ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಗುರುರಾಜ್ ಗಂಟಿಹೊಳೆ ಅವರು ಬಿಜೆಪಿ ತ್ರಾಸಿ ಮಹಾಶಕ್ತಿ ಕೇಂದ್ರ ವ್ಯಾಪ್ತಿಯಲ್ಲಿ ವಿಜಯೋತ್ಸವದ ರೋಡ್ ಶೋ ಮೂಲಕ ಮತದಾರರಿಗೆ ಕೃತಜ್ಞತೆ ಸಲ್ಲಿಸಿದರು.
ಮುಳ್ಳಿಕಟ್ಟೆ, ತ್ರಾಸಿ, ಕಂಚುಗೋಡು, ಹೊಸಪೇಟೆ, ಗಂಗೊಳ್ಳಿ, ಗುಜ್ಜಾಡಿ ಹಾಗೂ ನಾಯಕವಾಡಿ ಪ್ರದೇಶದಲ್ಲಿ ತೆರೆದ ವಾಹನದಲ್ಲಿ ರೋಡ್ ಶೋ ನಡೆಸಿದ ಶಾಸಕ ಗುರುರಾಜ್ ಗಂಟಿಹೊಳೆ ಅವರಿಗೆ ಜನರು ಅದ್ದೂರಿ ಸ್ವಾಗತ ನೀಡಿದರು. ಚುನಾವಣೆಯಲ್ಲಿ ಗೆಲುವಿಗೆ ಸಹಕರಿಸಿದ ಮತದಾರರಿಗೆ ಕೃತಜ್ಞತೆ ಸಲ್ಲಿಸಿದ ಶಾಸಕ ಗುರುರಾಜ್ ಗಂಟಿಹೊಳೆ, ಜನರ ನಿರೀಕ್ಷೆಗೆ ತಕ್ಕಂತೆ ಕಾರ್ಯಕರ್ತರ ಶಾಸಕನಾಗಿ ಕಾರ್ಯ ನಿರ್ವಹಿಸುತ್ತೇನೆ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದರೂ ಪರವಾಗಿಲ್ಲ. ಕ್ಷೇತ್ರದ ಅಭಿವೃದ್ಧಿಗೆ ಹಾಗೂ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತೇನೆ. ಜನರು ನನ್ನ ಮೇಲೆ ಇಟ್ಟರುವ ಭರವಸೆಗಳನ್ನು ಉಳಿಸಿಕೊಳ್ಳುವ ನಂಬಿಕೆ ಇದ್ದು, ಮುಂದಿನ ಐದು ವರ್ಷಗಳ ಕಾಲ ಬೈಂದೂರಿನ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವುದಾಗಿ ಅವರು ಭರವಸೆ ನೀಡಿದರು.
ದಾರಿಯುದ್ದಕ್ಕೂ ಜನರು ಶಾಸಕ ಗುರುರಾಜ್ ಗಂಟಿಹೊಳೆ ಅವರಿಗೆ ಹೂಮಾಲೆ ಹಾಕಿ, ಹೂವಿನ ಸುರಿಮಳೆಗೈದು ಅಭಿನಂದಿಸಿದರು. ವಿವಿಧ ಸಂಘ ಸಂಸ್ಥೆಗಳು ಶಾಸಕ ಗುರುರಾಜ್ ಗಂಟಿಹೊಳೆ ಅವರನ್ನು ಸನ್ಮಾನಿಸಿದರು.
ಬೈಂದೂರು ಮಂಡಲ ಅಧ್ಯಕ್ಷ ದೀಪಕಕುಮಾರ್ ಶೆಟ್ಟಿ, ತಾಪಂ ಮಾಜಿ ಸದಸ್ಯ ಕರಣ್ ಪೂಜಾರಿ, ಬಿಜೆಪಿ ಮುಖಂಡರಾದ ಬಿ.ಸದಾನಂದ ಶೆಣೈ, ಉಮೇಶ ಮೇಸ್ತ, ಗಂಗೊಳ್ಳಿ ಗ್ರಾಪಂ ಅಧ್ಯಕ್ಷ ಶ್ರೀನಿವಾಸ ಖಾರ್ವಿ, ಉಪಾಧ್ಯಕ್ಷೆ ಪ್ರೇಮಾ ಸಿ.ಪೂಜಾರಿ, ಗಂಗೊಳ್ಳಿ ಮತ್ತು ಗುಜ್ಜಾಡಿ ಗ್ರಾಪಂ ಸದಸ್ಯರು, ವಿವಿಧ ಶಕ್ತಿ ಕೇಂದ್ರಗಳ ಅಧ್ಯಕ್ಷರು, ಬಿಜೆಪಿ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.