಕ್ಕಾಗಿ ರೂ.500 ಕೋಟಿ ಮೀಸಲಿರಿಸಲಾಗಿದೆ ಎಂದು ರಾಜ್ಯ ಕೃಷಿ ಸಚಿವ ಬಿ. ಸಿ. ಪಾಟೀಲ್ ಹೇಳಿದರು.
ಅವರು ಭಾನುವಾರ ಸಂಜೆ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳಕ್ಕೆ ಕುಟುಂಬಿಕರೊಂದಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.
ನಮ್ಮ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಬೆಳೆ ಪರಿಹಾರವನ್ನು ರೂ.6,000 ದಿಂದ ರೂ.28,000ಕ್ಕೆ ಹೆಚ್ಚಿಸಲಾಗಿದೆ. ಪ್ರಧಾನಮಂತ್ರಿ ಕಿಸಾನ್ ಸನ್ಮಾನ್ ಯೋಜನೆ ಕರ್ನಾಟಕದಲ್ಲಿ ಸಮರ್ಪಕವಾಗಿ ಅನುಷ್ಠಾನ ಮಾಡಿದ್ದಕ್ಕಾಗಿ, ರಾಜ್ಯ ದೇಶದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ ಎಂದರು.
ಸಚಿವ ಸಂಪುಟ ಪುನರ್ ರಚನೆ ಬಗ್ಗೆ ಪ್ರತಿಕ್ರಿಯಿಸಿ, ರಾಜ್ಯಕ್ಕೆ ಪ್ರತಿಭಾರಿಯೂ ಕೇಂದ್ರ ನಾಯಕರು ಭೇಟಿ ನೀಡಿದ ಸಂದರ್ಭ ಸಂಪುಟ ಪುನರ್ ರಚನೆಯ ವಿಚಾರ ಮುನ್ನೆಲೆಗೆ ಬರುತ್ತದೆ. ಸಂಪುಟದ 4 ಖಾಲಿ ಸ್ಥಾನ ತುಂಬುವ ಬಗ್ಗೆ ಮುಖ್ಯಮಂತ್ರಿಗಳು ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದರು.