ನರೇಂದ್ರ ಎಸ್. ಗಂಗೊಳ್ಳಿ | ಕುಂದಾಪ್ರ ಡಾಟ್ ಕಾಂ ಲೇಖನ.
ನಿಜ. ಪ್ರತೀ ವರುಷ ಅಕ್ಟೋಬರ್ ಎರಡು ಬರುತ್ತದೆ. ಅಂದು ನಮಗೆ ಗಾಂಧೀಜಿ ನೆನಪಾಗುತ್ತಾರೆ. ಸತ್ಯಾದರ್ಶಗಳ ನೆನಪಾಗುತ್ತದೆ. ಹಾದಿ-ಬೀದಿ ಗಲ್ಲಿಗಳಲ್ಲೆಲ್ಲಾ ಗಾಂಧೀಜಿ ಸತ್ಯ ಅಹಿಂಸೆ ಅಂತೆಲ್ಲಾ ಭಾಷಣ ಸಮಾರಂಭಗಳನ್ನು ಆಯೋಜಿಸಿ ನಾವು ಪಾವನರಾಗಿಬಿಟ್ಟೆವು ಅಂತ ಸಂಭ್ರಮಿಸತೊಡಗುತ್ತೇವೆ. ಅಷ್ಟಾದರೂ ಮಾಡುತ್ತೀವಲ್ಲಾ ಅಂತ ಅಂದುಕೊಂಡು ಸಮಧಾನಪಟ್ಟಕೊಳ್ಳಬಹುದಾ? ಖಂಡಿತಾ ಇಲ್ಲ. ಯಾಕೆಂದರೆ ಎಲ್ಲರಿಗೂ ತಿಳಿದಿರುವ ಹಾಗೆ ಈ ದಿನ ಎನ್ನುವಂತಾದ್ದು ಭಾರತ ದೇಶ ಕಂಡ ಅಪ್ರತಿಮ ಅದ್ಬುತ ನಾಯಕ ಮಾಜಿ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರೀಜಿಯವರ ಜನ್ಮದಿನವೂ ಹೌದು. ಆದರೂ ನಾವು ಅವರಿಗೆ ಸಲ್ಲಿಸುತ್ತಿರುವ ಗೌರವ ಮಾತ್ರ ಏನೇನೂ ಅಲ್ಲ ಅಂತೆನ್ನಿಸಿಬಿಡುತ್ತಿದೆ. ಅದು ನಾವು ಆ ದೇಶಭಕ್ತ ನಾಯಕನಿಗೆ ಮಾಡುತ್ತಿರುವ ಅವಮಾನವಲ್ಲದೆ ಬೇರೇನೂ? ಜನ್ಮದಿನ ಎಂದಲ್ಲ, ಶಾಸ್ತ್ರೀಜಿ ಯಾವ ಕಾಲಕ್ಕೂ ಸಲ್ಲಬಹುದಾದ ಒಂದು ಮೇರು ಆದರ್ಶವನ್ನು ಕೊಟ್ಟುಹೋದವರು.
ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಸರಳತೆಗೆ, ಸಜ್ಜನಿಕೆಗೆ ಒಂದು ಭಾಷ್ಯದಂತಿದ್ದವರು. ಪ್ರಾಮಾಣಿಕತೆಗೆ ಅನ್ವರ್ಥರಾಗಿದ್ದರು. ಧೀರತ್ವಕ್ಕೆ ಸಾಕ್ಷೀರೂಪಿಯಾಗಿ, ಬಹದ್ದೂರ್ ಎನ್ನುವ ಹೆಸರಿಗೆ ತಕ್ಕುದಾಗಿ ಬದುಕಿದವರು. ತೆರೆದ ಪುಟದಂತಿದ್ದ ಅವರ ಬದುಕಿನಲ್ಲಿ ಕಪಟ ಇರಲಿಲ್ಲ. ದೇಶಭಕ್ತಿ ದೇಶೋದ್ಧಾರದ ಆಲೋಚನೆಗಳನ್ನು ಹೊರತುಪಡಿಸಿ ವೈಯಕ್ತಿಕ ಆಸೆ ಅಕಾಂಕ್ಷೆಗಳಿಗೆ ಅಂಟಿಕೊಂಡವರೇ ಆಗಿರಲಿಲ್ಲ. ಅಂತಹ ಅಪರೂಪದ ಹೆಮ್ಮೆಯ ವ್ಯಕ್ತಿತ್ವವನ್ನು ಕೊನೇಪಕ್ಷ ವರುಷಕ್ಕೆ ಒಂದು ಬಾರಿಯಾದರೂ ನಾವು ನೆಟ್ಟಗೆ ನೆನಪು ಮಾಡಿಕೊಳ್ಳುತ್ತಿಲ್ಲವೆಂದರೆ ಬೇಸರವಾಗದೇ ಇದ್ದೀತೆ? ಅದು ನಮಗೆ ನಾವೇ ಮಾಡಿಕೊಳ್ಳುತ್ತಿರುವ ಅವಮಾನ ಅಂತ ಅನ್ನಿಸೋದಿಲ್ಲವಾ?
ಒಂದೆರಡು ಘಟನೆಗಳನ್ನು ಕೇಳಿ. ಅದು ಶಾಸ್ತ್ರೀಜಿ ಪ್ರಧಾನಿಯಾದ ಹೊತ್ತು. ಆ ಸುದ್ದಿ ತಿಳಿಯುತ್ತಿದ್ದಂತೆ ಶಾಸ್ತ್ರೀಜಿಯವರ ಮಗ ಹರಿಕೃಷ್ಣ ಕೆಲಸ ಮಾಡುತ್ತಿದ್ದ ಅಶೋಕ್ ಲೆಲ್ಯಾಂಡ್ ಕಂಪೆನಿ ಹರಿಕೃಷ್ಣ ಅವರಿಗೆ ಒಂದೇ ಸಲಕ್ಕೆ ನಾಲ್ಕನೇ ಹಂತದ ಬಡ್ತಿ ನೀಡಿ ಬಿಟ್ಟಿತ್ತು. ನಾಲ್ಕೈದು ದಿನಗಳ ಬಳಿಕ ಶಾಸ್ತ್ರೀಜಿ ಬಿಡುವಾಗಿದ್ದಾಗ ಹರಿಕೃಷ್ಣ ಈ ವಿಷಯವನ್ನು ಅವರಿಗೆ ತಿಳಿಸಿದ. ಶಾಸ್ತ್ರೀಜಿಯವರಿಗೆ ಕಂಪೆನಿಯ ಆಶಯ ತಿಳಿದುಹೋಗಿತ್ತು. ಅವರು ಹರಿಕೃಷ್ಣನಿಗೆ ಹೇಳಿದ್ದರು. ನೋಡು ಹರಿ, ಇದು ನಿನ್ನ ಕೆಲಸಕ್ಕೆ ಸಿಕ್ಕಿದ ಯಶಸ್ಸಲ್ಲ. ನಾಳೆ ದಿನ ಇದನ್ನು ಆಧಾರವಾಗಿಟ್ಟುಕೊಂಡು ಕಂಪೆನಿಯವರು ನನ್ನನ್ನು ಅವರ ಕೆಲಸಕ್ಕಾಗಿ ಸಂಪರ್ಕಿಸಬಹುದು. ಅದು ನ್ಯಾಯಬದ್ಧವಾಗಿದ್ದರೂ ಜನರಿಗೆ ತಪ್ಪು ಸಂದೇಶ ಹೋಗುವ ಸಾಧ್ಯತೆ ಹೆಚ್ಚಿರುತ್ತದೆ. ದಯವಿಟ್ಟು ಆ ಕಂಪೆನಿಯನ್ನು ಬಿಟ್ಟು ಬೇರೆ ಕಡೆ ಕೆಲಸಕ್ಕೆ ಸೇರು. ಹರಿಕೃಷ್ಣ ಆ ಮಾತನ್ನು ಚಾಚೂತಪ್ಪದೆ ಪಾಲಿಸಿದ್ದ.
ಅದು ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿದ್ದಕ್ಕಾಗಿ ಶಾಸ್ತ್ರೀಜಿ ಜೈಲಿನಲ್ಲಿದ್ದ ಸಮಯ. ಮಗಳಿಗೆ ಆರೋಗ್ಯ ಹದಗೆಟ್ಟಿತ್ತು. ಸುದ್ದಿ ತಿಳಿದ ಶಾಸ್ತ್ರೀಜಿ ಹದಿನೈದು ದಿನಗಳ ಪೆರೋಲ್ ಮೇಲೆ ಬಿಡುಗಡೆಗೊಂಡು ಮಗಳನ್ನು ನೋಡಲೆಂದು ರೈಲು ಹತ್ತಿದ್ದರು. ನಿಜಕ್ಕೆಂದರೆ ಮಗಳಿಗೆ ಅಗತ್ಯವಿರುವ ಔಷಧ ಹೊಂದಿಸಲು ಬೇಕಾದ ಹಣ ಕೂಡ ಶಾಸ್ತ್ರೀಜಿಯವರ ಬಳಿ ಇರಲಿಲ್ಲ. ಶಾಸ್ತ್ರೀಜಿ ಬರುವಷ್ಟರಲ್ಲಿ ಮಗಳು ಅನಾರೋಗ್ಯ ಉಲ್ಭಣಿಸಿ ತೀರಿಕೊಂಡಿದ್ದಳು. ಮನೆಗೆ ಬಂದವರೇ ಶಾಸ್ತ್ರೀಜಿ ಅವಳ ಅಂತ್ಯಕ್ರಿಯೆಗಳನ್ನು ಮುಗಿಸಿ ಮರುದಿನ ಜೈಲಿಗೆ ವಾಪಾಸು ಹೊರಟುಬಿಟ್ಟಿದ್ದರು. ಇನ್ನೂ ರಜೆ ಇದೆಯಲ್ಲ ಮುಗಿಸಿಕೊಂಡು ಹೋಗಿ ಎಂದ ಪತ್ನಿಯ ಮಾತಿಗೆ ನಾನು ರಜೆ ತೆಗೆದುಕೊಂಡು ಬಂದಿರುವ ಕಾರಣ ಈಗಿಲ್ಲ. ಹಾಗಾಗಿ ನಾನು ಜೈಲಿಗೆ ಹಿಂತಿರುಗಿ ಹೋಗಬೇಕಾದದ್ದು ನ್ಯಾಯ ಎಂದಿದ್ದರು. ಕುಂದಾಪ್ರ ಡಾಟ್ ಕಾಂ ಲೇಖನ.
