ದಿಲೀಪ್ ಕುಮಾರ್ ಶೆಟ್ಟಿ
“ಅಯ್ಯಬ್ಯೇ, ಪರೀಕ್ಷಿ ಅಂತೂ ಮುಗಿತು. ಈ ಸಲ ರಜಿಗೆ ಬೆಂಗ್ಳೂರಿಗೆ ಹ್ವಾಪ…” ಅಂದೇಳಿ ಲಾಸ್ಟ್ ಪರೀಕ್ಷಿ ಮುಗಿತ್ ಇದ್ದಂಗೆ ಡಿಸೈಡ್ ಮಾಡ್ಕಂಡಿ. ಮನಿಗೆ ಓಡಿ ಹೊಯಿ “ಮನ್ನೆ ಹಬ್ಬಕ್ಕೆ ಬಂದಾಗಳಿಕೆ ಮಮ್ಮ ನಂಗೆ ರಜಿಗೆ ಬೆಂಗ್ಳೂರಿಗೆ ಬಪ್ಪುಕ್ ಹೇಳಿರ್, ನಾನಂತೂ ಹ್ವಾಪನೆ..” ಅಂದೇಳಿ ಅಜ್ಜಿಗೆ ಹೆಳ್ದಿ. “ಈ ಬಿಸ್ಲೆಗೆ ಇಲ್ಲಿ ಕಯಿಟುಕಿಂತ ಹೋಗಿ ಸಾಯತೆ.. “ ಅಂದ್ರ್ ಅಜ್ಜಯ್ಯ. ಅಲ್ಲಿಗೆ ನಮ್ಮ ಬೆಂಗ್ಳೂರ್ ಹ್ವಾಪುದ್ ನಿಕ್ಕಿ ಆಯ್ತು. ಇನ್ನೊಂದು ಹತ್ತು ದಿನ ಬಿಟ್ರೆ, ರಿಸಲ್ಟ್ ಬತತ್ತ್, ಅದು ಆದ ಕೂಡ್ಲೆ ಹೊರಡುದೆ. ಊರೆಗೆ ಯಾರು ಬೆಂಗಳೂರಿಂದ ಇಳ್ದಿರ್, ಅವ್ರು ಎಗಳಿಕೆ ಹ್ವಾತ್ರ್, ಅನ್ನೋ ಎಲ್ಲ ಡಿಟೇಲ್ ಒಟ್ಟ್ ಹಾಕುಕ್ ಶುರು ಮಾಡಿದಿ. ಅವತ್ತ್ ಪಕ್ಕದ ಮನೆಯವ್ರೆ ಊರಿಗ್ ಬಂದಿದಿರ್, ಅವ್ರು ಏಪ್ರಿಲ್ 10 ಕ್ಕೆ ಹ್ವಾತ್ರಂಬ್ರ್ ಅಂದೇಳಿ ಗೊತ್ತಾದ್ದೆ ತಡ, ಅಜ್ಜಿಗೆ ಹೇಳಿ ಅವ್ರ ಹತ್ರ ನನ್ನನ್ನು ಕರ್ಕಂಡ್ ಹ್ವಾಪುಕ್ ಹೇಳ್ ಅಂದೆ. ಅವ್ರು ಅಕ್ಕ್ ಅಂದ್ರ್. ಆ ಉಳಿದ ಹತ್ತು ದಿನ ಕಳುದೇ ಕಷ್ಟ ಆಯ್ತು.
