ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಚದುರಂಗ ಒಂದು ರೀತಿಯಲ್ಲಿ ಸಾಧಕರ ಸೊತ್ತು. ಈ ಅಟದಲ್ಲಿ ಜಯಿಸಲು ನಮ್ಮ ಬುದ್ದಿಮತ್ತೆ, ಏಕಾಗೃತೆ ಮತ್ತು ಯೋಚನೆಗಳು ಸಾಕಾಗುತ್ತದೆ ವಿನಹಃ ದೈಹಿಕ ಸದೃಢತೆ, ಹೆಚ್ಚು ಶಿಕ್ಷಣದ ಅವಶ್ಯಕತೆ ಇರುವುದಿಲ್ಲ. ಪ್ರತೀ ಹಂತದಲ್ಲಿ ಚಾಣಾಕ್ಯತೆ ನಡೆಯನ್ನು ಅನುಸರಿಸಿದರೆ ಮಾತ್ರ ಜಯಗಳಿಸಬಹುದು ಎಂದು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆರಾಡಿ ಚಂದ್ರಶೇಖರ ಶೆಟ್ಟಿ ಹೇಳಿದರು.
ಕೊಲ್ಲೂರು ಶ್ರೀ ಮೂಕಾಂಬಿಕಾ ಸಭಾಭವನದಲ್ಲಿ ಇಲ್ಲಿನ ಶ್ರೀ ಮೂಕಾಂಬಿಕಾ ದೇವಳದ ಸ್ವತಂತ್ರ ಪದವಿಪೂರ್ವ ಕಾಲೇಜಿನ ಆಶ್ರಯದಲ್ಲಿ ಉಡುಪಿ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ ವತಿಯಿಂದ ಶುಕ್ರವಾರ ನಡೆದ ಜಿಲ್ಲಾ ಮಟ್ಟದ ಬಾಲಕ-ಬಾಲಕಿಯರ ಚದುರಂಗ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳಲ್ಲಿ ಕುತೂಹಲ ಮತ್ತು ಆವಿಷ್ಕಾರ ಮಾಡುವ ಗುಣವಿದ್ದರೆ ಪಠ್ಯ ಚಟುವಟಿಕೆಯೊಂದಿಗೆ ಹೊಸ ಹೊಸ ಯೋಜನೆಗಳನ್ನು ಅಳವಡಿಸಿಕೊಂಡು ಪ್ರಾಯೋಗಿಕ ಅನುಭವವನ್ನು ಪಡೆದುಕೊಳ್ಳಲು ಸಾಧ್ಯವಿದೆ. ಅದಕ್ಕೆ ಅವರಿಗೆ ಬುದ್ಧಿಬಲ, ಮನೋಬಲ ಬೇಕು. ಇಂತಹ ಸ್ಪರ್ಧಾ ಕಾರ್ಯಕ್ರಮಗಳಿಂದ ನಮ್ಮ ಸಂಸ್ಕೃತಿ, ಭಾಷೆ ಹಾಗೂ ವ್ಯಕ್ತಿತ್ವಕ್ಕೆ ಮೆರುಗು ತರುತ್ತದೆ. ಶಿಕ್ಷಣವನ್ನು ಅಂಕಗಳಿಕೆಯ ಸಾಧನವಾಗಿ ಮಾತ್ರ ಪರಿಗಣಿಸದೇ ಕಲೆ ಸಾಹಿತ್ಯ ಕ್ರೀಡೆಯನ್ನೂ ಒಳಗೊಂಡಂತೆ ನೋಡುವುದರಿಂದ ಮಕ್ಕಳ ಬೌದ್ಧಿಕ ವಿಕಾಸಕ್ಕೆ ಸಾಧ್ಯವಾಗುತ್ತದೆ ಎಂದರು.
ಕಾಲೇಜಿನ ಪ್ರಾಂಶುಪಾಲ ಅರುಣ್ ಪ್ರಕಾಶ್ ಶೆಟ್ಟಿ ಅಧ್ಯಕ್ಷತೆವಹಿಸಿದ್ದರು. ಕಾಮನ್‌ವೆಲ್ತ್ ಪದಕ ವಿಜೇತ ಗುರುರಾಜ ಪೂಜಾರಿ ಹಾಗೂ ವಿದ್ಯಾರ್ಥಿಗಳ ನಡುವೆ ಕ್ರೀಡಾ ವಿಷಯದ ಬಗ್ಗೆ ಸಂವಾದ ನಡೆಯಿತು. ಗ್ರಾಪಂ ಅಧ್ಯಕ್ಷ ಶಿವರಾಮಕೃಷ್ಣ ಭಟ್, ಜಿಲ್ಲಾ ಪಪೂ ಶಿಕ್ಷಣ ಇಲಾಖೆ ಉಪನಿರ್ದೇಶಕ ಮಾರುತಿ, ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಜಯಾನಂದ ಹೋಬಳಿದಾರ್, ಡಾ. ಅತುಲ್‌ಕುಮರ್ ಶೆಟ್ಟಿ, ಬೆಳ್ವೆ ಗಣೇಶ ಕಿಣಿ, ಗೋಪಾಲಕೃಷ್ಣ ನಾಡ, ಶೇಖರ ಪೂಜಾರಿ, ಸಂಧ್ಯಾ ರಮೇಶ್, ರತ್ನಾ ರಮೇಶ ಕುಂದರ್, ಜಿಲ್ಲಾ ದೈಶಿಶಿ ಸಂಘದ ಅಧ್ಯಕ್ಷ ಜೀವನ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು. ದೈಹಿಕ ಶಿಕ್ಷಣ ಉಪನ್ಯಾಸಕ ಸುಕೇಶ್ ಶೆಟ್ಟಿ ಹೊಸಮಠ ಸ್ವಾಗತಿಸಿ, ಉಪನ್ಯಾಸಕ ನಾಗರಾಜ ಅಡಿಗ ಕಾರ್ಯಕ್ರಮ ನಿರ್ವಹಿಸಿದರು. ಜಿಲ್ಲೆಯ 40 ಕಾಲೇಜಿನ 150 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.