ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ನೂರಾರು ದೈವ ದೇವರುಗಳಿಗೆ ಮೂರ್ತರೂಪ ನೀಡಿದ ಹಿರಿಯ ಶಿಲ್ಪಿ ಉಪ್ಪುಂದದ ರತ್ನಾಕರ ಎಸ್. ಗುಡಿಗಾರ್ ಅವರು ಅವರಿಗೆ 2021ನೇ ಸಾಲಿನ ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ಗೌರವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಉಪ್ಪುಂದ ನ್ಯೂ ಜನತಾ ಕಾಲೋನಿ ನಿವಾಸಿಯಾಗಿರುವ ರತ್ನಾಕರ ಗುಡಿಗಾರ್ ಅವರು ಕಳೆದ 60 ವರ್ಷಗಳಿಂದ ವಂಶಪಾರಂಪರ್ಯವಾಗಿ ಬಂದ ಮರದಿಂದ ದೇವರ ಮೂರ್ತಿ ಕೆತ್ತನೆ ಕಾಯಕವನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ತಮ್ಮ 84 ವರ್ಷದ ವಯಸ್ಸಿನಲ್ಲಿಯೂ ಸೇವಾ ಕಾರ್ಯವನ್ನು ಮುಂದುವರಿಸಿರುವ ಗುಡಿಗಾರರು, ವರ್ಷಕ್ಕೆ 150ಕ್ಕೂ ಹೆಚ್ಚು ದೇವರ ಮೂರ್ತಿ ಕೆತ್ತನೆ ಮಾಡುತ್ತಿದ್ದಾರೆ. ದೆಹಲಿ, ಭೂಪಾಲ್, ಚೆನೈ ಹಾಗೂ ರಾಜ್ಯದ ವಿವಿಧೆಡೆ ಇವರ ಕೆತ್ತನೆಯ ಮೂರ್ತಿಗಳು ಪೂಜಿಸಲ್ಪಡುತ್ತಿದೆ. ಉಡುಪಿ ಜಿಲ್ಲೆಯ ನೂರಾರು ದೈವಸ್ಥಾನಗಳ ದೇವರ ಮೂರ್ತಿಯನ್ನು ಕೆತ್ತನೆ ಮಾಡಿ ಪ್ರಸಿದ್ಧಿ ಪಡೆದಿದ್ದಾರೆ. ಒಂದು ಅಡಿಯಿಂದ 28 ಅಡಿಯ ತನಕದ ಮೂರ್ತಿಯನ್ನು ಅವರು ಕೆತ್ತನೆ ಮಾಡಿದ್ದಾರೆ.
ರತ್ನಾಕರ ಗುಡಿಗಾರ ಸೇವೆಯನ್ನು ಗುರುತಿಸಿ ಸಾಂಪ್ರದಾಯಿಕ ಶಿಲ್ಪ ವಿಭಾಗದಲ್ಲಿ ಗೌವರ ಪ್ರಶಸ್ತಿಗೆ ಆಯ್ಕೆಮಾಡಲಾಗಿದ್ದು, ಪ್ರಶಸ್ತಿಯು ರೂ.50,000 ಮೊತ್ತು ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ. ಬೆಳಗಾವಿಯ ಕುಮಾರ ಗಂಧರ್ವ ಕಲಾಮಂದಿರದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.
ವಿವಿಧ ಸಂಘಟನೆಗಳಿಂದ ಸನ್ಮಾನ
ರತ್ನಾಕರ ಎಸ್. ಗುಡಿಗಾರ್ ಅವರು ಅವರಿಗೆ 2021ನೇ ಸಾಲಿನ ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ಗೌರವ ಪ್ರಶಸ್ತಿಗೆ ಭಾಜನರಾಗಿರುವುದನ್ನು ಗುರುತಿಸಿ ಶ್ರೀ ಮಹಾದೇವ ಸಾಂಸ್ಕ್ರತಿಕ ಪ್ರತಿಷ್ಟಾನ ಮಕ್ಕಿ ದೇವಸ್ಥಾನ ಹಾಗೂ ಮಕ್ಕಿ ದೇವಸ್ಥಾನ ಗೆಳೆಯರ ಬಳಗದಿಂದ ಸನ್ಮಾನಿಸಲಾಯಿತು. ಮಕ್ಕಿದೇವಸ್ಥಾನದ ನಾಗರಾಜ ಭಟ್ಟ ಸನ್ಮಾನ ನೆರವೇರಿಸಿದರು. ಈ ಸಂದರ್ಭ ಅನಂತ ಭಟ್ಟ, ಉಮೇಶ ಆಚಾರ್ಯ, ಸಂತೋಷ್ ಕಾಡಿನತಾರು, ವಿಘ್ನೇಶ್ವರ, ಅಭಿಷೇಕ್, ನಾಗರಾಜ ಶೆಟ್ಟಿ, ಪ್ರಣವ ಭಟ್ ಮೊದಲಾದವರು ಉಪಸ್ಥಿತರಿದ್ದರು.
ರತ್ನಾಕರ ಎಸ್. ಗುಡಿಗಾರ್ ಅವರು ಪ್ರಶಸ್ತಿಗೆ ಆಯ್ಕೆಯಾಗಿರುವುದನ್ನು ಗುರುತಿಸಿ ಉಪ್ಪುಂದ ಸಾರ್ವಜನಿಕರು ಸನ್ಮಾನಿಸಿದ್ದಾರೆ. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಸ್. ಮದನ್ ಕುಮಾರ್, ಉಪ್ಪುಂದ ಗ್ರಾಮ ಪಂಚಾಯತ್ ಸದಸ್ಯರುಗಳಾದ ಶೇಖರ್ ಪೂಜಾರಿ ಹಾಗೂ ಪ್ರಕಾಶ್ ಆಚಾರ್ಯ, ಬಾಬು ಗಾಣಿಗ, ಉದಯ ಪೂಜಾರಿ, ಮಂಜುನಾಥ ಆಚಾರ್ಯ, ಗಣಪತಿ ಆಚಾರ್ಯ, ಕೃಷ್ಣ ಗುಡಿಗಾರ್, ಆನಂದ ಪುತ್ರನ್ ಉಪಸ್ಥಿತರಿದ್ದರು.