ಕುಂದಾಪುರ: ಪಶ್ಚಿಮ ಘಟ್ಟ ಜೀವ ಸೂಕ್ಷ್ಮ ಪ್ರದೇಶಗಳ ವ್ಯಾಪ್ತಿಗೆ ಸೇರಿಸಲಾಗಿದೆ ಎನ್ನಲಾದ ಪ್ರದೇಶಗಳನ್ನು ಅಧಿಕಾರಿಗಳ ಮಟ್ಟದಲ್ಲಿ ಪ್ರಥಮವಾಗಿ ಗಡಿ ಗುರುತಿಸುವಿಕೆ, ಭೌಗೋಳಿಕ ಸಮೀಕ್ಷೆಯನ್ನು ಮಾಡಬೇಕಾಗಿತ್ತು. ಆ ಕೆಲಸ ಆಗದೇ ಇವತ್ತು ಗೊಂದಲಗಳು ಉಂಟಾಗಿವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪರಸ್ಪರ ದೋಷರೋಪಣೆಯನ್ನು ಮಾಡುವುದನ್ನು ಬಿಟ್ಟು ರೈತರು, ಜನಸಾಮಾನ್ಯರ ಹಿತಾಸಕ್ತಿಯನ್ನು ಎತ್ತಿ ಹಿಡಿಯಬೇಕಾಗಿದೆ. ಜನರಿಗೆ ಮತ್ತೆ ಮತ್ತೆ ಸಮಸ್ಯೆಗಳು ಆಗಬಾರದು ಎಂದು ವಿಧಾನ ಪರಿಷತ್ ಸದಸ್ಯ, ಉಡುಪಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಪ್ರತಾಪಚಂದ್ರ ಶೆಟ್ಟಿ ಹೇಳಿದರು.
ವಂಡ್ಸೆ ಗ್ರಾಮ ಪಂಚಾಯತ್ ಆಶ್ರಯದಲ್ಲಿ ಅರಣ್ಯ ಇಲಾಖೆಯ ವಿಶ್ರಾಂತಿದಾಮದಲ್ಲಿ ಪಶ್ಚಿಮ ಘಟ್ಟ ಸೂಕ್ಷ್ಮ ಪ್ರದೇಶದಿಂದ ವಂಡ್ಸೆ ಗ್ರಾಮವನ್ನು ಕೈ ಬಿಡಬೇಕು ಎನ್ನುವ ವಿಶೇಷ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಾಶ್ ನಟಲ್‌ಕರ್ ಮಾತನಾಡಿ, ಈ ಹಿಂದೆ 35ಗ್ರಾಮಗಳು ಉಡುಪಿ ಜಿಲ್ಲೆಯಲ್ಲಿ ವರದಿ ವ್ಯಾಪ್ತಿಗೆ ಬಂದಿತ್ತು. ನಂತರ ಅದು 22ಕ್ಕೆ ಇಳಿದಾಗ ವಂಡ್ಸೆ ಗ್ರಾಮ ವರದಿಯ ವ್ಯಾಪ್ತಿಯಿಂದ ಹೊರಗೂಳಿಯಿತು. ಮತ್ತೆ ಹೇಗೆ ಸೇರ್ಪಡೆಗೊಂಡಿತ್ತು ಎನ್ನುವುದು ವಿಚಿತ್ರವಾಗಿದೆ ಎಂದರು.
ಕೊಲ್ಲೂರು ಮೂಕಾಂಬಿಕಾ ದೇವಳದ ವ್ಯವಸ್ಥಾಪನ ಸಮಿತಿ ಸದಸ್ಯ ಡಾ.ಅತುಲ್ ಕುಮಾರ್ ಶೆಟ್ಟಿ ಮಾತನಾಡಿ,ಕಂದಾಯ ಇಲಾಖೆ-ಅರಣ್ಯ ಇಲಾಖೆ ಜಂಟೀ ಸಮೀಕ್ಷೆ ಮಾಡಿಲ್ಲ. ಗ್ರಾಮಗಳ ನಕ್ಷೆ ಸಿದ್ಧಪಡಿಸಿಲ್ಲ. ಗ್ರಾಮ ಮಟ್ಟದಲ್ಲಿ ಅಧಿಕಾರಿಗಳ ಸಭೆ ನಡೆಸಿಲ್ಲ. ನಾವು ಆಕ್ಷೇಪಿಸಿ ನೀಡಿದ ಅರ್ಜಿಯನ್ನು ಸರಿಯಾಗಿ ಚರ್ಚಿಸಿ ತೀರ್ಮಾನಕ್ಕೆ ಬಂದಿಲ್ಲ. ಹಿಂದೆ ಅಭಯಾರಣ್ಯ ಸೇರ್ಪಡೆಯ ಸಂದರ್ಭ ಕೂಡಾ ಅವೈಜ್ಞಾನಿಕವಾಗಿ ಮೂಕಾಂಬಿಕಾ ಅಭಯರಣ್ಯ ವ್ಯಾಪ್ತಿಗೆ ಹಲವು ಗ್ರಾಮಗಳನ್ನು ಸೇರ್ಪಡೆಗೊಳಿಸಲಾಯಿತು. ಈ ಬಾರಿ ನಮಗೆ ಸಕಾರಾತ್ಮಕವಾದ ಫಲಿತಾಂಶ ಬೇಕು ಎಂದರು.
