ಸುನಿಲ್ ಹೆಚ್. ಜಿ. ಬೈಂದೂರು . | ಕುಂದಾಪ್ರ ಡಾಟ್ ಕಾಂ ಲೇಖನ.
ನವರಾತ್ರಿಯ ನಡುವೆ ಅಥವಾ ಅನಂತ ಚತುರ್ದಶಿಯಂದು ಕೃಷಿಕ ಸಮುದಾಯದ ಜನ ಆಗತಾನೆ ಬೆಳೆಯುತ್ತಿರುವ ಪೈರನ್ನು (ಕದಿರು) ಕೊಯ್ದು, ಪೂಜಿಸಿ, ಶ್ರದ್ಧೆಯಿಂದ ಆಚರಿಸುವ ಹಬ್ಬ ಹೊಸ್ತು. ಮನೆಯ ಪರಿಸರ ಮುಂತಾದವುಗಳನ್ನು ಸ್ವಚ್ಛವಾಗಿಸಿಕೊಳ್ಳುವ, ನಿತ್ಯದ ಬದುಕಿಗೊಂದು ಹೊಸ ಆಯಾಮವನ್ನು ನೀಡಿ ವರ್ಷದ ಹೊಸ ಬೆಳೆಯನ್ನು ಸಂಭ್ರಮದಿಂದ ಒಳಕರೆದುಕೊಳ್ಳುವ ಪ್ರಕ್ರಿಯೆ ಇದು.
ಹೊಸ್ತಿನ ದಿನ ಶುದ್ಧಗೊಂಡು, ಮೇಟಿ (ಹಿಂದೆ ಅಂಗಳದಲ್ಲಿ ಇರುತ್ತಿದ್ದ ಕಂಬ) ಎದುರಿಗೊಂದು ದೀಪ ಹಚ್ಚಿ, ಪೂಜಾ ಸಾಮಾಗ್ರಿಗಳೊಂದಿಗೆ ಮನೆಯ ಯಾಜಮಾನ ಗಂಡುಮಕ್ಕಳನ್ನೊಳಗೊಂಡು ಭತ್ತದ ಗದ್ದೆಗೆ ಹೋಗುವುದು; ಅಲ್ಲಿ ಒಂದಿಷ್ಟು ಪೈರನ್ನು ಒಟ್ಟುಮಾಡಿ ಕಟ್ಟಿ ಬುಡದಲ್ಲಿ ಬಾಳೆ ಎಲೆಯ ಮೇಲೆ ವಿಳ್ಯದೆಲೆಯನ್ನಿಟ್ಟು ಪ್ಶೆರಿಗೆ ಗಂಧ ಬೊಟ್ಟುಗಳನ್ನು ಹಚ್ಚಿ, ಮುಳ್ಳು ಸೌತೆಕಾಯಿ ಬಾಳೆಹಣ್ಣುಗಳನ್ನು ಅರ್ಪಿಸಿ ಮೂರು ಅಥವಾ ಐದು ಹಿಡಿ ಕದಿರನ್ನು ಕೊಯ್ದಿಟ್ಟು ಹಾಲೆರೆದು ನಮಸ್ಕರಿಸಿ ಪೂಜಿಸಿದ ಬಳಿಕ ಪಕ್ಕದ ಐದು ಗದ್ದೆಗಳಿಂದ ಸ್ವಲ್ಪವೇ ಕದಿರನ್ನು ಕೊಯ್ದು ತಲೆಯ ಮೇಲೆ ಹೊತ್ತುಕೊಂಡು ಎಲ್ಲರೂ ಹಿಂತಿರುಗಿ ನೋಡದೆ ಜಾಗಟೆಯ ಸದ್ದಿನೊಂದಿಗೆ ಮನೆಯತ್ತ ಧಾವಿಸುವ ರೀತಿ; ಮನೆಯಂಗಳಕ್ಕೆ ಬರುತ್ತಿದ್ದಂತೆಯೇ ಮನೆಯೊಡತಿ ಕದಿರು ಹೊತ್ತು ತಂದವರ ಕಾಲು ತೊಳೆದು, ಆರತಿ ಬೆಳಗಿ ಬರಮಾಡಿಕೊಳ್ಳುವ ಸೊಬಗು; ಹೊತ್ತು ತಂದ ಕದಿರನ್ನು ಮೇಟಿ ಕಂಬದ ಬಳಿ ಇರಿಸಿ ಪೂಜಿಸಿ ಹಲಸಿನ ಎಲೆ, ಮಾವಿನ ಎಲೆ, ತುಂಬಿ ಹೂ ಹಾಗೂ ಕದಿರನ್ನು ಸೇರಿಸಿ ನಾರಿನಿಂದ ಬಿಗಿದು ಮೇಟಿಗೆ ಕಟ್ಟಿದ ಬಳಿಕ ತುಳಸಿ, ಬಾಗಿಲು, ನೇಗಿಲು, ಮರ, ಅನ್ನದ ಪಾತ್ರೆ ಮುಂತಾದ ವಸ್ತುಗಳಿಗೂ ಕದಿರನ್ನು ಕಟ್ಟುವ ಪರಿ ಇವೆಲ್ಲವೂ ಕೃಷಿಕನೊರ್ವನ ಪ್ರಕೃತಿ ಹಾಗೂ ತಾನು ಬಳಸುವ ಪರಿಕರಗಳೊಂದಿಗಿನ ನಂಟನ್ನು ಏಳೆ ಏಳೆಯಾಗಿ ತೆರೆದಿಡುತ್ತದೆ. ಕುಂದಾಪ್ರ ಡಾಟ್ ಕಾಂ.
ಹೊಸ್ತು ಉಣ್ತೆ…
ಹೊಸ್ತು ಊಟಮಾಡುವೆನೆಂದು ಹೇಳಿ ಊಟ ಮಾಡುವುದು ಈ ದಿನದ ವಿಶೇಷಗಳಲ್ಲೊಂದು. ಮುಳ್ಳುಸೌತೆ, ತೆಂಗಿನಕಾಯಿಗಳನ್ನು ತುರಿದು ಅದಕ್ಕೆ ಇಪ್ಪತ್ತೊಂದು ಹೊಸ ಭತ್ತದ ಕಾಳುಗಳನ್ನು ಸುಲಿದು ಹಾಕಿ, ಸಕ್ಕರೆ, ಬಾಳೆಹಣ್ಣು, ಮೊಸರಿನೊಂದಿಗೆ ಕಲಿಸಿದ ಖಾದ್ಯವನ್ನು ಅರಶಿಣದ ಎಲೆಯಲ್ಲಿಟ್ಟು ದೇವರಿಗೆ ಅರ್ಪಿಸಿದ ಬಳಿಕ ಮನೆಮಂದಿಯಲ್ಲಿ ಒಟ್ಟು ಕುಳಿತು ಕಿರಿಯರಿಂದ ಹಿರಿಯರವರೆಗೂ ಪ್ರತಿಯೊಬ್ಬರೂ ಪ್ರತಿಯೊಬ್ಬರನ್ನು ಕರೆದು ಹೊಸ್ತು ಊಟಮಾಡುತ್ತೇನೆಂದು ಹೇಳಿಯೇ ಊಟ ಮಾಡುತ್ತಾರೆ. ಬಳಿಕ ಎಲೆಯಡಿಕೆ ತಿಂದು ಬಾಯಿ ಕೆಂಪಾಗಿಸಿಕೊಳ್ಳುವುದು ವಾಡಿಕೆ. ಕುಂದಾಪ್ರ ಡಾಟ್ ಕಾಂ.
