ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಗದ್ದೆ ಕೆಲಸಕ್ಕೆಂದು ತೆರಳಿದ್ದ ಯುವಕ ಕೆರೆಯಲ್ಲಿ ಶವವಾಗಿ ಪತ್ತೆಯಾದ ಘಟನೆ ತಾಲೂಕಿನ ಕಾಲ್ತೋಡು ಗ್ರಾಮದ ಕೂರ್ಸಿ ಎಂಬಲ್ಲಿ ನಡೆದಿದೆ. ಕೂರ್ಸಿಯ ಕಾರ್ತಿಕ್ ಆಚಾರ್ (26) ಮೃತ ಯುವಕ.
ಬುಧವಾರ ಮಧ್ಯಾಹ್ನ ಗದ್ದೆ ಕೆಲಸಕ್ಕೆ ಹೋಗುವುದಾಗಿ ತಿಳಿಸಿ ಮನೆಯಿಂದ ಯುವಕ ಹೊರಟಿದ್ದು ವಾಪಾಸ್ ಮನೆಗೆ ಬಾರದೇ ಇದ್ದಿದ್ದರಿಂದ ಸಹೋದರರು ಗದ್ದೆ, ತೋಟದ ಬಳಿ ಹೋಗಿ ಹುಡುಕಾಡಿದ್ದಾರೆ. ಈ ವೇಳೆ ಗದ್ದೆಯ ಬಳಿ ಇರುವ ಕೆರೆಯಲ್ಲಿ ಕಾರ್ತಿಕ್ ಅವರ ಚಪ್ಪಲಿ ನೀರಿನಲ್ಲಿ ತೇಲುತ್ತಿದ್ದುದ್ದನ್ನು ನೋಡಿ ಅನುಮಾನಗೊಂಡು ಅಗ್ನಿಶಾಮಕ ದಳದವರಿಗೆ ತಿಳಿಸಿದ್ದು ಅಗ್ನಿಶಾಮಕ ದಳದವರು ಸ್ಥಳಕ್ಕೆ ಬಂದು ಕೆರೆಯಲ್ಲಿ ಹುಡುಕಾಡಿದಾಗ ಕಾರ್ತಿಕನ ದೇಹ ಕೆರೆಯಲ್ಲಿ ಸಂಜೆ ವೇಳೆಗೆ ದೊರಕಿದೆ.
ಕಾರ್ತಿಕ್ ಮೃತ ದೇಹವನ್ನು ನೀರಿನಿಂದ ಮೇಲಕ್ಕೆತ್ತಿ ಮರಣೋತ್ತರ ಪರೀಕ್ಷೆಗೆ ರವಾನಿಸಲಾಯಿತು. ಕೃಷಿ ಕೆಲಸದ ಬಗ್ಗೆ ಗದ್ದೆ ಕೆಲಸಕ್ಕೆ ಹೋದ ಕಾರ್ತಿಕ್ ಗದ್ದೆಯ ಬಳಿ ಇರುವ ಕೆರೆಯ ದಡದಲ್ಲಿರುವ ಕಾಲುದಾರಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗಲೋ ಅಥವಾ ಬರುತ್ತಿರುವಾಗಲೋ ಆಕಸ್ಮಿಕವಾಗಿ ಕಾಲು ಜಾರಿ, ಕೆರೆಯ ನೀರಿಗೆ ಬಿದ್ದು, ನೀರಿನಲ್ಲಿ ಮುಳುಗಿ ಉಸಿರುಗಟ್ಟಿ ಮೃತಪಟ್ಟಿರುವ ಅನುಮಾನವನ್ನು ಕುಟುಂಬಿಕರು ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.