ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ನಾವು ವಿದ್ಯಾರ್ಥಿ ದೆಸೆಯಿಂದಲೇ ಸಾಧಕರನ್ನು ಅನುಕರಿಸುತ್ತಾ ಸಾಧನೆಗೆ ಬೇಕಾದ ಅವಕಾಶ ಸೃಷ್ಠಿಸಿಕೊಳ್ಳಬೇಕು. ಸಾಧನೆ ಮತ್ತು ಖುಷಿಯೇ ಗಮ್ಯಸ್ಥಾನವೆಂದು ಹೇಳಲಾಗದು. ಆದರೆ ಇದು ಜೀವನದಲ್ಲಿ ಒಂದು ಮಹತ್ತರ ಮೈಲಿಗಲ್ಲಂತೂ ಹೌದು ಎಂದು ಡಾ. ಮಾಧವ ಶೆಟ್ಟಿ ಹೇಳಿದರು.
ಉಪ್ಪುಂದ ಶ್ರೀ ವಿವೇಕಾನಂದ ಅಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಶಾಲೆಯ ವಾರ್ಷಿಕೋತ್ಸವ ’ಸೃಜನ’ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಹಳೆಯ ಶಿಕ್ಷಣ ಪದ್ದತಿ ಈಗ ಅರ್ಥ ಕಳೆದುಕೊಂಡು ಅದರ ಸ್ಥಾನದಲ್ಲಿ ಹೊಸ ವ್ಯಾಖ್ಯೆ ರೂಢಿಗೆ ಬಂದಿದೆ. ವಿದ್ಯಾರ್ಥಿಯ ಸರ್ವಾಂಗೀಣ ಅಭಿವೃದ್ದಿ ಶಿಕ್ಷಣದ ಗುರಿಯೆನಿಸಿದ್ದು, ಅದರ ಸಾಧನೆಗೆ ವಿದ್ಯಾರ್ಥಿ, ಶಿಕ್ಷಕ, ಪೋಷಕರ ಸಂಯೋಜಿತ ತ್ರಿಕೋನ ಸ್ಪಂದನೆ ಅಗತ್ಯವೆನಿಸಿದೆ ಎಂದರು.
ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಯು. ಬಿ. ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಎರಡೂ ಶಿಕ್ಷಣ ಸಂಸ್ಥೆಗಳಲ್ಲಿ ಮಕ್ಕಳಿಗೆ ಅಗತ್ಯವಾದ ಎಲ್ಲಾ ರೀತಿಯ ಪಾಠ ಹಾಗೂ ಪಾಠೇತರ ಚಟುವಟಿಕೆಗಳನ್ನು ಆಯೋಜಿಸಿ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸಲಾಗುತ್ತಿದೆ ಅನುಭವಿ ಪದವೀಧರ ಶಿಕ್ಷಕರು ಮಕ್ಕಳಿಗೆ ಉತ್ತಮ ಬೋಧನೆ ನಡೆಸುತ್ತಿದ್ದು, ಮಕ್ಕಳು ಶಿಕ್ಷಣದ ಕಡೆ ಹೆಚ್ಚಿನ ಆಸಕ್ತಿ ವಹಿಸುವಂತೆ ಪ್ರೇರಣೆ ನೀಡಲಾಗುತ್ತಿದೆ. ಪೋಷಕರು ಕಾಲಕಾಲಕ್ಕೆ ಶಾಲೆಗೆ ಭೇಟಿ ನೀಡಿ ಮಕ್ಕಳ ಶೈಕ್ಷಣಿಕ ಬೆಳವಣಿಗೆಯನ್ನು ಗಮನಿಸಬೇಕು. ಮಕ್ಕಳ ಖುಷಿಯೇ ನಮ್ಮ ಖುಷಿಯಾಗಬೇಕು ಎಂದರು.
ಇದನ್ನೂ ಓದಿ► ಯು. ಬಿ.ಎಸ್ ಆಂಗ್ಲ ಮಾಧ್ಯಮ ಶಾಲಾ ವಾರ್ಷಿಕೋತ್ಸವ – https://kundapraa.com/?p=64324 .
ಅತಿಥಿಗಳನ್ನು ಗೌರವಿಸಲಾಯಿತು. ಕ್ರೀಡಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಈ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಪಡೆದ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡಲಾಯಿತು. ಇಲಾಖೆ ವತಿಯಿಂದ ಮುಖ್ಯಶಿಕ್ಷಕ ನಾಗೇಶ ನಾಯ್ಕ್, ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಯಶಶ್ರೀ ಶೆಟ್ಟಿ, ಯುಬಿಎಸ್ ಚಾರಿಟೇಬಲ್ ಟ್ರಸ್ಟ್ನ ಟ್ರಸ್ಟಿಗಳಾದ ರಂಜನಾ ಯು. ಬಿ. ಶೆಟ್ಟಿ, ಶುಭಶ್ರೀ ಪುನಿತ್ ಶೆಟ್ಟಿ, ವಿದ್ಯಾರ್ಥಿ ನಾಯಕಿ ಸಮೀಕ್ಷಾ ಕೆ. ಇದ್ದರು.
ಸಮೂಹ ಶಿಕ್ಷಣ ಸಂಸ್ಥೆಗಳ ಶಿಕ್ಷಣ ಸಂಯೋಜಕ ಸುಬ್ರಹ್ಮಣ್ಯ ಜೋಶಿ ಪ್ರಾಸ್ತಾವಿಸಿದರು. ಮುಖ್ಯಶಿಕ್ಷಕಿ ಜಯಶೀಲಾ ನಾಯಕ್ ವರದಿ ಮಂಡಿಸಿದರು. ಶನಾಲ್ ಫೆರ್ನಾಂಡೀಸ್ ಸ್ವಾಗತಿಸಿ, ವಿದ್ಯಾರ್ಥಿ ನಾಯಕ ನಿಹಾರ್ ಖಾರ್ವಿ ವಂದಿಸಿದರು. ಸುಮೇದ್ ಮಯ್ಯ ನಿರೂಪಿಸಿದರು.