ಒಂದೆರಡಲ್ಲ. ಶಾಸ್ತ್ರೀಜಿಯವರ ಇಡೀ ಜೀವನವೇ ಆದರ್ಶಗಳಿಂದ ಕೂಡಿತ್ತು. ನೆಹರು ಸಂಪುಟದಲ್ಲಿ ರೈಲ್ವೆ ಸಚಿವರಾಗಿದ್ದಾಗ ತಮಿಳ್ನಾಡಿನಲ್ಲಿ ನಡೆದ ರೈಲ್ವೆ ದುರಂತಕ್ಕೆ ನೈತಿಕ ಹೊಣೆ ಹೊತ್ತು ತತ್ ಕ್ಷಣ ರಾಜೀನಾಮೆ ನೀಡಿದ್ದು, ತನ್ನ ಹಿರಿಯ ಮಗಳ ಮದುವೆಯನ್ನು ಅತ್ಯಂತ ಸರಳವಾಗಿ ಮಾಡಿದ್ದು, ಅತೀ ಅನಿವಾರ್ಯ ಸರಕಾರಿ ಕೆಲಸಗಳಿಗಷ್ಟೇ ಸರ್ಕಾರಿ ವಾಹನವನ್ನು ಬಳಸುತ್ತಿದ್ದುದು, ಮಗ ಅನಧಿಕೃತವಾಗಿ ಒಮ್ಮೆ ತಮ್ಮ ಸರ್ಕಾರಿ ವಾಹನವನ್ನು ಚಲಾಯಿಸಿದ್ದಕ್ಕೆ ಅದರ ವೆಚ್ಚವನ್ನು ಸರ್ಕಾರಕ್ಕೆ ಸ್ವಯಂ ಆಸಕ್ತಿಯಿಂದ ಮರಳಿ ಪಾವತಿಸಿದ್ದು, ಪ್ರಧಾನಿಯಾಗಿದ್ದ ಕಾಲದಲ್ಲಿ ಮಕ್ಕಳ ಬಲವಂತಕ್ಕೆ ಮಣಿದು ಫಿಯೆಟ್ ಕಾರನ್ನು ಕಂತು ಸಾಲದ ರೂಪದಲ್ಲಿ ಖರೀದಿಸಿದ್ದು, (ಶಾಸ್ತ್ರೀಜಿಯವರು ತೀರಿಕೊಂಡಾಗ ಆ ಸಾಲದ ಬಾಬ್ತು ಇನ್ನೂ 4600 ರೂಪಾಯಿ ಇದ್ದಿತ್ತು. ಮುಂದೊಮ್ಮೆ ಲಲಿತಾರವರು ಅದನ್ನು ಹೇಳಿದಾಗ ಸತತ ಎರಡು ವರುಷಗಳ ತನಕವೂ ವಿವಿಧ ಮೊತ್ತಗಳ ಮನಿಯಾರ್ಡರುಗಳ ದೇಶದ ವಿವಿಧ ಭಾಗಗಳಿಂದ ಶಾಸ್ತ್ರೀಜಿಯವರ ಮನೆಗೆ ಬರುತ್ತಿದ್ದವಂತೆ. ಆದರೆ ಲಲಿತಾರವರು ಅದೆಲ್ಲವನ್ನೂ ಬಂದಹಾಗೆ ಮರಳಿಸಿದ್ದರು. ಆ ಮಹಾತಾಯಿಗೂ ನಮನಗಳಿರಲಿ) ತಮ್ಮ ಬಟ್ಟೆಯನ್ನು ತಾವೇ ತೊಳೆದುಕೊಳ್ಳುತ್ತಿದ್ದುದು, ಸರಳ ಉಡುಪು ಧರಿಸುತ್ತಿದ್ದುದು. ಇವೆಲ್ಲಾ ಶಾಸ್ತ್ರೀಜಿಯವರ ಸರಳತೆಗೆ ಪ್ರಾಮಾಣಿಕತೆ ಕೆಲವು ನಿದರ್ಶನಗಳಷ್ಟೇ.