ಬಾ.ಕಿ.ಸಂ.ಕಾರ್ಯದರ್ಶಿ ಸತ್ಯನಾರಾಯಣ ಉಡುಪ ಮಾತನಾಡಿ, ಪಶ್ಚಿಮ ಘಟ್ಟ ಜೀವ ಸೂಕ್ಷ್ಮ ಪ್ರದೇಶಗಳ ಗುರುತಿಸುವಿಕೆ ಆರಂಭಗೊಂಡು ಎರಡುವರೆ ವರ್ಷ ಆಯಿತು. ರಾಜ್ಯ ಸಮಿತಿ, ಜಿಲ್ಲಾ ಸಮಿತಿಗಳು ರಚನೆ ಆದವು. ಆ ಸಮಿತಿಗಳು ಗ್ರಾಮ ಮಟ್ಟದಲ್ಲಿ ಸಭೆ ನಡೆಸಿದ್ದಾವೆಯೇ? ಗ್ರಾಮದ ನಕ್ಷೆಯನ್ನು ಇಟ್ಟುಕೊಂಡು ಸಮೀಕ್ಷೆ ಮಾಡಿದ್ದಾವೆಯೇ? ರಾಜ್ಯ ಸರ್ಕಾರ ಕೇಂದ್ರಕ್ಕೆ ವರದಿ ನೀಡಿಲ್ಲವೇ? ಕೇಂದ್ರ ಮಟ್ಟದಲ್ಲಿ ಸಂಸದರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಯಾವ ನಿರ್ಣಯ ಅಂಗೀಕರಿಸಲಾಯಿತು. ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ಪ್ರಾಸ್ತಾವಿತ ಜೀವ ಸೂಕ್ಷ್ಮ ಪ್ರದೇಶದಲ್ಲಿ ಹುಲಿ ಕಾರಿಡಾರ್ ಮಾಡುವ ಉದ್ದೇಶ ಏನು ಎಂದು ಪ್ರಶ್ನಿಸಿದರು.
ಗ್ರಾ.ಪಂ.ಅಧ್ಯಕ್ಷ ಉದಯಕುಮಾರ್ ಶೆಟ್ಟಿ ಮಾತನಾಡಿ, ಪಶ್ಚಿಮ ಘಟ್ಟ ಜೀವ ಸೂಕ್ಷ್ಮ ಪ್ರದೇಶಕ್ಕೆ ಸೇರುವ ಯಾವುದೇ ಆರ್ಹತೆ ಇಲ್ಲದ ವಂಡ್ಸೆ ಗ್ರಾಮವನ್ನು ಸೇರಿಸಿದ್ದು ವಿಪರ್ಯಾಸ. ಈ ಗ್ರಾಮ ಒಂದೆಡೆ ಸಿಆರ್‌ಜೆಡ್ ವ್ಯಾಪ್ತಿಗೂ ಒಳಪಟ್ಟಿದ್ದು ಪರಿಗಣಿಸಿದರೆ ಸಮುದ್ರ ಭಾಗಕ್ಕೆ ಹತ್ತಿರವಿದೆ ಎಂದಾಗುತ್ತದೆ. ಕೊಡಚಾದ್ರಿಯಿಂದ 25 ಕಿ.ಮೀ.ದೂರದಲ್ಲಿರುವ ಈ ಗ್ರಾಮವನ್ನು ಸೇರಿಸಿದ್ದು ಇವತ್ತು ಜನರಲ್ಲಿ ಆತಂಕ ಸೃಷ್ಟಿಯಾಗಿದೆ. ಅಧಿಕಾರಿಗಳು ಸ್ಪಷ್ಟವಾದ ಉತ್ತರ ನೀಡಬೇಕು ಎಂದರು.
