ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಮೀನುಗಾರಿಕಾ ಬಂದರು ಪ್ರದೇಶದಲ್ಲಿ ನಡೆಯುತ್ತಿರುವ ಜೆಟ್ಟಿ ನಿರ್ಮಾಣ ಕಾರ್ಯದ ವೇಳೆ ಜೆಟ್ಟಿ ಭಾಗ ಕುಸಿತಕ್ಕೊಳಗಾಗಿದ್ದು, ಸ್ಥಳೀಯ ಮೀನುಗಾರರು ಆತಂಕಕ್ಕೀಡಾಗಿದ್ದಾರೆ ಬುಧವಾರ ಸಂಜೆ 5.30 ರ ಹೊತ್ತಿಗೆ ಘಟನೆ ನಡೆದು ನಿರಂತರವಾಗಿ ಕುಸಿದಿದ್ದು 150 ಮೀಟರಿಗೂ ಅಧಿಕ ಜೆಟ್ಟಿ ಕುಸಿದಿದೆ ಎನ್ನಲಾಗಿದೆ.
ಕಳೆದ 13 ವರ್ಷದ ಹಿಂದೆ ಗಂಗೊಳ್ಳಿ ಜೆಟ್ಟಿ ನಿರ್ಮಾಣವಾಗಿದ್ದು ಇದು ಕೂಡ ಕುಸಿತಕ್ಕೊಳಗಾಗಿತ್ತು. ಬಳಿಕ ಶಿವಮೊಗ್ಗ ಸಂಸದ ಹಾಗೂ ಬೈಂದೂರು ಶಾಸಕರ ಮುತುವರ್ಜಿಯಲ್ಲಿ 12 ಕೋಟಿ ಅನುದಾನದಲ್ಲಿ ನೂತನ ಜೆಟ್ಟಿ ಕಾಮಗಾರಿಗೆ ಮಂಜೂರಾಗಿ 180 ಮೀಟರ್ ಕೆಲಸವೂ ನಡೆದಿತ್ತು. ಮುಂದಿನ ಕಾಮಗಾರಿಗಾಗಿ ಹಳೆ ಜೆಟ್ಟಿಯ ಡಯಪ್ರಮ್ ಹಾಲ್ ನಡುವೆಯಿದ್ದ ರಾಡ್ ತುಂಡರಿಸಿ ಹೊಸ ಪಿಲ್ಲರ್ ಹಾಕಿದ್ದು ಎರಡಕ್ಕೂ ಕೊಂಡಿಯಾಗಿದ್ದ ರಾಡು ತುಂಡರಿಸಿ ಅವೈಜ್ಞಾನಿಕ ಕಾಮಗಾರಿ ಮಾಡಿದ್ದರಿಂದ ಹಳೆ ಜೆಟ್ಟಿ ಕುಸಿತಕ್ಕೊಳಗಾಗಿ ಈಗ ನಡೆಯುತ್ತಿರುವ ಕಾಮಗಾರಿಗಾಗಿ ಮಾಡಿದ ಪಿಲ್ಲರ್ ಮೇಲೆ ಬಿದ್ದು ಹಲವು ಪಿಲ್ಲರ್ ಕುಸಿದಿದೆ.
ಈ ಭಾಗದಲ್ಲಿ 40 ದೊಡ್ಡ ಬೋಟುಗಳು, 100ಕ್ಕೂ ಅಧಿಕ ಟ್ರಾಲ್ ಬೋಟುಗಳು, ಸಿಂಗಲ್ ಬೋಟುಗಳು, ನೂರಾರು 370 ಬೋಟುಗಳು, 300ಕ್ಕೂ ಅಧಿಕ ನಾಡ ದೋಣಿಗಳು ಮೀನುಗಾರಿಕೆಯಲ್ಲಿ ತೊಡಗಿಸಿಕೊಳ್ಳುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ಮೀನು ಖಾಲಿ ಮಾಡಲು ದೂರದ ಭಟ್ಕಳ ಮೊದಲಾದೆಡೆ ತೆರಳಬೇಕಾದ ಅನಿವಾರ್ಯತೆ ಎದುರಾಗಿದೆ. ಇದು ಅಧಿಕಾರಿಗಳ ಬೇಜವಬ್ದಾರಿತನ ಹಾಗೂ ಗುತ್ತಿಗೆದಾರರ ನಿರ್ಲಕ್ಷ್ಯ ಎಂದು ಮೀನುಗಾರರು ಆಕ್ರೋಷ ವ್ಯಕ್ತಪಡಿಸಿದ್ದಾರೆ.