ನಿಮಗೆ ಗೊತ್ತಿರಲಿ. ಶಾಸ್ತ್ರೀಜಿ 1961ರಲ್ಲಿ ಗೃಹ ಮಂತ್ರಿಯಾಗಿ ಆಯ್ಕೆಯಾದಾಗ ವಾಸಕ್ಕೆ ಅವರದ್ದೇ ಆದ ಒಂದು ಸ್ವಂತ ಮನೆ ಕೂಡ ಇರಲಿಲ್ಲ. ಆದರೆ ಅದೆಲ್ಲವನ್ನೂ ಮೀರಿದ ನಾಯಕತ್ವ ಗುಣ ಆಡಳಿತ ಸಾಮರ್ಥ್ಯ ಅವರಲ್ಲಿತ್ತು. ನಿಮಗೆ ಗೊತ್ತಿರಲೇ ಬೇಕಾದ ಸಂಗತಿಯೊದಿದೆ. 1962ರಲ್ಲಿ ನೆಹರು ಪ್ರಧಾನಿಯಾಗಿದ್ದ ಕಾಲದಲ್ಲಿ ಭಾರತ ಚೀನಾದೆದುರು ಅತ್ಯಂತ ಹೀನಾಯವಾಗಿ ಸೋತುಹೋಗಿತ್ತಲ್ಲ. ಅದನ್ನೇ ನೆನಪಿನಲ್ಲಿಟ್ಟುಕೊಂಡಿದ್ದ ಪಾಕಿಸ್ಥಾನದ ಜನರಲ್ ಅಯೂಬ್ ಖಾನ್ ಭಾರತವನ್ನು ಸೋಲಿಸುವುದು ಅತ್ಯಂತ ಸುಲಭ ಎನ್ನುವ ಲೆಕ್ಕಾಚಾರದಲ್ಲಿದ್ದ. ಹಾಗೆಂದೇ ನೆಹರೂ ನಿಧನದ ಬಳಿಕ ಅತ್ಯಂತ ಸಂಧಿಗ್ಧ ಕಾಲದಲ್ಲಿ ಪ್ರಧಾನಿಯಾದ ಶಾಸ್ತ್ರೀಜಿಯವರ ಸಾಮರ್ಥ್ಯವನ್ನು ಲಘುವಾಗಿ ಅಂದಾಜು ಮಾಡಿದ್ದ. ಆದರೆ ಶಾಸ್ತ್ರೀಜಿ ನೆಹರು ಅಲ್ಲವಲ್ಲ. ಪಾಕ್ ದಾಳಿಯ ಸಂಚನ್ನು ಮೊದಲೇ ಅರಿತಿದ್ದ ಶಾಸ್ತ್ರೀಜಿ ಶಸ್ತ್ರಗಳಿಗೆ ಉತ್ತರವನ್ನು ನಾವು ಶಸ್ತ್ರಗಳಿಂದಲೇ ಕೊಡುತ್ತೇವೆ ಎಂದು ನೇರವಾಗಿ ಹೇಳಿಬಿಟ್ಟಿದ್ದರು. ಸರಳ ಉಡುಪಿನ ಮೆಲುಧ್ವನಿಯ ಸಪೂರ ದೇಹದ ಈ ಶಾಸ್ತ್ರೀಜಿ ಅದೇನು ಮಾಡಿಯಾರು ಎನ್ನುವ ಅಹಮ್ಮಿನೊಂದಿಗೆ ಅಯೂಬ್ ಖಾನ್ 1965ರಲ್ಲಿ ತನ್ನ ಸೇನೆಯನ್ನು ಭಾರತದ ಮೇಲೆ ದಾಳಿಗಿಳಿಸಿದ್ದ.
