ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು,ಜು.26: ಬೈಂದೂರು ಪಟ್ಟಣ ಪಂಚಾಯತ್ ವ್ಯಾಪ್ತಿಯ ನೀರೋಡಿ ಎಂಬಲ್ಲಿ ಎರಡು ದಿನಗಳ ಹಿಂದೆ ಕೊಚ್ಚಿ ಹೋದ ತಾತ್ಕಾಲಿಕ ಕಿರುಸೇತುವೆ ಸ್ಥಳಕ್ಕೆ ಉಡುಪಿ ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಬಳಿಕ ಇಲ್ಲಿ ತಕ್ಷಣದಿಂದ ಸ್ಟೀಲ್ ಸೇತುವೆ ನಿರ್ಮಿಸಿ ಸ್ಥಳೀಯರ ಸಂಚಾರಕ್ಕೆ ಅನುಕೂಲ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಮಳೆ ಕಡಿಮೆಯಾದ ಬಳಿಕ ಶಾಶ್ವತ ಸೇತುವೆ ನಿರ್ಮಿಸುವ ಭರವಸೆ ನೀಡಿದರು.
ಕಳೆದ ವರ್ಷ ಪಟ್ಟಣ ಪಂಚಾಯಿತಿ ವತಿಯಿಂದ 3 ಲಕ್ಷ ಅನುದಾನದಲ್ಲಿ ತಾತ್ಕಾಲಿಕ ಕಿರು ಸೇತುವೆ ನಿರ್ಮಿಸಲಾಗಿತ್ತು. ಈ ವರ್ಷದ ಆರಂಭದ ಮಳೆಗೆ ಈ ಕಿರು ಸೇತುವೆ ಸಂಪೂರ್ಣ ಕೊಚ್ಚಿ ಹೋಗಿದೆ. ಶಾಲಾ ವಿದ್ಯಾರ್ಥಿಗಳಿಗೆ ರೈತರಿಗೆ ಕೂಲಿ ಕಾರ್ಮಿಕರಿಗೆ ಈ ರಸ್ತೆಯೇ ಆಧಾರವಾಗಿತ್ತು. ಸೇತುವೆ ಕುಸಿದು ನಿರೋಡಿಯ 20 ಮನೆಗಳಿಗೆ ಇದ್ದ ರಸ್ತೆ ಮಾರ್ಗ ಸಂಪೂರ್ಣ ಕಡಿತಗೊಂಡಿರುತ್ತದೆ.
ಈ ಸಂದರ್ಭ ಸಾಮಾಜಿಕ ಹೋರಾಟಗಾರ ವೀರಭದ್ರ ಗಾಣಿಗ, ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ಚನ್ನಯ್ಯ ಪೂಜಾರಿ, ವಾಸು ಮರಾಠಿ ಹಾಜರಿದ್ದರು
ತಾತ್ಕಾಲಿಕ ಸೇತುವೆ ನಿರ್ಮಾಣವಾಗುವ ತನಕ ಸಂಚಾರಕ್ಕಾಗಿ ಕಾಲುದಾರಿ ಬಳಸಲು ಮಂಗಳವಾರ ಸೂಚಿಸಲಾಗಿತ್ತು.
1) ನಿರೋಡಿ ಸಿಂಧಿ ಗೋವಿಂದ ಮರಾಠಿ ಮನೆಯ ಹತ್ತಿರ ಕಾಲು ದಾರಿಯಿಂದ 2 ಸಣ್ಣ ತೋಡುಗಳನ್ನು ದಾಟಿ ಸಂಪರ್ಕಿಸಬಹುದಾಗಿದೆ. ಸುಮಾರು 1 ಕಿ.ಮೀ ಹೆಚ್ಚಿಗೆ ಕ್ರಮಿಸಬೇಕಾಗುತ್ತದೆ.
2) ಗಂಗನಾಡು ಹೋಗುವ ರಸ್ತೆಯ ಎತ್ತಬೇರು ಆನಂದ ಗಾಣಿಗ ಮನೆಯಿಂದ ಸುಬ್ಬಣ್ಣ ಆಚಾರಿಯ ಮನೆಯ ಮೂಲಕ ಕಾಲು ದಾರಿಯಲ್ಲಿ ನಿರೋಡಿಗೆ ಸಂಪರ್ಕಿಸಬಹುದಾಗಿದೆ. 3 ಕಿ.ಮೀ ಹೆಚ್ಚಿಗೆ ಕ್ರಮಿಸಬೇಕಾಗಿರುತ್ತದೆ.
3) ಗಂಗನಾಡು ಶಾಲೆಯ ರಸ್ತೆಯ ಮೂಲಕ ಸಾಗಿ ಸಿಂಧಿ ರಾಮ ಮರಾಠಿ ಮನೆಯ ಹತ್ತಿರದಿಂದ ಒಂದು ಸಣ್ಣ ತೋಡನ್ನು
ದಾಟಿ ನಿರೋಡಿಗೆ ಸಂಪರ್ಕಿಸಬಹುದಾಗಿದೆ.
ಈ ನಡುವೆ ಅವರು ಬೈಂದೂರು ತಾಲೂಕಿನ ನೆರೆಪೀಡಿತ ಪ್ರದೇಶಗಳಿಗೂ ಭೇಟಿ ನೀಡಿದರು.
► ಪ್ರೇಕ್ಷಣೀಯ ಸ್ಧಳಗಳಲ್ಲಿ ನಿಯಮ ಮೀರಿ, ಮೋಜು ಮಸ್ತಿ ಮಾಡಿದರೆ ಕಾನೂನು ಕ್ರಮ – ಡಿಸಿ ಎಚ್ಚರಿಕೆ https://kundapraa.com/?p=68036 .