ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಕಳೆದ ನಾಲ್ಕು ದಿನಗಳಿಂದ ನಿರಂತರ ಮಳೆಯಾಗುತ್ತಿದ್ದು, ಕಡಲು ಪ್ರಕ್ಷುದ್ಧಗೊಂಡು ತೀರ ಪ್ರದೇಶದ ಜನರಲ್ಲಿ ಆತಂಕ ಮನೆಮಾಡಿದೆ. ಕೋಡಿ ಕನ್ಯಾನ ಗ್ರಾಮದಲ್ಲಿ ಕಡಲ್ಕೋರೆತ ಈ ಭಾರಿಯೂ ಕಡಲಕೊರೆತ ಉಂಟಾಗಿದ್ದು, ತೀರ ಪ್ರದೇಶದ ರಸ್ತೆ, ಮರಗಳು ಹಾಗೂ ತಾತ್ಕಾಲಿಕ ತಡೆಗೋಡೆಗಳು ಕಡಲಪಾಲಾಗಿವೆ.
ಕಡಲಕೊರೆತ ಹೀಗೆಯೇ ಮುಂದುವರಿದರೆ ತೀರ ಪ್ರದೇಶದ ಹಲವು ಮನೆಗಳು ಅಪಾಯ ಎದುರಾಗಲಿದೆ. ಹಲವು ವರ್ಷಗಳಿಮದ ಕೋಡಿ ಕನ್ಯಾನ ಕಡಲಕೊರೆತವಿದ್ದು, ಶಾಶ್ವತ ಪರಿಹಾರ ಒದಗಿಸಿಕೊಡುವಂತೆ ಜನಪ್ರತಿನಿಧಿಗಳಲ್ಲಿ ಮನವಿ ಮಾಡಲಾಗಿತ್ತು. ಅಲ್ಲಲ್ಲಿ ತಾತ್ಕಾಲಿಕ ತಡೆಗೋಡೆ ನಿರ್ಮಿಸಿದ್ದು, ಅದೂ ಕೂಡ ಸಮುದ್ರದಲೆಗಳ ಹೊಡೆತಕ್ಕೆ ಸಿಕ್ಕು ಕುಸಿದುಹೋಗಿದೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಲ್ಲಿ ಶಾಶ್ವತ ಪರಿಹಾರ ಒದಗಿಸುವಂತೆ ಹಲವು ಭಾರಿ ಮನವಿ ಮಾಡಲಾಗಿದ್ದು, ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.
* ಈ ಭಾಗದಲ್ಲಿ ಹಲವಾರು ವರ್ಷದಿಂದ ಕಡಲ್ಕೋರೆತ ಸಮಸ್ಯೆ ಇದ್ದು, ರಾಜಕೀಯ ನಾಯಕರ ಇಚ್ಚಾಶಕ್ತಿಯ ಕೊರತೆಯಿಂದ ಯಾವುದೇ ಅಗತ್ಯ ಕೆಲಸಗಳು ಆಗದೇ ಭಾರಿ ಸಮಸ್ಯೆ ಎದುರಾಗಿದೆ. ಸಮುದ್ರ ತಟದಲ್ಲಿ ರೆಸಾರ್ಟ್ ಹಾಗೂ ಮನೆಗಳನ್ನು ನಿರ್ಮಾಣ ಮಾಡುವವರು ಬೃಹತ್ ಮರಗಳನ್ನು ಕಡಿದಿರುವುದು ಕಡಲ್ಕೋರೆತಕ್ಕೆ ಕಾರಣವಾಗಿರಬಹುದು. ಮೀನುಗಾರಿಕೆ ರಸ್ತೆಯು ನೋಡ ನೋಡುತ್ತಲೇ ಸಮುದ್ರದ ಪಾಲಾಗುತ್ತಿದೆ. – ನಾಗರಾಜ್ ಕೋಡಿ, ಗ್ರಾಮಸ್ಥರು
ತೀರ ಪ್ರದೇಶದಲ್ಲಿ ಅಪಾಯ ಎದುರಿಸುತ್ತಿರುವ ಮನೆಗಳಿಗೆ ತೊಂದರೆಯಾಗದ ರೀತಿಯಲ್ಲಿ ತಾತ್ಕಾಲಿಕ ತಡೆಗೋಡೆ ನಿರ್ಮಾಣ ಹಾಗೂ ಸರಕಾರದ ಹಣ ಮಂಜೂರಾದ ನಂತರ ಶಾಶ್ವತ ತಡೆಗೋಡೆ ನಿರ್ಮಿಸಿಕೊಡಲು ಕ್ರಮವಹಿಸುವಂತೆ ಶಾಸಕ ಕಿರಣ್ ಕೊಡ್ಗಿ ಮತ್ತು ಮೀನುಗಾರಿಕೆ ಸಚಿವ ಮಂಕಾಳ ವೈದ್ಯ ಅವರಿಗೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.