ಗ್ರಾಮಮಟ್ಟದಲ್ಲಿ ಆಕ್ಷೇಪಗಳ ಸಲ್ಲಿಕೆಗೆ ನ.2ರ ತನಕ ಅವಕಾಶವಿದ್ದು, ಪ್ರತಿ ಗ್ರಾಮ ಮಟ್ಟದಿಂದ ಆಕ್ಷೇಪ ಸಲ್ಲಿಸುವುದು, ಬೈಂದೂರು ಕ್ಷೇತ್ರ ವ್ಯಾಪ್ತಿಯಲ್ಲಿ ಸಮಿತಿ ರಚಿಸಿಕೊಂಡು ಮುಂದಿನ ಹೋರಾಟ ಕೈಗೆತ್ತಿಕೊಳ್ಳುವುದು, ಅ.28ಕ್ಕೆ ಕೆರಾಡಿಗೆ ಆಗಮಿಸಲಿರುವ ಸಂಸದ ಬಿ.ಎಸ್.ಯಡ್ಯೂರಪ್ಪನವರ ಜೊತೆ ಈ ಬಗ್ಗೆ ಚರ್ಚಿಸುವ ನಿರ್ಣಯಗಳನ್ನು ಅಂಗೀಕರಿಸಲಾಯಿತು.
ಜಿ.ಪಂ.ಸದಸ್ಯೆ ಇಂದಿರಾ ಶೆಟ್ಟಿ, ತಾ.ಪಂ.ಸದಸ್ಯರಾದ ಎಚ್.ಮಂಜಯ್ಯ ಶೆಟ್ಟಿ, ರಮೇಶ ಗಾಣಿಗ, ಎಸಿಎಫ್ ಸತೀಶ್ ಬಾಬ ರೈ, ತಹಶೀಲ್ದಾರ್ ಗಾಯತ್ರಿ ನಾಯಕ್, ಗ್ರಾ.ಪಂ.ಉಪಾಧ್ಯಕ್ಷೆ ಶಾರದಾ ರುದ್ರಯ್ಯ ಆಚಾರ್ಯ, ಶಂಕರನಾರಾಯಣ ಗ್ರಾ.ಪಂ.ಅಧ್ಯಕ್ಷ ಸದಾಶಿವ ಶೆಟ್ಟಿ, ಜಡ್ಕಲ್ ಗ್ರಾ.ಪಂ.ಅಧ್ಯಕ್ಷ ಅನಂತ ಮೂರ್ತಿ, ಕೊಲ್ಲೂರು ಗ್ರಾ.ಪಂ.ನ ಅಧ್ಯಕ್ಷ ವಿಶ್ವನಾಥ ಅಡಿಗ, ಹಳ್ಳಿಹೊಳೆ ಗ್ರಾ.ಪಂ.ಅಧ್ಯಕ್ಷೆ ಭಾಗೀರಥಿ, ಚಿತ್ತೂರು ಗ್ರಾ.ಪಂ.ಅಧ್ಯಕ್ಷ ಸಂತೋಷ ಮಡಿವಾಳ, ವಂಡ್ಸೆ ಗ್ರಾ.ಪಂ.ಮಾಜಿ ಅಧ್ಯಕ್ಷರಾದ ವಂಡಬಳ್ಳಿ ಜಯರಾಮ ಶೆಟ್ಟಿ, ವಿ.ಕೆ.ಶಿವರಾಮ ಶೆಟ್ಟಿ, ಶ್ರೀನಿವಾಸ ಪೂಜಾರಿ, ಅರಣ್ಯ ಸಮಿತಿ ಅಧ್ಯಕ್ಷ ಬಗ್ವಾಡಿ ರಾಜೀವ ಶೆಟ್ಟಿ, ವಿವಿಧ ಸಂಘಟನೆಗಳ ಪ್ರಮುಖರು, ಗ್ರಾ.ಪಂ.ಸದಸ್ಯರು ಉಪಸ್ಥಿತರಿದ್ದರು. ಉದಯಕುಮಾರ ಶೆಟ್ಟಿ ಸ್ವಾಗತಿಸಿ, ಪಂಚಾಯತ್ ಕಾರ್ಯದರ್ಶಿ ಶಂಕರ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು. ಪಿಡಿಒ ಹೆಚ್.ವಿ ಇಬ್ರಾಹಿಂಪುರ್ ವಂದಿಸಿದರು.