ಅದೊಂದು ವಿಷಯ ಶಾಸ್ತ್ರೀಜಿಗೆ ತಿಳಿದಿದ್ದೇ ತಡ, ತತ್ ಕ್ಷಣ ಮೂರು ಸೇನೆಯ ಮುಖ್ಯಸ್ಥರೊಂದಿಗೆ ಚರ್ಚಿಸಿದ ಶಾಸ್ತ್ರೀಜಿ ನಿಮಿಷಗಳು ಕಳೆಯುವಷ್ಟರಲ್ಲಿ ಪಾಕಿಸ್ಥಾನದ ಮೇಲೆ ಯುದ್ಧ ಘೋಷಿಸಿಬಿಟ್ಟಿದ್ದರು. ಅಷ್ಟೇ ಅಲ್ಲ ತಮ್ಮ ಧೀರೋದಾತ್ತ ನಡೆನುಡಿಗಳ ಮೂಲಕ ಸೈನಿಕರಲ್ಲಿ ಉತ್ಸಾಹವನ್ನು ತುಂಬಿದರು. ಈ ಮಧ್ಯೆ ಚೀನಾ ಮಧ್ಯಪ್ರವೇಶಿಸುವ ಬೆದರಿಕೆಯೊಡ್ಡಿತು. ಶಾಸ್ತ್ರೀಜಿ ಕ್ಯಾರೇ ಅನ್ನಲಿಲ್ಲ. ಅದೇ ಹೊತ್ತಿನಲ್ಲಿ ದೇಶದಲ್ಲಿ ಆಹಾರದ ಕೊರತೆಯ ಸಮಸ್ಯೆ ಕಾಣಿಸಿತ್ತು. ದೇಶವನ್ನುದ್ದೇಶಿಸಿ ಮಾತನಾಡಿದ ಶಾಸ್ತ್ರೀಜಿ ದೇಶಕ್ಕಾಗಿ ಒಂದು ಹೊತ್ತು ಉಪವಾಸ ಮಾಡುವಂತೆ ಇಡೀ ದೇಶವಾಸಿಗಳಿಗೆ ಕರೆ ನೀಡಿ ತಾವು ಅದನ್ನು ಪಾಲಿಸಿಬಿಟ್ಟರಲ್ಲಾ ಮತ್ತು ಅದೊಂದು ಕರೆಗೆ ಇಡೀ ದೇಶ ಸ್ಪಂದಿಸಿದ ರೀತಿ ಇದೆಯಲ್ಲಾ ಅದು ಯಾವತ್ತಿಗೂ ಒಂದು ರೋಮಾಂಚಕಾರಿ ಇತಿಹಾಸ. ಒಬ್ಬ ನಾಯಕನ ನೈತಿಕತೆ ಸರಳತೆ ಅನ್ನುವಂತಾದ್ದು ಜನರ ಮನಸಿನ ಮೇಲೆ ಅದೆಷ್ಟು ಮಹತ್ತರ ಪರಿಣಾಮ ಬೀರಬಲ್ಲುದು ಎನ್ನುವುದಕ್ಕೆ ಅದೊಂದು ದೊಡ್ಡ ನಿದರ್ಶನವಾಗಿತ್ತು. ಕುಂದಾಪ್ರ ಡಾಟ್ ಕಾಂ ಲೇಖನ.
ಇತ್ತ ಪಾಕಿಸ್ಥಾನದ ಸೇನೆ ಕಾಶ್ಮೀರವನ್ನು ವಶಪಡಿಸಿಕೊಳ್ಳುವತ್ತ ಪ್ರಯತ್ನದಲ್ಲಿದ್ದರೆ ಶಾಸ್ತ್ರೀಜಿಯವರ ಸಮರ್ಥ ನಾಯಕತ್ವದ ಸ್ಫೂರ್ತಿಯಲ್ಲಿದ್ದ ನಮ್ಮ ಸೇನೆ ನೇರವಾಗಿ ಪಾಕಿಸ್ಥಾನದ ಲಾಹೋರ್‌ನೊಳಕ್ಕೆ ನುಗ್ಗಿಬಿಟ್ಟಿತ್ತು. ಅಯೂಬ್ ಖಾನ್ ಬೆವರಿ ನೀರಾಗಿದ್ದ. ಅಂತೂ ಕೊನೆಗೆ ವಿಶ್ವಸಂಸ್ಥೆಯ ಮಧ್ಯ ಪ್ರವೇಶದಿಂದಾಗಿ ಅದಾಗಲೇ ಯುದ್ಧದಲ್ಲಿ ಮೇಲುಗೈ ಸಾಧಿಸಿದ್ದ ಭಾರತಕ್ಕೆ ಕದನವಿರಾಮ ಘೋಷಿಸುವುದು ಅನಿವಾರ‍್ಯವಾಯಿತು. ಆದರೆ ಅಷ್ಟರಲ್ಲಾಗಲೇ ಶಾಸ್ತ್ರೀಜಿಯವರ ದಿಟ್ಟತನ ಎಂತಾದ್ದು ಎನ್ನುವುದು ಇಡೀ ಜಗತ್ತಿಗೇ ತಿಳಿದುಹೋಗಿತ್ತು. ಶಾಸ್ತ್ರೀಜಿ ಜೈ ಜವಾನ್ ಜೈ ಕಿಸಾನ್ ಎಂದರು. ನಮ್ಮ ಸೈನಿಕರು ಶಾಸ್ತ್ರೀಜಿಗೆ ಉಘೆ ಎಂದಿದ್ದರು.
