ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ,ಎ.09: ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಜೊತೆಗೆ ರಾಜ್ಯ ಬಿಜೆಪಿ ವಲಯದಲ್ಲಿ ಯಾರಿಗೆಲ್ಲ ವಿಧಾನಸಭಾ ಚುನಾವಣೆಯಲ್ಲಿ ಸ್ವರ್ಧಿಸಲು ಅವಕಾಶ ದೊರೆಯಲಿದೆ ಎಂಬ ಕುತೂಹಲವೂ ಹೆಚ್ಚುತ್ತಿದೆ. ಸೋಮವಾರ ಸಂಜೆ ಅಥವಾ ಮಂಗಳವಾರ ಬಿಜೆಪಿಯ ಮೊದಲ ಪಟ್ಟಿ ಬಿಡುಗಡೆಯಾಗಲಿದ್ದು, ಆಕಾಂಕ್ಷಿಗಳ ಹಣೆಬರಹ ನಿರ್ಧಾರವಾಗಲಿದೆ.
ಕಳೆದೊಂದು ವಾರದ ಬಳಿಕ ಉಡುಪಿ ಜಿಲ್ಲೆಯ ಬಿಜೆಪಿ ವಲಯದಲ್ಲಿ ರಾಜಕೀಯ ಲೆಕ್ಕಾಚಾರಗಳ ಬದಲಾಗಿದೆ. ಅಭ್ಯರ್ಥಿಗಳ ಗೆಲ್ಲುವ ಸಾಮರ್ಥ್ಯ, ವಯಸ್ಸು, ಜಾತಿ ಸಮೀಕರಣ, ಸಮೀಕ್ಷೆ ವರದಿ ಆಧಾರದ ಮೇಲೆ ಟಿಕೆಟ್ ಫೈನಲ್ ಆಗಲಿದೆ. ಜಿಲ್ಲೆಯ 5 ಕ್ಷೇತ್ರ ಪೈಕಿ ಇಬ್ಬರು ಬಂಟ, ಓರ್ವ ಬಿಲ್ಲವ, ಓರ್ವ ಮೊಗವೀರ ಹಾಗೂ ಒಬ್ಬರು ಬ್ರಾಹ್ಮಣ ಅಭ್ಯರ್ಥಿಯನ್ನು ಕಣಕ್ಕಿಳಿಸಲು ತಯಾರಿ ನಡೆಸಲಾಗಿದೆ. ಈ ಪೈಕಿ ಸದ್ಯ ಕಾರ್ಕಳ ಹಾಗೂ ಕುಂದಾಪುರ ಕ್ಷೇತ್ರಗಳ ಅಭ್ಯರ್ಥಿ ಬಹುತೇಕ ಅಂತಿಮಗೊಂಡಿದೆ.
ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಚುನಾವಣಾ ರಾಜಕೀಯದಿಂದ ಹಿಂದೆ ಸರಿದ ಬಳಿಕ ಬಿಜೆಪಿ ಅಭ್ಯರ್ಥಿಗೆ ಯಾರು ಎಂಬ ಪ್ರಶ್ನೆ ಎದುರಾಗಿತ್ತು. ಆದರೆ ಬಿಜೆಪಿ ಗೆಲುವಿನ ಕುದುರೆಯಾಗಿದ್ದ ಹಾಲಾಡಿ ಶ್ರೀನಿವಾಸ ಶೆಟ್ಟರು ಸ್ವತಃ ಕಿರಣ್ ಕೊಡ್ಗಿ ಅವರ ಪರ ಒಲವು ತೋರಿರುವುದರಿಂದ, ಅವರಿಗೆ ಟಿಕೆಟ್ ಫೈನಲ್ ಆಗುವ ಸಾಧ್ಯತೆ ಇದೆ. ಹಾಲಾಡಿ ಅವರ ಬದಲಿಗೆ ಬೇರೆಯವರಿಗೆ ಟಿಕೆಟ್ ನೀಡಬೇಕು ಎಂಬ ಚಿಂತನೆಯಲ್ಲಿದ್ದ ಬಿಜೆಪಿಗೆ ಸ್ವತಃ ಹಾಲಾಡಿ ಅವರೇ ರೂಟ್ ಕ್ಲೀಯರ್ ಮಾಡಿಕೊಟ್ಟಿದ್ದಾರೆ. ಆದರೆ ಅವರೇ ಅಭ್ಯರ್ಥಿಯನ್ನೂ ಸೂಚಿಸಿರುವುದು ಕೂಡ ತಲೆನೋವಾಗಿದೆ. ಹಾಲಾಡಿ ಅವರ ಮಾತನ್ನು ಮೀರಿ ಬೇರೆ ಅಭ್ಯರ್ಥಿಗೆ ಟಿಕೆಟ್ ನೀಡುವ ಧೈರ್ಯವನ್ನು ಬಿಜೆಪಿ ಪಕ್ಷ ಸದ್ಯಕ್ಕಂತೂ ಪ್ರದರ್ಶಿಸುವ ಸಾಧ್ಯತೆ ಇಲ್ಲ ಎನ್ನಲಾಗಿದೆ.
ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಆರಂಭದಲ್ಲಿ 7ಕ್ಕೂ ಹೆಚ್ಚು ಬಿಜೆಪಿ ಟಿಕೆಟ್ ಆಕಾಂಕ್ಷಿಗಳಿದ್ದರು. ಆದರೆ ರಾಜ್ಯ ಬಿಜೆಪಿ ವರಿಷ್ಠರ ಸಭೆಯ ಬಳಿಕ ಹಾಲಿ ಶಾಸಕರು ಸೇರಿದಂತೆ ನಾಲ್ವರು ಆಕಾಂಕ್ಷಿಗಳ ಹೆಸರು ಬಿಜೆಪಿಯ ಪಟ್ಟಿಯಲ್ಲಿತ್ತು ಎನ್ನಲಾಗಿದೆ.
ಬೈಂದೂರು ಹಾಲಿ ಶಾಸಕ ಸುಕುಮಾರ ಶೆಟ್ಟಿ ಅವರು ಟಿಕೆಟಿಗಾಗಿ ಇನ್ನಿಲ್ಲದ ಪ್ರಯತ್ನ ನಡೆಸುತ್ತಿದ್ದಾರೆ. ಆದರೆ ಹಾಲಿ ಶಾಸಕರಿಗೆ ಟಿಕೆಟ್ ದೊರೆಯುವುದು ಕಷ್ಟ ಎನ್ನಲಾಗಿದೆ. ಇನ್ನು ಬಿಜೆಪಿಯ ಮುಖಂಡರಾದ ಕೆ. ಬಾಬು ಶೆಟ್ಟಿ ಅವರ ಹೆಸರು ಪಟ್ಟಿಯಲ್ಲಿ ಮೊದಲು ಇತ್ತದರೂ ಅಂತಿಮವಾಗಿ ಬೈಂದೂರು ಬಿಜೆಪಿ ಮಾಜಿ ಅಧ್ಯಕ್ಷ ಪ್ರಣಯ ಕುಮಾರ್ ಶೆಟ್ಟಿ ಹಾಗೂ ಆರ್.ಎಸ್.ಎಸ್ ಹಿನ್ನೆಲೆಯುಳ್ಳ ಸಂಘಟಕ ಗುರುರಾಜ ಗಂಟಿಹೊಳೆ ಅವರ ಹೆಸರು ಟಿಕೆಟ್ ರೇಸಿನಲ್ಲಿ ಮುಂಚೂಣಿಯಲ್ಲಿದ್ದಾರೆ.
ಇನ್ನು ರಾಜ್ಯ ಬಿಜೆಪಿಯ ನಾಯಕರ ಸಭೆಯಲ್ಲಿ ಬೈಂದೂರಿನ ಟಿಕೆಟ್ ಆಕಾಂಕ್ಷಿಗಳ ಹೆಸರು ಪ್ರಸ್ತಾಪ ಆಗಿರುವುದನ್ನೇ ಅಸ್ತ್ರವಾಗಿಸಿಕೊಂಡ ಅವರ ಬೆಂಬಲಿಗರು ನಮ್ಮ ನಾಯಕರಿಗೆ ಟಿಕೆಟ್ ಆಗಿದೆ ಎಂದು ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ. ಆದರೆ ಅಂತಿಮವಾಗಿ ಯಾರಿಗೆ ಟಿಕೆಟ್ ನೀಡಬೇಕು ಎಂಬುದು ದೆಹಲಿಯಲ್ಲಿ ಭಾನುವಾರ ನಡೆದ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿಯೂ ನಿರ್ಧಾರವಾಗಿಲ್ಲ. ಉಡುಪಿ ಅಥವಾ ಕಾಪುವಿನಲ್ಲಿ ಮೊಗವೀರ ಸಮುದಾಯದ ಅಭ್ಯರ್ಥಿಗೆ ಟಿಕೆಟ್ ದೊರೆತರೆ, ಬೈಂದೂರಿನಲ್ಲಿ ಬಂಟ ಸಮುದಾಯದ ಅಭ್ಯರ್ಥಿಗೆ ಟಿಕೆಟ್ ಸಿಗೋದು ಖಚಿತ. ಕಾಂಗ್ರೆಸ್ ಈಗಾಗಲೇ ಬೈಂದೂರು ಅಭ್ಯರ್ಥಿ ಘೋಷಿಸಿರುವುದರಿಂದ ಬಿಜೆಪಿಗೂ ಮೊದಲ ಪಟ್ಟಿಯಲ್ಲಿ ಅಭ್ಯರ್ಥಿಯ ಹೆಸರು ಘೋಷಣೆ ಮಾಡಬೇಕಾದ ಅನಿವಾರ್ಯತೆ ಇದೆ. ಆದರೆ ಇಂದಿನ ಸಭೆಯಲ್ಲಿ ಅಂತಿಮಗೊಳ್ಳದಿದ್ದರೆ 2ನೇ ಪಟ್ಟಿಯಲ್ಲಿ ಹೆಸರು ಬಿಡುಗಡೆಗೊಳಿಸಲಿದೆ.