ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು,ಅ.9: ಕಾಲುಸಂಕದಿಂದ ಆಯತಪ್ಪಿ ಹಳ್ಳಕ್ಕೆ ಬಿದ್ದ ಬಾಲಕಿ ಸನ್ನಿಧಿ ಮೃತದೇಹ ಪತ್ತೆಗಾಗಿ, ಮಂಗಳವಾರ ಸಂಜೆಯ ತನಕವೂ ಬಾಲಕಿ ಹಳ್ಳಕ್ಕೆ ಬಿದ್ದಿದ್ದ ಸ್ಥಳ ಹಾಗೂ ಎಡಮಾವಿನ ಹೊಳೆಯಲ್ಲಿ ಶೋಧಕಾರ್ಯ ನಡೆಸಿದ್ದು, ಯಾವುದೇ ಸುಳಿವು ಲಭ್ಯವಾಗಿಲ್ಲ
ಶೋಧಕಾರ್ಯದಲ್ಲಿ ಮುಳುಗು ತಜ್ಞರು:
ಬಾಲಕಿ ಸನ್ನಿಧಿಗಾಗಿ ಹೊಳೆಯಲ್ಲಿ ಸೋಮವಾರ ಸಂಜೆ ಹಾಗೂ ಮಂಗಳವಾರ ಇಡೀ ದಿನ ಶೋಧ ಕಾರ್ಯ ನಡೆಸಲಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿಗಳು ಹಾಗೂ ಗಂಗೊಳ್ಳಿಯ 8 ಮಂದಿ ಮೀನುಗಾರರು ನದಿಯಲ್ಲಿ ಮುಳುಗಿ ಮೃತದೇಹ ಹುಡುಕಾಟ ನಡೆಸಿದ್ದಾರೆ. ಮುಳುಗುತಜ್ಞ ಮಂಜುನಾಥ ಕನ್ನೇರಿ ಕೂಡ ಸಂಶಯವಿರುವ ಭಾಗದಲ್ಲಿ ಶೋಧಕಾರ್ಯ ನಡೆಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಬೈಂದೂರು ತಹಶೀಲ್ದಾರ್, ಬೈಂದೂರು ಅಗ್ನಿಶಾಮಕ ದಳದ ಸಿಬ್ಬಂದಿಗಳು ಹಾಗೂ ಬೈಂದೂರು ಪೊಲೀಸ್ ಸಿಬ್ಬಂದಿಗಳು ಸ್ಥಳದಲ್ಲಿಯೇ ಇದ್ದು ಕಾರ್ಯಾಚರಣೆ ಮುಂದುವರಿಸಿದ್ದಾರೆ.
ಜಿಲ್ಲಾಧಿಕಾರಿ ಭೇಟಿ:
ಉಡುಪಿ ಜಿಲ್ಲಾಧಿಕಾರಿ ಕೂರ್ಮರಾವ್ ಎಂ. ಬಾಲಕಿ ಕುಟುಂಬಿಕರನ್ನು ಭೇಟಿಯಾಗಿ ಸಾಂತ್ವಾನ ಹೇಳಿದ್ದಾರೆ. ಘಟನಾ ಸ್ಥಳಕ್ಕೆ ತೆರಳಿ ಕಾರ್ಯಾಚರಣೆಯನ್ನು ಚುರುಕುಗೊಳಿಸುವಂತೆ ತಿಳಿಸಿದ್ದರು. ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ಸಹಾಯಕ ಕಮೀಷನರ್ ರಾಜು ಕೆ. ಕುಟುಂಬಿಕರನ್ನು ಭೇಟಿಯಾಗಿ ಸಾಂತ್ವಾನ ಹೇಳಿದ್ದಾರೆ.
ಜನಪ್ರತಿನಿಧಿಗಳ ವಿರುದ್ಧ ಸಾರ್ವಜನಿಕರ ಆಕ್ರೋಶ:
ಕಾಲ್ತೋಡು ಸೇರಿದಂತೆ ವಿವಿಧ ಗ್ರಾಮಗಳಲ್ಲಿರುವ ಮರದ ಕಾಲುಸಂಕಗಳನ್ನು ತೆರವುಗೊಳಿಸಿ ಕಿರುಸೇತುವೆ ನಿರ್ಮಿಸುವಂತೆ ಸಾಕಷ್ಟ ಭಾರಿ ಮಾಧ್ಯಮಗಳು ವರದಿ ಪ್ರಕಟಿಸಿದ್ದವು. ಹತ್ತಾರು ವರ್ಷಗಳಿಂದ ಸಾರ್ವಜನಿಕರೂಮನವಿ ಸಲ್ಲಿಸುತ್ತಲೇ ಬರುತ್ತಿದ್ದಾರೆ. ಆದಾಗ್ಯೂ ಜನಪ್ರತಿನಿಧಿಗಳು ಸ್ಪಂದಿಸಿಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರು ಆಕ್ರೋಶ ಹೊರಹಾಕುತ್ತಿದ್ದಾರೆ. ಮಳೆಗಾಲದಲ್ಲಿ ಜನರು ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಸಂಚರಿಸಬೇಕಾದ ಸ್ಥಿತಿ ಹಲವೆಡೆ ಇದೆ. ಸರಕಾರದ ಪ್ರತಿನಿಧಿಗಳು ಭರವಸೆ ನೀಡಿ ತೇಪೆ ಹಚ್ಚುವ ಕಾರ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಕಾಲ್ತೋಡು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಅಧಿಕ ಸಂಖ್ಯೆಯ ಕಾಲುಸಂಕವಿದ್ದರೂ ಗ್ರಾಮ ಪಂಚಾಯತ್ ಜಿಲ್ಲಾ ಪಂಚಾಯತಿಯನ್ನು ಹಾಗೂ ಜಿಲ್ಲಾ ಪಂಚಾಯತಿ ಶಾಸಕರನ್ನು ಬೆರಳು ಮಾಡಿ ತೊರಿಸುತ್ತಿದೆ ಹೊರತು ಕಾಮಗಾರಿ ನಡೆದಿಲ್ಲ. ಚುನಾವಣೆ, ಅವಘಡಗಳು ಸಂಭವಿಸಿದಾಗ ಮಾತ್ರವೇ ಜನಪ್ರತಿನಿಧಿಗಳು ಎಚ್ಚೆತ್ತುಕೊಳ್ಳುವುದಾ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ:
► ಬೋಳಂಬಳ್ಳಿ: ಕಾಲುಸಂಕ ದಾಟುತ್ತಿದ್ದ ವಿದ್ಯಾರ್ಥಿನಿ ನೀರುಪಾಲು, ಬಾಲಕಿಗಾಗಿ ತೀವ್ರ ಶೋಧ – https://kundapraa.com/?p=61296 .
► ಹಳ್ಳಕ್ಕೆ ಬಿದ್ದು ನಾಪತ್ತೆಯಾದ ಬಾಲಕಿಗಾಗಿ ಮುಂದುವರಿದ ಶೋಧ, ಮನೆಯಲ್ಲಿ ಆಕ್ರಂದನ – https://kundapraa.com/?p=61302 .