ಹೌದು. ಆದರೆ ಮುಂದಾಗಿದ್ದು ಮಾತ್ರ ಈ ದೇಶ ಕಂಡ ಅತೀ ದೊಡ್ಡ ದುರಂತ. ಒಬ್ಬ ಸಾವರ್ಕರ್ ಮಾತ್ರ ಆ ದುರಂತವನ್ನು ಮೊದಲೇ ಗ್ರಹಿಸಿ ಶಾಸ್ತ್ರೀಜಿಯವರನ್ನು ತಾಷ್ಕೆಂಟ್ ಗೆ ಹೋಗದಂತೆ ಕೇಳಿಕೊಂಡಿದ್ದರು. ಅದು.1966ರ ಜನವರಿ 11. ಆಗಿನ ರಷ್ಯಾದ ಭಾಗವಾಗಿದ್ದ ಉಜ್ಭೇಕಿಸ್ಥಾನದ ತಾಷ್ಕೆಂಟಿನಲ್ಲಿ ತಾಷ್ಕೆಂಟ್ ಒಪ್ಪಂದಕ್ಕೆ ಸಹಿ ಬಿದ್ದಿತ್ತು. ಅಯೂಬ್ ಖಾನ್ ಶಾಸ್ತ್ರೀಜಿಯವರ ಷರತ್ತುಗಳನ್ನು ಮರುಮಾತಿಲ್ಲದೆ ಒಪ್ಪಿಕೊಂಡಿದ್ದ. ಅದೇ ದಿನ ಬೆಳಿಗ್ಗೆ 1.32ಕ್ಕೆ ಶಾಸ್ತ್ರೀಜಿ ಹೃದಯಘಾತದಿಂದ ನಿಧನರಾದರೆಂಬ ಸುದ್ದಿ ಬರಸಿಡಿಲಿನಂತೆ ಬಂದೆರಗಿತ್ತು. ಇಡೀ ಭಾರತ ಶೋಕ ಸಾಗರದಲ್ಲಿ ಮುಳುಗಿತ್ತು. ಜನ ಆ ಸುದ್ದಿಯನ್ನು ನಂಬಲಿಲ್ಲ. ನಂಬುವುದಕ್ಕೆ ಸಾಧ್ಯವೂ ಇರಲಿಲ್ಲ!
ಮರುದಿನ ಭಾರತಕ್ಕೆ ಬಂದಿದ್ದ ಶಾಸ್ತ್ರೀಜಿಯವರ ದೇಹ ನೀಲಿಗಟ್ಟಿತ್ತು. ಶಾಸ್ತ್ರೀಜಿಯ ಪತ್ನಿ ಆ ಕ್ಷಣವೇ ಹೇಳಿದ್ದರು. ಇದು ಸಹಜ ಸಾವಲ್ಲ ಎಂದು. ಶಾಸ್ತ್ರೀಜಿಯವರ ಡೈರಿ ಕಾಣೆಯಾಗಿತ್ತು. ಆ ಸಂದೇಹಕ್ಕೆ ಉತ್ತರ ಕಂಡುಕೊಳ್ಳುವ ಬಯಕೆ ಆಗಿನ ರಾಷ್ಟ್ರೀಯ ಕಾಂಗ್ರೆಸ್ ನಾಯಕರಿಗೆ ಇರಲಿಲ್ಲ. ಹಾಗೆ ಅವತ್ತು ಪ್ರಯತ್ನ ಪಟ್ಟಿದ್ದಿದ್ದರೆ ಇವತ್ತು ಅದೇ ಕಾಂಗ್ರೆಸ್ ಇರುತಿತ್ತಾ? ಗೊತ್ತಿಲ್ಲ. ಕೊನೆಗೊಂದು ಪೋಸ್ಟ್ ಮಾರ್ಟಂ ಕೂಡ ನಡೆಸದೆ ಶಾಸ್ತ್ರೀಜಿಯ ದೇಹವನ್ನು ದಫನ ಮಾಡಿಬಿಟ್ಟರು. ರಷ್ಯಾದಲ್ಲಿನ ಭಾರತೀಯ ರಾಯಭಾರಿ ಕಛೇರಿ ಶಾಸ್ತ್ರೀಜಿಯ ಸಾವಿನ ಬಗೆಗೆ ದಿವ್ಯ ನಿರ್ಲಕ್ಷ್ಯ ವಹಿಸಿತ್ತು. ಶಾಸ್ತ್ರೀಜಿ ತಂಗಿದ್ದ ಹೋಟೆಲ್ ಸೇವಕನ ನಾಮಕಾವಸ್ತೆ ವಿಚಾರಣೆ ನಡೆಸಿ ಬಿಡುಗಡೆ ಮಾಡಲಾಯಿತು. ಲಲಿತಾ ಶಾಸ್ತ್ರಿ ಪದೇ ಪದೇ ಕೇಳಿಕೊಂಡರೂ ಅವನನ್ನು ಭೇಟಿಯಾಗಲು ನಿರಾಕರಿಸಲಾಯಿತು. ಒಂದು ದೇಶದ ಪ್ರಧಾನಿ ವಿದೇಶದಲ್ಲಿ ಅನುಮಾನಸ್ಪದವಾಗಿ ಸಾವಿಗೀಡಾದ ಪ್ರಕರಣವನ್ನು ಅದು ಏನೇನೂ ಅಲ್ಲವೆಂಬಂತೆ ಇಷ್ಟೊಂದು ನಿರ್ಲಜ್ಜರಾಗಿ, ಭಾವಶೂನ್ಯರಾಗಿ ನಮ್ಮ ಅಂದಿನ ನಾಯಕರುಗಳೆನ್ನಿಸಿಕಂಡವರು ಪರಿಗಣಿಸಿದರು ಎಂದರೆ ಎಂತವರ ಮನಸ್ಸಿನಲ್ಲಾದರೂ ಸಂಶಯ ಹುಟ್ಟದಿರಲು ಸಾಧ್ಯವೇ? ಕುಂದಾಪ್ರ ಡಾಟ್ ಕಾಂ ಲೇಖನ.
ನಿಮಗೆ ಗೊತ್ತಿರಲಿ. ಇದೇ ನಾಯಕರು ಶಾಸ್ತ್ರೀಜಿಯವರ ಮೃತ ದೇಹವನ್ನು ಗಾಂಧಿ, ನೆಹರೂರವರನ್ನ ದಫನ ಮಾಡಿದ್ದ ಸ್ಥಳದಲ್ಲಿ ದಫನ ಮಾಡುವುದಕ್ಕೂ ವಿರೋಧಿಸಿದ್ದರು. ಶಾಸ್ತ್ರೀಜಿಯ ಪತ್ನಿ ಲಲಿತಾಶಾಸ್ತ್ರಿ ಸತ್ಯಾಗ್ರಹದ ಬೆದರಿಕೆಯೊಡ್ಡಿದ ಬಳಿಕವಷ್ಟೇ ಅದಕ್ಕೆ ಅನುಮತಿ ನೀಡಲಾಯಿತು. ಶಾಸ್ತ್ರೀಜಿಯವರ ಸಮಾಧಿಯ ಮೇಲೆ ಜೈ ಜವಾನ್ ಜೈ ಕಿಸಾನ್ ಘೋಷಣೆ ಬರೆಸುವುದಕ್ಕೂ ಹಲವು ನಾಯಕರು ವಿರೋಧಿಸಿದ್ದರು. ಎ೦ತಹ ವಿಪರ‍್ಯಾಸ ನೋಡಿ. ಆಗಲೂ ಲಲಿತಾ ಶಾಸ್ತ್ರಿಯವರು ಹಠ ಹಿಡಿದ ಬಳಿಕವಷ್ಟೆ ಆ ವಾಕ್ಯವನ್ನು ಬರೆಸಲಾಯಿತು. ಅ೦ತಹ ಧೀಮಂತನಿಗೆ ಅದೆಂತಹ ಗೌರವ ಕೊಟ್ಟರು ನೋಡಿ! ಆವತ್ತೇ ಅವರ ಕೊರಳಪಟ್ಟಿ ಹಿಡಿದು ಯಾರಾದರೊಬ್ಬರು ಕೇಳಬೇಕಿತ್ತು. ದೇಶಭಕ್ತಿ, ಆಡಳಿತ, ನಾಯಕತ್ವ ಅನ್ನುವಂತಾದ್ದೆಲ್ಲಾ ಒಂದು ವಂಶದ ಸೊತ್ತೇನು?
ಸಾಕಷ್ಟು ಒತ್ತಡದ ಬಳಿಕ ಶಾಸ್ತ್ರೀಜಿಯ ಸಾವಿನ ಕುರಿತು ತನಿಖೆ ನಡೆಸಲು ಕಾಟಾಚಾರಕ್ಕೊಂದು ಸಮಿತಿ ನೇಮಕವಾಗಿದ್ದು, 1977ರಲ್ಲಿ ವಿಚಾರಣೆಗೆಂದು ಆಗಮಿಸುವ ವೇಳೆ 1966ರಲ್ಲಿ ಶಾಸ್ತ್ರೀಜಿ ಜೊತೆಗಿದ್ದ ವೈದ್ಯ ಆರ್ ಎನ್ ಛುಗ್ ಮತ್ತು ಆಪ್ತ ಕಾರ‍್ಯದರ್ಶಿ ರಾಮ್ ನಾಥ್ ಅವರು ಒಂದೇ ತೆರನಾದ ಎರಡು ಪ್ರತ್ಯೇಕ ಅಪಘಾತಗಳಲ್ಲಿ ಸಾವನ್ನಪ್ಪಿದ್ದು, ಸಮಿತಿಯ ವರದಿಗಳು ಈವರೆಗೆ ಕಾಣಸಿಗದಿರುವುದು, ಶಾಸ್ತ್ರೀಜಿಯವರಿಗೆ ಸಂಬಂಧಿಸಿದ ಫೈಲುಗಳನ್ನು ವಿದೇಶಿ ರಾಜತಾಂತ್ರಿಕ ಸಂಬಂಧಗಳ ನೆಪವೊಡ್ಡಿ ಬಯಲುಗೊಳಿಸಲು ಕಳೆದ ಯುಪಿಎ ಸರಕಾರ ಹಲವಾರು ಬಾರಿ ನಿರಾಕರಿಸಿರುವುದು… ಇವುಗಳನ್ನೆಲ್ಲಾ ನೋಡಿದರೆ ಶಾಸ್ತ್ರೀಜಿಯವರ ಸಾವಿನ ಹಿಂದೆ ಬಲವಾದ ಪಿತೂರಿ ನಡೆದಿರುವ ಸಾಧ್ಯತೆಗಳನ್ನು ಯಾವ ಕಾರಣಕ್ಕೂ ತಳ್ಳಿಹಾಕುವಂತಿಲ್ಲ.
