ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಹಾಗೂ ಯು. ಬಿ. ಶೆಟ್ಟಿ ಅಂಗ್ಲ ಮಾಧ್ಯಮ ಶಾಲೆಯ ಸಹಯೋಗದಲ್ಲಿ ಶನಿವಾರ ವಲಯ ಮಟ್ಟದ ಪ್ರೌಢಶಾಲಾ ಬಾಲಕರ ಪುಟ್‌ಬಾಲ್ ಪಂದ್ಯಾಟ ಜರುಗಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಚಂದ್ರಶೇಖರ ಶೆಟ್ಟಿ ಮಾತನಾಡಿ ನಮ್ಮ ಮೆದುಳಿನ ಜ್ಞಾನ ಪುಸ್ತಕದಿಂದ ತೆರೆದಾಗ ಶರೀರದ ಸಾಮರ್ಥ್ಯ ಪೂರ್ಣ ಪ್ರಮಾಣದಲ್ಲಿ ಕ್ರೀಡೆಯಿಂದ ಅನಾವರಣವಾಗುತ್ತದೆ. ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದರಿಂದ ವ್ಯಕ್ತಿಯ ಮೆದುಳಿನ ಅಂಗದ ಅರಿವಾಗುತ್ತದೆ ಜೊತೆಗೆ ವಿಶೇಷ ಜ್ಞಾನ ಪ್ರಾಪ್ತಿಯಾಗುತ್ತದೆ ಇದು ವೈಜ್ಞಾನಿಕವಾಗಿಯೂ ಧೃಡಪಟ್ಟಿದೆ ಎಂದು ಹೇಳಿದರು.
ವಿದ್ಯಾರ್ಥಿಗಳು ತಮಗೆ ಆಸಕ್ತಿ ಇರುವ ಕ್ರೀಡೆಗಳಲ್ಲಿ ಭಾಗವಹಿಸಬೇಕು. ಮೊಬೈಲ್ ಹಾಗೂ ಟಿವಿ ಮಾಧ್ಯಮದಿಂದ ವಿದ್ಯಾರ್ಥಿಗಳಲ್ಲಿ ಕ್ರೀಡೆ ಬಗ್ಗೆ ಆಸಕ್ತಿ ಕ್ಷೀಣಿಸುತ್ತಿದ್ದು, ಇದೇ ಪರಿಸ್ಥಿತಿ ಮುಂದುವರಿದರೆ ಅನೇಕ ಕ್ರೀಡೆಗಳು ನಶಿಸಿ ಹೋಗುವ ಸಾಧ್ಯತೆ ಇದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಿಕ್ಷಣ ಸಂಯೋಜಕ ಸುಬ್ರಹ್ಮಣ್ಯ ಜೋಶಿ ಮಾತನಾಡಿ, ಮನಸ್ಸು ಮತ್ತು ದೇಹ ಸಮತೋಲನದಲ್ಲಿಡುವ ಶಕ್ತಿ ಇರುವುದು ಕ್ರೀಡಾ ಚಟುವಟಿಕೆಗಳಿಗೆ ಮಾತ್ರ. ಇದರಿಂದ ಯಾವಾಗಲೂ ಲವಲವಿಕೆಯಿಂದ ಕೂಡಿರುವ ಬದುಕಿಗೆ ಒಂದು ವಿಶೇಷ ಅರ್ಥವಿರುತ್ತದೆ. ಈ ಕಾರಣಗಳಿಂದ ಇತ್ತೀಚಿನ ದಿನಗಳಲ್ಲಿ ಕ್ರೀಡೆಗೆ ಅತ್ಯಂತ ಹೆಚ್ಚಿನ ಪ್ರಾಮುಖ್ಯತೆ ಕೊಡಲಾಗುತ್ತಿದೆ. ಕ್ರೀಡೆಯಿಂದ ವ್ಯಕ್ತಿ ದೈಹಿಕವಾಗಿ ಬಳಲಿದರೂ ಮಾನಸಿಕವಾಗಿ ಕ್ರಿಯಾಶೀಲನಾಗಿರುತ್ತಾನೆ. ಈ ನೆಲೆಯಲ್ಲಿ ಪ್ರತಿಯೊಬ್ಬರೂ ಕ್ರೀಡೆಯಲ್ಲಿ ಪಾಲ್ಗೊಳ್ಳುವುದು ಅತ್ಯಂತ ಮುಖ್ಯವಾಗಿದೆ. ಕ್ರೀಡಾಪಟುಗಳು ಕ್ರೀಡಾಂಗಣದಲ್ಲಿ ಕ್ರೀಡಾಸ್ಫೂರ್ತಿಯನ್ನು ಎತ್ತಿ ಹಿಡಿಯುವ ಕೆಲಸ ಮಾಡಬೇಕು. ತಮ್ಮಲ್ಲಿರುವ ಪ್ರತಿಭೆಯನ್ನು ಹಿಡಿದಿಟ್ಟು ಅದನ್ನು ಸಮಾಜಕ್ಕೆ ತೋರಿಸಿದರೆ ಮಾತ್ರ ಉತ್ತಮ ಕ್ರೀಡಾಪಟುವಾಗಿ ಬೆಳೆಯಲು ಸಾಧ್ಯವಾಗುತ್ತದೆ ಎಂದರು.
ಉಪ್ಪುಂದ ಶ್ರೀ ವಿವೇಕಾನಂದ ಅಂಗ್ಲ ಮಾಧ್ಯಮ ಶಾಲಾ ಮುಖ್ಯಶಿಕ್ಷಕಿ ಜಯಶೀಲಾ ನಾಯಕ್ ಇದ್ದರು. ಯು. ಬಿ. ಶೆಟ್ಟಿ ಅಂಗ್ಲ ಮಾಧ್ಯಮ ಶಾಲಾ ಮುಖ್ಯಶಿಕ್ಷಕಿ ಅಮಿತಾ ಶೆಟ್ಟಿ ಸ್ವಾಗತಿಸಿ, ಶಿಕ್ಷಕಿ ಆಶಾಲತಾ ನಿರೂಪಿಸಿದರು. ದೈಶಿಶಿ ಮಂಜುನಾಥ ತೊಡವಳ್ಳಿ ವಂದಿಸಿದರು.