ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮೇ.10ರಂದು ನಡೆಯಲಿರುವ ಚುನಾವಣೆಗೆ ಸಿದ್ಧರಾಗಿರುವ ಅಧಿಕಾರಿಗಳು ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜು ಹಾಗೂ ಬೈಂದೂರು ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಸ್ಥಾಪಿಸಿರುವ ಮಸ್ಟರಿಂಗ್ ಕೇಂದ್ರದಲ್ಲಿ ಹಾಜರಾಗಿ ತಮ್ಮತಮ್ಮ ಕೇಂದ್ರಗಳಿಗೆ ಅಗತ್ಯವಿರುವ ಮತದಾನ ಯಂತ್ರ ಮತ್ತು ಅನ್ಯ ಪರಿಕರಗಳನ್ನು ಸ್ವೀಕರಿಸಿ, ತಮಗೆ ನಿಗದಿಗೊಳಿಸಿದ ವಾಹನಗಳಲ್ಲಿ ತೆರಳಿದರು.
ಕುಂದಾಪುರ ಚುನಾವಣಾಧಿಕಾರಿ ರಶ್ಮಿ ಅವರ ನೇತೃತ್ದಲ್ಲಿ ಕುಂದಾಪುರ ಕ್ಷೇತ್ರದ ಮಸ್ಟರಿಂಗ್ ಭಂಡಾರ್ಕಾರ್ಸ್ ಕಾಲೇಜಿನ ಆರ್.ಎನ್.ಶೆಟ್ಟಿ ಹಾಲ್ನಲ್ಲಿ ನಡೆದರೆ, ಬೈಂದೂರು ಚುನಾವಣೆ ಜಗದೀಶ ಗಂಗಣ್ಣನವರ್ ನೇತೃತ್ವದಲ್ಲಿ ಬೈಂದೂರು ಕ್ಷೇತ್ರದ ಮಸ್ಟರಿಂಗ್ ಕಾಲೇಜಿನ ಹಾಲ್ನಲ್ಲಿ ನಡೆಯಿತು. ಅಧಿಕಾರಿ ಹಾಗೂ ಸಿಬ್ಬಂದಿಗಳು ಮತಯಂತ್ರ ಸಹಿತ ಮತಕೇಂದ್ರಕ್ಕೆ ತೆರಳಿದರು.
ಸಿಬ್ಬಂದಿ ಹಾಜರಾತಿ ದಾಖಲಿಸಲು ಮತ್ತು ಪರಿಕರಗಳನ್ನು ವಿತರಿಸಲು ಸೆಕ್ಟರ್ ಅಧಿಕಾರಿಗಳ ನೇತೃತ್ವದ ವಿಭಾಗಗಳನ್ನು ತೆರೆಯಲಾಗಿತ್ತು. ಅವುಗಳಿಗೆ ಸಂಬಂಧಿಸಿದ ವಿವರಗಳ ಫಲಕಗಳನ್ನು ಅಲ್ಲಲ್ಲಿ ಪ್ರದರ್ಶಿಸಲಾಗಿತ್ತು. ಬೆಳಗ್ಗಿನಿಂದ ಬಂದ ಸಿಬ್ಬಂದಿ ಫಲಾಹಾರ ಪೂರೈಸಿ, ತಮ್ಮ ವಿಭಾಗದಲ್ಲಿ ಸೇರಿ ಪರಸ್ಪರ ಪರಿಚಯ ಮಾಡಿಕೊಂಡು, ಪರಿಕರಗಳನ್ನು ಸ್ವೀಕರಿಸಿ, ಪರಿಶೀಲನೆ ನಡೆಸಿದರು. 246 ಮತಗಟ್ಟೆಗಳಿಗೆ ನಿಯೋಜಿಸಲಾದ ಮತಗಟ್ಟೆ ಅಧಿಕಾರಿಗಳು, ಸಿಬ್ಬಂದಿಗಳು, ಪೋಲೀಸ್ ಸಿಬ್ಬಂಧಿಗಳು, ಸಿಎಪಿಎಫ್ ಸಿಬ್ಬಂಧಿಗಳು ಭಾಗವಹಿಸಿ ತಮ್ಮ ಮತಗಟ್ಟೆಗಳಿಗೆ ಹಂಚಿಕೆ ಮಾಡಿದ ಚುನಾವಣಾ ಸಾಮಾಗ್ರಿಗಳನ್ನು, ಇವಿಎಂ ಹಾಗೂ ವಿವಿಪ್ಯಾಡ್ ಮತಯಂತ್ರಗಳನ್ನು ಮಸ್ಟರಿಂಗ್ ಕೇಂದ್ರದಿಂದ ಪಡೆದು ಅವುಗಳು ಸರಿಯಾಗಿ ಕಾರ್ಯನಿರ್ವಹಿಸುವುದನ್ನು ಖಚಿತಪಡಿಸಿಕೊಂಡರು. ಅದೇ ದಿನ ಮೊದಲೇ ನಿಗದಿಪಡಿಸಿದ ಮತಗಟ್ಟೆಗಳಿಗೆ ವಾಹನದಲ್ಲಿ ತೆರಳಲಿದ್ದಾರೆ.