ಇದೀಗ ಶಾಸ್ತ್ರೀಜಿಯವರ ಸಾವಿನ ರಹಸ್ಯದ ಕುರಿತಂತೆ ಕಡತಗಳನ್ನು ಬಹಿರಂಗಪಡಿಸಲು ಆಗ್ರಹಿಸಿ ಅವರ ಮನೆಯವರು ಕೇಂದ್ರ ಸರಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ. ಅದು ಕೇವಲ ಅವರೊಬ್ಬರ ಮನವಿಯಾಗಬಾರದು. ಪ್ರತಿಯೊಬ್ಬ ಭಾರತೀಯರ ಮನವಿಯಾಗಬೇಕಿದೆ. ಆ ಬಗೆಗೊಂದು ದೊಡ್ಡ ಹೋರಾಟದ ಧ್ವನಿ ಮೊಳಗಬೇಕಿದೆ. ಅಂತಹ ಅಪ್ರತಿಮ ನಾಯಕನ ಸಾವು ನಿಜಕ್ಕೂ ಆಗಿದ್ದು ಹೇಗೆ ಎಂದು ತಿಳಿದುಕೊಳ್ಳುವ ಹಕ್ಕು ನಮ್ಮೆಲ್ಲರದ್ದು ಕೂಡ. ನೇತಾಜಿ ಮತ್ತು ಶಾಸ್ತ್ರೀಜಿ ಇಬ್ಬರ ಸಾವಿನ ರಹಸ್ಯಗಳು ಬಹಿರಂಗವಾಗಬೇಕಿದೆ. ಇನ್ನೂ ಎಷ್ಟು ವರುಷ ಅಂತ ಯಾರೋ ತಿರುಚಿ ಬರೆದಿಟ್ಟ ಸುಳ್ಳುಗಳನ್ನು ಇತಿಹಾಸ ಅಂತ ಭೋಧಿಸುತ್ತೀರಿ?
ಕೊನೆಗೊಂದು ಮಾತು: ಶಾಸ್ತ್ರೀಜಿಯವರೇ ನಿಮ್ಮ ಅಪರೂಪದ ಅಧ್ಭುತ ಅಪ್ರತಿಮ ಆದರ್ಶ ವ್ಯಕ್ತಿತ್ವದ ಬಗೆಗೆ ಗೊತ್ತಿದ್ದೂ ಗೊತ್ತಿದ್ದೂ ಅದನ್ನು ಹಿನ್ನಲೆಯಲ್ಲಿಟ್ಟು ಯಾರೋ ಒಂದಷ್ಟು ವ್ಯಕ್ತಿಗಳನ್ನೇ ನಮ್ಮ ದೇಶ ಕಟ್ಟಿದ ಮಹಾನ್ ನೇತಾರರು ಅನ್ನುವಂತೆ ಬಿಂಬಿಸಿಕೊಂಡು ಅವರುಗಳನ್ನು ಮಾತ್ರ ಗೌರವಿಸಿಕೊಂಡು ಇಷ್ಟು ವರುಷಗಳ ಕಾಲವೂ ನಿಮ್ಮನ್ನು ಭಾರತರತ್ನಕ್ಕಷ್ಟೇ ಸೀಮಿತಗೊಳಿಸಿ ನಾವು ನಿಮಗೆ ಸಲ್ಲಬೇಕಾದ ನಿಜವಾದ ಗೌರವವನ್ನು ನೀಡದೆ ಸುಮ್ಮನಿದ್ದುಬಿಟ್ಟೇವಲ್ಲ. ದಯವಿಟ್ಟು ನಮ್ಮನ್ನು ಕ್ಷಮಿಸಿಬಿಡಿ ಶಾಸ್ತ್ರೀಜಿ. ನಿಮಗೆ ಚಿರನಮನಗಳು.