ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕಳೆದ ಇಪ್ಪತ್ತೈದು ವರ್ಷದಿಂದ ಹಾಲಾಡಿ ಸಾಧಿಸಿದಿ ಜನಪ್ರಿಯತೆ, ಗಳಿಸಿದ ಪ್ರೀತಿ, ಒಳ್ಳೆಯ ತನದೊಟ್ಟಿಗೆ ಅಭ್ಯರ್ಥಿ ಕಿರಣ್ ಕೊಡ್ಗಿ ನಿಷ್ಕಳಂಕ ವ್ಯಕ್ತಿತ್ವ ಕುಂದಾಪುರದಲ್ಲಿ ನಿರೀಕ್ಷೆಗೂ ಮೀರಿ ಮತದಾರರು ಸ್ಪಂದಿಸಿದ್ದು, ಒಳ್ಳೆಯ ತನ ಗೆದ್ದಿದೆ. ಹಾಗೆ ಬಿಜೆಪಿ ವಿರೋಧ ಪಕ್ಷದ ಸಾಲಿನಲ್ಲಿದ್ದು, ಕಾಂಗ್ರೆಸ್ ಕೊಟ್ಟ ಗ್ಯಾರೆಂಟಿ ಈಡೇರಿಸದಿದ್ದರೆ ಕಾರ್ಯಕರ್ತರು ಬೀದಿಗಳಿದು ಹೋರಾಟಕ್ಕೂ ಸಿದ್ದರಾಗಬೇಕು ಎಂದು ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಕರೆ ಕೊಟ್ಟರು.
ಕುಂದಾಪುರ ಮಂಡಲ ಬಿಜೆಪಿ ಕೋಟೇಶ್ವರ ಸರಸ್ವತಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಆಯೋಜಿಸಿದ ನೂತನ ಶಾಸಕ ಕಿರಣ್ ಕುಮಾರ್ ಕೊಡ್ಗಿ ಅಭಿನಂದನೆ ಹಾಗೂ ಕಾರ್ಯಕರ್ತರ ಕೃತಜ್ಞತೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕುಂದಾಪುರ ಮಂಡಲ ಬಿಜೆಪಿ ಅಧ್ಯಕ್ಷ ಶಂಕರ ಅಂಕದಕಟ್ಟೆ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ಕೊಯಿಲಾಡಿ ಸುರೇಶ್ ನಾಯಕ್, ಮಾಜಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಶಾಸಕ ಕಿರಣ್ ಕುಮಾರ್ ಕೊಡ್ಗಿ, ಕುಂದಾಪುರ ಚುನಾವಣಾ ಉಸ್ತುವಾರಿ ಶ್ಯಾಮಲಾ ಕುಂದರ್, ಮಹಿಳಾ ಮೋರ್ಚಾ ಜಿಲ್ಲಾ ಉಪಾಧ್ಯಕ್ಷೆ ಅನಿತಾ ಶ್ರೀಧರ್, ಕುಂದಾಪುರ ಚುನಾವಣಾ ನಿರ್ವಹಣಾ ಸಮಿತಿ ಕಾರ್ಯದರ್ಶಿ ಸುರೇಶ್ ಶೆಟ್ಟಿ ಕಾಡೂರು, ಮೀನುಗಾರಿಕಾ ಪ್ರಕೋಷ್ಠ ಮಾಜಿ ಅಧ್ಯಕ್ಷ ಸದಾನಂದ ಬಳ್ಕೂರು, ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಗೋಪಾಲ ಕಳಂಜೆ ಇದ್ದರು.
ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಸುರೇಶ್ ಶೆಟ್ಟಿ ಗೋಪಾಡಿ ಸ್ವಾಗತಿಸಿದರು. ಸತೀಶ್ ಪೂಜಾರಿ ವಕ್ವಾಡಿ ನಿರೂಪಿಸಿದರು. ಕಾರ್ಯಕ್ರಮಕ್ಕೂ ಮುನ್ನಾ ಗೋಪೂಜೆ ನೆರವೇರಿಸಲಾಯಿತು.
ಮಾಜಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಮಾತನಾಡಿ, ಕುಂದಾಪುರ ವಿಧಾನ ಸಭಾ ಚುನಾವಣೆಯಲ್ಲಿ ಜೋಡೆತ್ತಲ್ಲ ಹಾಲಾಡಿ, ಕೋಟ, ಕೊಡ್ಗಿ ಮೂರೆತ್ತಿನಂತೆ ಕೆಲಸ ಮಾಡಿದ್ದು, ಮತದಾರರು ಬಿಜೆಪಿ ಅಭ್ಯರ್ಥಿ ಬೆಂಬಲ ನೀಡಿದ್ದಾರೆ. ಚುನಾವಣೆ ಪ್ರನಾಳಿಕೆ ಬೇರೆ ಗ್ಯಾರೆಂಟಿ ಬೇರೆಯಾಗಿದ್ದು, ಅಮಿಷಗಳ ಗ್ಯಾರೆಂಟಿ ಪ್ರಜಾಪ್ರಭುತ್ವ ವ್ಯವಸ್ಥೆಯ ದೌರ್ಭಾಗ್ಯ. ಕಿರಣ್ ಕುಮಾರ್ ಕೊಡ್ಗಿ ಮುಂದಿನ ಹಾದಿ ಮುಳ್ಳಿನ ಹಾಸಿಗೆಯಾಗಿದ್ದು, ಬ್ಯೂಟಿ ಪಾರ್ಲರ್ ಮೇಕಪ್ ರಾಜಕೀಯ ಮಾರಕ. ನೂತನ ಶಾಸಕ ಕಿರಣ್ ಕುಮಾರ್ ಯಶಸ್ಸು ಸಿಗಲಿ, ಸಹಕರಿಸಿದ ಮತದಾರರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಶಾಸಕ ಕಿರಣ್ ಕುಮಾರ್ ಕೊಡ್ಗಿ ಅವರು ಮಾತನಾಡಿ, ಚುನಾವಾವಣೆ ಸಮಯದಲ್ಲಿ ಕಾಂಗ್ರೆಸ್ ಅಮಾಸೆಬೈಲು ಅಭಿವೃದ್ಧಿ ಮಾಡಲಾಗದವರು ಇನ್ನೇನು ಅಭಿವೃದ್ಧಿ ಮಾಡುತ್ತಾರೆ. ಉಡುಪಿಯಲ್ಲಿ ಇರುತ್ತಾರೆ ಎನ್ನುವ ಆರೋಪಕ್ಕೆ ತಿರುಗೇಟು ನೀಡಿ, ಹಾಲಾಡಿ ಶ್ರೀನಿವಾಸ ಶೆಟ್ಟಿ ಸಹಕಾರದಲ್ಲಿ ಎಲ್ಲಾ ರಸ್ತೆಗಳು ಅತ್ಯುತ್ತಮವಾಗಿದೆ. ಶಾಲೆಗಳ ಅಭಿವೃದ್ಧಿ ಬಗ್ಗೆ ಏನಾಗಿದೆ ಎನ್ನೋದು ನೋಡಿ ಅಥವಾ ಕೇಳಿ ತಿಳಿದುಕೊಳ್ಳಲಿ. ರಾಜ್ಯದಲ್ಲಿ ಮೊದಲ ಸೋಲಾರ್ ಗ್ರಾಮ ಅಮಸೆಬೈಲು. ಇತಿಮಿತಿ ಅರಿತು ಕ್ಷೇತ್ರದ ಅಭಿವೃದ್ಧಿ ಜನರ ಸಹಕಾರದಲ್ಲಿ ಮಾಡುವ ಭರವಸೆ ನೀಡಿದರು.