ಗ್ರಾಮೀಣ ಪ್ರದೇಶದ ಕೃಷಿಕ ಜನ ಪ್ರತಿ ಹೊಸ್ತನ್ನೂ ಕೂಡ ಶ್ರದ್ಧೆ, ಭಕ್ತಿ, ಉತ್ಸಾಹದಿಂದ ಬರಮಾಡಿಕೊಂಡು ಸಂಭ್ರಮದಿಂದ ಆಚರಿಸುತ್ತಾರೆ ಆದರೂ ಆಧುನಿಕತೆಯ ಸೊಂಕು ತಾಕಿದಾಗಿನಿಂದ ಇಲ್ಲೂ ಒಂದಿಷ್ಟು ಮಾರ್ಪಾಡುಗಳಾಗಿರುವುದು ಕಾಣುತ್ತಿದೆ. ಅದೇನೇ ಇದ್ದರೂ ಈ ಹೊಸ್ತಿನ ಆಚರಣೆಯ ಹಿಂದೆ ಸಾಕಷ್ಟು ಸಂದೇಶಗಳು ಅಡಕವಾಗಿದೆ. ಕದಿರು ಮನೆಗೆ ಬರುವಾಗ ಅನ್ನದ ಮಡಿಕೆ ಕುದಿಯುತ್ತಿರಬೇಕೆಂಬುದು ಸಮೃದ್ಧಿಯ ಪ್ರತೀಕವಾದರೆ, ಪಾತ್ರೆಯಲ್ಲಿ ಬೇಯುತ್ತಿರುವ ಅನ್ನಕ್ಕೆ ಹೊಸ ಭತ್ತದ ಕಾಳನ್ನು ಸುಲಿದು ಹಾಕುವುದು ಹಳತರೊಂದಿಗೆ ಹೊಸತನ್ನು ಬೆರೆಸುವ ಕೃಷಿ ಪ್ರಕ್ರಿಯೆಯಾಗಿದೆ. ಹೊಸ್ತನ್ನು ಆಚರಿಸುವ ಮುನ್ನ ಮನೆಯ ಪರಿಸರವನ್ನು ಶುಚಿಗೊಳಿಸುವುದು ಮತ್ತು ಅಡುಗೆಯ ಪಾತ್ರೆ ಮುಂತಾದವುಗಳಿಗೆ ಸೇಡಿ ಬಳಿದು ಅಡುಗೆ ಮಾಡುವ ಪ್ರಕ್ರಿಯೆ ಸ್ವಚ್ಛತೆ ಹಾಗೂ ಶುದ್ಧೀಕರಣದ ಭಾವವನ್ನು ಪ್ರತಿಬಿಂಬಿಸುತ್ತದೆ. ಮನೆಮಂದಿಯಲ್ಲಿ ಒಟ್ಟಿಗೆ ಕುಳಿತು ‘ಹೊಸ್ತು ಉಣ್ತೆ’ ಎಂದು ಹೇಳಿ ಉಣ್ಣುವ ಪ್ರಕ್ರಿಯೆಯಲ್ಲಿ ಆತ್ಮೀಯತೆಯನ್ನು ಬಲಗೊಳಿಸಿಕೊಳ್ಳವ ಸಂದೇಶವಿದೆ. ಕುಂದಾಪ್ರ ಡಾಟ್ ಕಾಂ.
ಹೀಗೆ ನಿಸರ್ಗದಿಂದ ದೊರೆಯುವ ಆಹಾರ ವಸ್ತುಗಳನ್ನು ಪೂಜಿಸಿ ಸ್ವಾಗತಿಸಿಕೊಳ್ಳುವ ಈ ಹಬ್ಬಕ್ಕೆ ಸಾಂಪ್ರದಾಯಿಕ ನೆಲಗಟ್ಟಿದೆ. ಸಂಬಂಧಗಳನ್ನು ಬಲ ಪಡಿಸುವ ಸಾಮಾಜಿಕ ಕಳಕಳಿಯು ಬೆರೆತಿದೆ. ಖಂಡಿತವಾಗಿಯೂ ಹೊಸ್ತು ಬದುಕಿನಲ್ಲೊಂದು ಹೊಸತನವನ್ನು ತುಂಬಲಿದೆ ಎನ್ನುವುದು ದಿಟ. ಅಂದಾಂಗೆ ನಾನ್ ಹೊಸ್ತ್ ಉಣ್ತೆ ಅಕಾ..
ಕುಂದಾಪ್ರ ಡಾಟ್ ಕಾಂ