ಚುನಾವಣೆಗೆ ಸಕಲ ಸಿದ್ದತೆ
ಬೈಂದೂರು ಚುನಾವಣಾಧಿಕಾರಿ ಜಗದೀಶ ಚುನಾವಣಾ ತಯಾರಿ ಬಗ್ಗೆ ಮಾತನಾಡಿ, ಮೇ. 10 ರಂದು ಬೆಳಗ್ಗೆ 7ಗಂಟೆಯಿAದ ಸಂಜೆ 6 ಗಂಟೆಯವರೆಗೆ ಮತದಾನ ಪ್ರಕ್ರಿಯೆ ನಡೆಯಲಿದ್ದು ಮತದಾನ ಪ್ರಕ್ರಿಯೆಗಾಗಿ ಸುಮಾರು 2500ಕ್ಕೂ ಅಧಿಕ ಸಿಬ್ಬಂದಿಗಳನ್ನು ನಿಯೋಜಿಸಲಾಗಿದ್ದು, ಚುನಾವಣೆಗಾಗಿ ಸಕಲ ಸಿದ್ದತೆ ಮಾಡಕೊಳ್ಳಲಾಗಿದೆ ಎಂದರು.
ಚುನಾವಣಾ ಪ್ರಕ್ರಿಯೆ:
ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 5 ಮತಗಟ್ಟೆಗಳು ದುರ್ಬಲ ಹಾಗೂ 44 ಮತಗಟ್ಟೆಗಳು ನಿರ್ಣಾಯಕ ಮತಗಟ್ಟೆಗಳಿದ್ದು, ಇಲ್ಲಿ ಮತಗಟ್ಟೆಗಳಿಗೆ ಸಿಎಪಿಎಫ್ನ ಅರ್ಧ ತುಕಡಿ ಭದ್ರತೆಯನ್ನು ಒದಗಿಸಲಾಗಿದೆ ಹಾಗೂ ಹೆಚ್ಚುವರಿಯಾಗಿ 1 ಪೋಲೀಸ್ ಸಿಬ್ಬಂಧಿಯನ್ನು ನಿಯೋಜಿಸಲಾಗಿದೆ. 246 ಮತಗಟ್ಟೆಗಳ ಪೈಕಿ 123 ಮತಗಟ್ಟೆಗಳಲ್ಲಿ ವೆಬ್ಕಾಸ್ಟಿಂಗ್ ನ್ನು ಮಾಡಲಾಗಿದ್ದು, ಇದರ ಮೂಲಕ ನೇರ ಪ್ರಸಾರವನ್ನು ಮಾನ್ಯ ಮುಖ್ಯ ಚುನಾವಣಾಧಿಕಾರಿಗಳು, ಬೆಂಗಳೂರು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ಉಡುಪಿ ಜಿಲ್ಲೆ, ಉಡುಪಿ ಇವರ ಕಛೇರಿಯಲ್ಲಿ ವೀಕ್ಷಿಸಲಾಗುತ್ತದೆ ಎಂದರು.
ಮತದಾನ ಪ್ರಕ್ರಿಯೆ ಮುಗಿದ ಬಳಿಕ ಮತಗಟ್ಟೆ ಅಧಿಕಾರಿಗಳು ಚುನಾವಣಾ ಸಾಮಾಗ್ರಿಗಳನ್ನು, ಶಾಸನಬದ್ಧ, ಶಾಸನಬದ್ಧವಲ್ಲದ ಲಕೋಟೆಗಳನ್ನು, ಚುನಾವಣಾ ಪ್ರಕ್ರಿಯೆಯಲ್ಲಿ ಬಳಸುವ ಮುಖ್ಯವಾದ ವಿವರಗಳುಳ್ಳ ನಮೂನೆಗಳು ಹಾಗೂ ಮತದಾನವಾದ ಇವಿಎಂ ಮತ್ತು ವಿವಿಪ್ಯಾಡ್ ಮತಯಂತ್ರಗಳನ್ನು ಡಿಮಸ್ಟರಿಂಗ್ ಕೇಂದ್ರಕ್ಕೆ ಸಲ್ಲಿಸಿದ ನಂತರ ಸದರಿ ಚುನಾವಣಾ ಸಾಮಾಗ್ರಿಗಳನ್ನು ಜಿ.ಪಿ.ಎಸ್ ಅಳವಡಿಸಿರುವ ಮುಚ್ಚಿದ ಕಂಟೈನರ್ಗಳಲ್ಲಿ ಉಡುಪಿಯ ಭದ್ರತಾ ಕೊಠಡಿಗಳಲ್ಲಿ ದಾಸ್ತಾನು ಇಡಲಾಗುವುದು ಎಂದರು.
ಮತದಾನದ ಹಿಂದಿನ ದಿನ ಹಾಗೂ ಮತದಾನದ ದಿನದಂದು ಯಾವುದಾದರೂ ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾದ ಪ್ರಕರಣಗಳು ಕಂಡು ಬಂದಲ್ಲಿ ಹಾಗೂ ಕಾನೂನು ಸುವ್ಯವಸ್ಥೆಗೆ ವಿರುದ್ಧವಾದ ಪ್ರಕರ£ಣಗಳು ಕಂಡು ಬಂದಲ್ಲಿ ಚುನಾವಣಾಧಿಕಾರಿಗಳ ಕಾರ್ಯಾಲಯ 118 ಬೈಂದೂರು ವಿಧಾನಸಭಾ ಕ್ಷೇತ್ರದ ಕಂಟ್ರೋಲ್ ರೂಂ ಲ್ಯಾಂಡ್ ಲೈನ್ ನಂ 08254 251657, ಕಂಟ್ರೋಲ್ ರೂಂ ಮೊಬೈಲ್ ನಂ. 9380753009 ಇಲ್ಲಿಗೆ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.