ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ಕಾಳವಾರದ ಕೆರೆಯಲ್ಲಿ ಭಾನುವಾರ ರಾತ್ರಿ ವೇಳೆ ಮೀನು ಹಿಡಿಯಲು ತೆರಳಿದ್ದ ವ್ಯಕ್ತಿ ಮುಳುಗಿ ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಸತತ ಹುಡುಕಾಟದ ಬಳಿಕ ಸೋಮವಾರ ಪತ್ತೆಯಾಗಿದೆ. ನರಿಕೊಡ್ಲು ಮನೆ ನಿವಾಸಿ ಹರೀಶ್ ಪೂಜಾರಿ (37) ಮೃತ ದುರ್ದೈವಿ.
ಭಾನುವಾರ ರಾತ್ರಿ ಕಾಳಾವಾರ ದೇವಸ್ಥಾನದ ಸಮೀಪವಿರುವ ಕೆರೆಗೆ ಮೂವರು ಸ್ನೇಹಿತರು ಒಟ್ಟಾಗಿ ಮೀನು ಹಿಡಿಯಲು ತೆರಳಿದ್ದಾರೆ. ಮೂವರ ಪೈಕಿ ಹರೀಶ್ ನೀರಿಗಿಳಿದು ಈಜುತ್ತಿದ್ದಾಗ ನಿಯಂತ್ರಣ ಕಳೆದುಕೊಂಡು ಮುಳುಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ರಾತ್ರಿಯೇ ಕುಂದಾಪುರ ಗ್ರಾಮಾಂತರ ಠಾಣೆ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿಗಳು ಹಾಗೂ ಸ್ಥಳೀಯರು ಘಟನಾ ಸ್ಥಳದಲ್ಲಿ ಮಧ್ಯರಾತ್ರಿವರೆಗೂ ಹುಡುಕಾಟ ನಡೆಸಿದ್ದರು. ಆದರೆ ಮೃತದೇಹ ಪತ್ತೆಯಾಗಿರಲಿಲ್ಲ.
ಸೋಮವಾರ ಬೆಳಿಗ್ಗೆ ಮುಳುಗು ತಜ್ಞ ಈಶ್ವರ ಮಲ್ಪೆ, ಶಬ್ಬೀರ್ ಮಲ್ಪೆ ಅವರ ತಂಡ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾಳಾವರ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸುಧೀರ್ ಜಿ., ರಾಜಶೇಖರ್, ಪ್ರಕಾಶ್ ಆಚಾರ್ ಹಾಗೂ ಅಗ್ನಿ ಶಾಮಕ ದಳದವರು ಜಂಟಿ ಕಾರ್ಯಾಚರಣೆ ನಡೆಸಿ ಮೃತಹೇತ ಪತ್ತೆ ಮಾಡಿದ್ದಾರೆ.
ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.