ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಪಠ್ಯೇತರ ಪುಸ್ತಕಗಳ ಓದು ನಮ್ಮ ಜ್ಞಾನದ ಪರಿಧಿಯನ್ನು ಹೆಚ್ಚಿಸುವುದರ ಜೊತೆಗೆ ಆತ್ಮವಿಶ್ವಾಸವನ್ನು ಕೂಡ ನೀಡುತ್ತದೆ ಎಂದು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಹಿಂದಿ ಉಪನ್ಯಾಸಕರಾದ ನಾರಾಯಣ ನಾಯ್ಕ್ ಅಭಿಪ್ರಾಯ ಪಟ್ಟರು.
ಅವರು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪಡೆಯುಪರ್ವ ಕಾಲೇಜಿನ ರೋಟರಿ ಸಭಾಂಗಣದಲ್ಲಿ ಎಸ್. ವಿ ಕಾಮರ್ಸ್ ಕ್ಲಬ್ ಮತ್ತು ಗಂಗೊಳ್ಳಿಯ ಸಂಜೀವ ಪಾರ್ವತಿ ಪ್ರಕಾಶನದ ಜಂಟಿ ಆಶ್ರಯದಲ್ಲಿ ನಡೆದ ಲೇಖಕ ನರೇಂದ್ರ ಎಸ್. ಗಂಗೊಳ್ಳಿ ಅವರ ಅಂಕಣ ಬರಹಗಳ ಸಂಕಲನ ‘ಅವಳ ನಿಟ್ಟುಸಿರು’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಕೃತಿಯನ್ನು ಅನಾವರಣಗೊಳಿಸಿ ಮಾತನಾಡಿದರು.

ಸಮಾರಂಭದಲ್ಲಿ ಉಪಸ್ಥಿತರಿದ್ದ ಪ್ರಯೋಗಾಲಯ ಸಹಾಯಕರಾದ ವಿಜಯಕುಮಾರ್ ಎನ್. ಮಾತನಾಡಿ, ಸೃಜನಶೀಲ ಸಾಹಿತ್ಯ ಇಂದಿನ ಅಗತ್ಯ. ಉತ್ತಮ ವಿಚಾರಗಳ ಓದು ನಮ್ಮ ವ್ಯಕ್ತಿತ್ವವನ್ನು ಮೇಲ್ಮಟ್ಟಕ್ಕೆ ಕೊಂಡೊಯ್ಯುತ್ತದೆ. ಅವಳ ನಿಟ್ಟುಸಿರು ಕೃತಿ ಈ ನಿಟ್ಟಿನಲ್ಲಿ ಉತ್ತಮ ಕೊಡುಗೆ ಎಂದು ಹೇಳಿದರು.
ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಕವಿತಾ ಎಂ.ಸಿ ಅಧ್ಯಕ್ಷತೆ ವಹಿಸಿದ್ದರು. ಲೇಖಕ ನರೇಂದ್ರ ಎಸ್. ಗಂಗೊಳ್ಳಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಿದ್ಯಾರ್ಥಿ ಪ್ರತಿನಿಧಿ ಆದಿತ್ಯ ಎಸ್. ಪೂಜಾರಿ ಸ್ವಾಗತಿಸಿ, ಅಭಿಜ್ಞಾ ಖಾರ್ವಿ ನಿರೂಪಿಸಿ, ಆಯಿಷಾ ನಿಫಾ ವಂದಿಸಿದರು.










