ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು,ಅ.9: ಕಾಲುಸಂಕದಿಂದ ಆಯತಪ್ಪಿ ಹಳ್ಳಕ್ಕೆ ಬಿದ್ದ ಬಾಲಕಿ ಸನ್ನಿಧಿ ಮನೆಗೆ ಬುಧವಾರ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಅಂಗಾರ ಅವರು ಭೇಟಿ ನೀಡಿ ಕುಟುಂಬಿಕರಿಗೆ ಸಾಂತ್ವಾನ ಹೇಳಿದರು.
ಈ ಸಂದರ್ಭ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಮಲೆಗಾಡಿಗೆ ಹೊಂದಿಕೊಂಡಿರು ಪ್ರದೇಶಗಳಲ್ಲಿ ಹೆಚ್ಚು ಹಳ್ಳಗಳಿವೆ. ನಗೇಗಾ ಯೋಜನೆಯಡಿ ಕಾಲುಸೇತುವೆಗಳು ಅಗತ್ಯವಿರುವಲ್ಲಿ ನಿರ್ಮಿಸುವ ಕಾರ್ಯವನ್ನು ಮಾಡಲಾಗುವುದು ಎಂದರು.
ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಮಾತನಾಡಿ ಕಾಲ್ತೋಡು ಭಾಗದಲ್ಲಿ ಅತ್ಯಧಿಕ ಕಾಲುಸಂಕವಿದ್ದು, ಹಂತ ಹಂತವಾಗಿ ಕಾಲು ಸೇತುವೆ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಅವಘಡ ನಡೆದ ಕಾಲುಸಂಕಕ್ಕೂ ಅನುದಾನ ಮೀಸಲಿರಿಸಿದ್ದರೂ ಲೋಕೋಪಯೋಗಿ ಇಲಾಖೆಯ ವಿಳಂಬದಿಂದ ಕಾಮಗಾರಿ ನಡೆದಿರಲಿಲ್ಲ. ಅವರು ಸನ್ನಿಧಿ ಸಹೋದರಿಯನ್ನುಯನ್ನು ದತ್ತು ತೆಗೆದುಕೊಂಡು ಮುಂದಿನ ಶಿಕ್ಷಣದ ಹೊಣೆ ತಾನು ವಹಿಸಿಕೊಳ್ಳುವುದಾಗಿ ತಿಳಿಸಿದರು.
ಈ ಸಂದರ್ಭ ಬಿಜೆಪಿ ಜಿಲ್ಲಾಧ್ಯಕ್ಷ ಸುರೇಶ್ ನಾಯಕ್, ಬೈಂದೂರು ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಶರತ್ ಕುಮಾರ್ ಶೆಟ್ಟಿ ಸೇರಿದಂತೆ ಇನ್ನಿತರರು ಇದ್ದರು.
ಮುಂದುವರಿದ ಶೋಧ ಕಾರ್ಯ:
ಬಾಲಕಿ ಸನ್ನಿಧಿಗಾಗಿ ಹೊಳೆಯಲ್ಲಿ ಸೋಮವಾರ ಸಂಜೆ, ಮಂಗಳವಾರ ಇಡೀ ದಿನ ಶೋಧ ಕಾರ್ಯ ನಡೆಸಲಾಗಿದ್ದರೂ ಯಾವುದೇ ಕುರುಹು ಪತ್ತೆಯಾಗಿಲ್ಲ. ಬುಧವಾರ ಕೂಡ ಕಾರ್ಯಾಚರಣೆ ಮುಂದುವರಿದಿದ್ದು, 200ಕ್ಕೂ ಅಧಿಕ ಮೀನುಗಾರರು ವಿವಿಧ ತಂಡಗಳನ್ನು ಮಾಡಿಕೊಂಡು ಹುಡುಕಾಟ ನಡೆಸುತ್ತಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿಗಳು ಹಾಗೂ ಪೊಲೀಸ್ ಸಿಬ್ಬಂದಿಗಳು ಸ್ಥಳದಲ್ಲಿದ್ದಾರೆ.