ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕಳೆದ ಚುನಾವಣೆಯಲ್ಲಿ ಬಿಜೆಪಿಯವರು ಅಪಪ್ರಚಾರ ಮೂಲಕ ಧರ್ಮ ರಾಜಕಾರಣ ಮಾಡಿ ಕಾಂಗ್ರೆಸ್ಸನ್ನು ಸೋಲಿಸಿರಬಹುದು. ಆದರೆ ಈ ಬಾರಿ ಯಾವುದೇ ಆಟಗಳು ಬೈಂದೂರಿನಲ್ಲಿ ನಡೆಯುವುದಿಲ್ಲ. ಎಂದು ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಹೇಳಿದರು.
ಬೈಂದೂರು ಬಸ್‌ಸ್ಟ್ಯಾಂಡ್ ಮೈದಾನದಲ್ಲಿ ಮಂಗಳವಾರ ನಡೆದ ಕಾಂಗ್ರೆಸ್ ಕಾರ್ಯಕರ್ತರ ಬೃಹತ್ ಸಭೆಯಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡಿದರು. ರಾಜ್ಯ ಸರ್ಕಾರದ ದುರಾಡಳಿತದಿಂದ ಜನಸಾಮಾನ್ಯರು ಬದಲಾವಣೆ ಬಯಸಿದ್ದು, ಒಂದು ಲಕ್ಷಕ್ಕೂ ಅಧಿಕ ಮತಗಳ ಅಂತರದಲ್ಲಿ ಗೋಪಾಲ ಪೂಜಾರಿ ಜಯಗಳಿಸಲಿದ್ದಾರೆ ಎಂದರು.
ಬೈಂದೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ. ಗೋಪಾಲ ಪೂಜಾರಿ ಮಾತನಾಡಿ, ಕಳೆದ ಚುನಾವಣೆಯಲ್ಲಿ ಧರ್ಮಾಧಾರಿತ ವಿಷಯಗಳನ್ನು ಮುಂದಿಟ್ಟುಕೊಂಡು ಸುಳ್ಳು ಭರವಸೆಗಳನ್ನು ನೀಡುವ ಮೂಲಕ ಜನರಿಗೆ ಅನ್ಯಾಯ ಮಾಡಿದ್ದೀರಿ. ಜನರನ್ನು ಭಾವನಾತ್ಮಕ ವ್ಯೂಹದೊಳಗೆ ಸಿಲುಕಿಸಿ ಮತಗಳಿಸಿದ್ದೀರಿ. ಆದರೆ ಪ್ರತೀ ಬಾರಿಯೂ ಜನರನ್ನು ಮೂರ್ಖರನ್ನಾಗಿಸಲು ಸಾಧ್ಯವಿಲ್ಲ. ಹಿಂದುತ್ವ ಹಾಗೂ ಕೇಸರಿಶಾಲು ಕೇವಲ ಬಿಜೆಪಿಯವರು ಮಾತ್ರ ಗುತ್ತಿಗೆ ಪಡೆದಿದ್ದಲ್ಲ. ಇದನ್ನು ಸಾಬೀತು ಮಾಡಲು ನಮ್ಮ ಹೆಚ್ಚಿನ ಕಾರ್ಯಕರ್ತರು ಈ ಸಭೆಯಲ್ಲಿ ಕೇಸರಿಶಾಲು ಧರಿಸಿ ಬಂದಿದ್ದಾರೆ ಎಂದ ಅವರು ಭಯೋತ್ಪಾದನೆ ನಮ್ಮ ಪಕ್ಷದವರು ಮಾಡಲಿಲ್ಲ. ದೇಶಕ್ಕಾಗಿ ತ್ಯಾಗ, ಬಲಿದಾನ ಮಾಡಿದ ಪಕ್ಷ ಕಾಂಗ್ರೆಸ್ಸಾಗಿದ್ದು, ಯಡಮೊಗೆ, ಕೋಟಗಳಲ್ಲಿ ನಡೆದ ಕೊಲೆಗಳನ್ನು ಮಾಡಿದವರು ಬಿಜೆಪಿ ಕಾರ್ಯಕರ್ತರೇ ಕಾರಣ ಎಂಬುದನ್ನು ನೆನಪಿಸಿಕೊಳ್ಳಿ ಎಂದು ಸಚಿವ ಶ್ರೀನಿವಾಸ ಪೂಜಾರಿಯವರ ಹೇಳಿಕೆಗೆ ತಿರುಗೇಟು ನೀಡಿದ ಅವರು, ಈ ಬಗ್ಗೆ ಸಚಿವರು ಸಾರ್ವಜನಿಕರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು. ಕಾಂಗ್ರೆಸ್ ಪರಿವಾರದವರ ಪಕ್ಷ ಎನ್ನುವವರು ಈಗ ಜಿಲ್ಲೆಯಲ್ಲಿ ಪ್ರಯೋಗದ ಮೂಲಕ ಇವರ ಪರಿವಾರ (ಸಂಘ)ಕ್ಕೆ ಮಣೆಹಾಕುತ್ತಿರುವುದು ಹಾಸ್ಯಾಸ್ಪದ ಎಂದು ವ್ಯಂಗವಾಡಿದರು.
ನಿವೃತ್ತ ಎಸಿಎಫ್ಒ ಪರಮಯ್ಯ ಗೊಂಡ ಹಾಗೂ ಅವರ ಸಹಚರ ಪಕ್ಷಕ್ಕೆ ಸೇರ್ಪಡೆಗೊಂಡರು. ಬೈಂದೂರು, ವಂಡ್ಸೆ ಬ್ಲಾಕ್ ಕಾಂಗ್ರೆಸ್ ಹಾಲಿ ಹಾಗೂ ಮಾಜಿ ಅಧ್ಯಕ್ಷರು, ಪದಾಧಿಕಾರಿಗಳು, ವಿವಿಧ ಸ್ತರದ ಮುಖಂಡರು, ಹಿರಿಯ ಕಾರ್ಯಕರ್ತರು ಇದ್ದರು. ಪ್ರಸನ್ನಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.
ಬೆಳಿಗ್ಗೆ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಇಲ್ಲಿನ ಗ್ರಾಮದೇವರು ಶ್ರೀ ಸೇನೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ಯಡ್ತರೆಯಿಂದ ಸಹಸ್ರಾರು ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರು ಪಾದಯಾತ್ರೆ ಮೂಲಕ ಕಾಂಗ್ರೆಸ್ ಪರ ಘೋಷಣೆಗಳನ್ನು ಕೂಗುತ್ತಾ ಬೈಂದೂರು ಬಸ್ಸ್ಟ್ಯಾಂಡ್ ಮೈದಾನದ ತನಕ ಸಾಗಿದರು. ಮಧ್ಯಾಹ್ನ ಗೋಪಾಲ ಪೂಜಾರಿ ಅವರು ನಾಮಪತ್ರ ಸಲ್ಲಿಸಿದರು.