ಶಾಲೆಗೆ ವಾರ್ಷಿಕ ಪರೀಕ್ಷೆ ಆದ ಮೇಲೆ ಓದುವ, ಹೋವರ್ಕ್ ಮಾಡುವ, ಕ್ಲಾಸ್ಸಲ್ಲಿ ಕುತ್ಕಂಡ್ ಮೇಷ್ಟ್ರ ಕೊರೆತ ಕೆಂಬೋ ತಲೆನೋವೆನಿಲ್ಲ. ಸುಮ್ನೆ ಶಾಲೀಗ್ ಹ್ವಾದ್ಯ ಪುಟ್ಟ, ಬಂದ್ಯ ಪುಟ್ಟ ಅಂದೇಳಿ ಹೊಯಿ ಬಂದ್ರೆ ಆಯ್ತ್. ನಂಗೆ ಈ ವಾರ್ಷಿಕ ಪರೀಕ್ಷೆ ಆದ್ಮೇಲೆ ಶಾಲಿಗೆ ಹ್ವಾಪುಕೇ ಕುಶಿ ಆಪುದ್. ಮನೆಗೆ ಬೈಸ್ಕಂಡ್ಕರಿಲ್ಲ, ಬೇಗೆ ಎಳ್ಕಂದೇಳಿ ಇಲ್ಲ, ಪ್ರಶ್ನೆ ಕೆಂತ್ರ್ ಅಂದೇಳಿ ಇಲ್ಲ. ಟೆಕ್ಷನ್ ಇಲ್ಲದೆ ಆರಾಮಗಿ ಶಾಲಿಗೆ ಹೊಯ್ಲಕ್. ಇಡೀ ವರ್ಷ ಶಾಲಿ ಹೀಂಗೆ ಇದ್ರೆ ಎಷ್ಟ್ ಲಾಯ್ಕ್ ಇರತ್ತ್ ಅಲ್ದೆ?. ಆಗಳಿಕೆಲ್ಲ ನಾವು ರಜೆಗೆ ಹಿಡಿಕಡ್ಡಿ ಆಟ ಆಡ್ತಿದಿತ್. ಈಗಿನ್ ಕಾಲದ್ ಮಕ್ಕಳಿಗ್ ಅದೆಲ್ಲ ಗೊತ್ತಿಪ್ಪುದ್ ಸುಳ್. ಈಗಳಿನೊವು ಒಂದ್ ಮೊಬೈಲ್ ಪೋನ್ ಕೈಯೆಗ್ ಕೊಟ್ರೆ, ಮಂಡಿ ಮೇಲೆ ಎತ್ತದೆ ಗೇಮ್ಸ್ ಆಡುಕ್ ಶುರು ಮಾಡ್ತು. ನಾವು ಹಾಂಗಲ್ಲ, 4-5 ಜನ ಸೇರ್ಕಂಡ್ ಹಿಡಿಕಡ್ಡಿ ಆಟ, ಬಿಸಿಲು ಸಲ್ಪ ಕಮಿ ಆರೆ ಕಬ್ಬಡಿ, ಕೋ-ಕೋ ಹಿಂಗೆ ಬೇರ್ಬೆರೆ ನಮ್ನಿ ಆಟ ಆಡ್ತಿದಿತ್.
ಅಂತೂ ಆ ದಿನ ಬಂತು. ಇದ್ದ-ಬದ್ದ ಹರ್ಕಟಿ ಅಲ್ಲದ ಚಡ್ಡಿನ ಬ್ಯಾಗಿಗೆ ಹೈಕಂಡ್ ಬೆಂಗಳೂರಿಗ್ ಹ್ವಾಪುಕ್ ರೆಡಿ ಆಯಿತ್. ಪಕ್ಕದ ಮನೆಯರೊಟ್ಟಿಗೆ ಆಟೋ ರಿಕ್ಷಾ ಹತ್ತಿ ಮಣೂರಿಗ್ ಹೊರ್ಟಾಯ್ತು. ದುರ್ಗಾಂಬ ಬಸ್ಸಿಗೆ ಅರ್ದ ಗಂಟೆ ಕಾದದ್ದಾಯ್ತು. ಅಂತೂ ಇಂತೂ ಬಸ್ ಬಂತು. “ಅಲ್ಲ ಮರ್ರೆ 8 ಗಂಟೆಗೆ ಅಂದೇಳಿ 9 ಆತಾ ಬಂತಲೆ, ಹೇಳದ್ ಟೈಮ್ ಗೆ ನಿಮ್ ಬಸ್ಸ್ ಎಗಳಿಕಾರು ಬಂದದ್ದಿತ್ತಾ?” ಅಂದೇಳಿ ನಮ್ಮ ಪಕ್ಕದ ಮನೆಯವರು ಡ್ರೈವರ್ ಹತ್ರ ಜಗಳ ಆಡುಕ್ ಶುರು ಮಾಡ್ರ್. ನಾನ್ ಮಾತ್ರ ಬೆಂಗಳೂರು ಅನ್ನೋ ಮಾಯಾನಗರಿಗೆ ಹ್ವಾಪು ಕನಸಲ್ಲೆ ಇದ್ದೇ. ಅಂತೂ ಕಿಟ್ಕಿ ಸೀಟ್ ಅಲ್ಲಿ ನಾನ್ ಕೂಕಂಡೆ. ಪಕ್ಕದ ಸೀಟಲ್ಲಿ ನಮ್ಮ ಪಕ್ಕದ ಮನೆಯವರು ಕೂತ್ರು. ಕೂತ್ರು ಅನ್ನೋದಕ್ಕಿಂತ ತ್ಯವುಡ್ಕಂಡ್ರು. ಉಡುಪಿ ಬಂತು, ಮಂಗಳೂರು ಬಂತು, ನಾನು ಕಿಟಕಿ ಸ್ಕ್ರೀನ್ ತೆಗೆದು ಹೊರಗಡೆನೇ ಕಾಂತ ಕೂತಿದಿದಿ. ಬಸ್ಸೆಗೆ ಹೊರಗಡೆ ಹ್ವಾಪುದೆ ಕಮ್ಮಿ, ಆದ್ರಲ್ಲೂ ರಾತ್ರಿಗೆ ಹೊರಗಡೆ ಕಾಂಬುದು ಅಂದ್ರೆ ಆ ಖುಷಿಯೇ ಬೇರೆ ಬಿಡಿ. ಅಂತೂ ಬಸ್ಸೆಲ್ಲ ಬರ್ತಿ ಆಯ್ತು. ಬಸ್ಸಿನ ಲೈಟ್ ಎಲ್ಲ ಆಪ್ ಆಯ್ತು. ನಾನು ಇನ್ನೂ ಕಿಟಕಿ ಸ್ಕ್ರೀನ್ ತೆಗ್ದ್ ಹೊರಗಡೆನೇ ಕಾಂತಾ ಕೂಕಂಡಿ. ಹಿಂದೆ ಕೂಕಂಡನ್ ಒಂದ್ ಸಲ ಎದ್ದು ವಟ-ವಟ ಅಂದ. ನಾವು ಡೋಂಟ್ ಕೇರ್ ಅಂದ್ವಿ. ನನ್ನ ಪಕ್ಕದಲ್ಲೇ ಕೂತ ಪಕ್ಕದ ಮನೆಯವ್ರು, “ಗಡ ಎಲ್ಲರಿಗೂ ರಗಳಿ ಆತ್ತ್. ಆ ಪರದಿ ಎಳದು ಮನಿಕೋ“ ಅಂದ್ರು. ಇನ್ನೆಂತ ಸಾವುದು, ಬಹುಜನರ ಬೇಡಿಕೆಯ ಮೇಲೆ ಪರದಿ ಮುಚ್ಚಿ, ಕಣ್ಣು ಮುಚ್ಚಿ ಸೀಟ್ ಮೇಲೆ ಒರ್ಕಂಡಿ. ಕಣ್ಣು ಮುಚ್ಚಿದ್ರೆ ನಿದ್ರಿ ಬದತ್ತಾ, ಊಹೂ.. ಟಿವಿ ಅಲ್ಲಿ ಕಂಡ ಬೆಂಗಳೂರೆಲ್ಲ ಕಣ್ಣ್ ತುಂಬಾ ಓಡಾಡುಕ್ ಶುರು ಆಯಿತ್. ಅಯ್ಯೋ ಈ ನಿದ್ರಿ ಆದ್ರೂ ಯಾಕೆ ಬತ್ತಿಲ್ಲ, ಇನ್ನೆಂತ ಸಾವುದು ಅಂದೆಳಿ ಮತ್ತೆ ಹಗೂರ ಪರದಿ ಒಳಗೆ ಮಂಡಿ ಹಾಕಿ ಹೊರಗಡೆ ರಸ್ತೆನಾ ಕಾಂತ ಕೂಕಂಡಿ. ಮರ, ಗಿಡ, ಗಾಡಿ ಕಾಂತ ಕಾಂತ ತಲಿ ಗಿರ್ರ್ ಅಂಬುಕ್ ಶುರು ಆಯಿತ್. ಇನ್ನ್ ಸ್ವಲ್ಪ ಹೊತ್ತ್ ತೆವಡ್ಸ್ಕಂಬ ಅಂದೇಳಿ ಕಣ್ಣ ಮುಚ್ಚಿ ನಿದ್ರಿ ಮಾಡುಕ್ ಪ್ರಯತ್ನಪಟ್ಟೆ. ಬೆಳ್ಗಾದ್ರೆ ಬೆಂಗಳೂರು. ಅಯ್ಯಬ್ಯಾ.. ಕುಶಿಯೋ ಕುಶಿ.. (ಕುಂದಾಪ್ರ ಡಾಟ್ ಕಾಂ ಅಂಕಣ)
ಬೆಂಗಳೂರೆಂಬ ಮಾಯಾ ನಗರಿಗೆ ಹ್ವಾಪುಕೇ ಬಸ್ಸ್ ಹತ್ತಿ ಕೂತನಿಗೆ ನಿದ್ರಿ ಆದ್ರೂ ಹ್ಯಾಂಗ್ ಬತ್ತ್ ಹೇಳಿ. ಆಚಿಗೆ ಈಚಿಗೆ ಹೊಡಕ್ತಾ ಕಣ್ಣ್ ಮುಚ್ಕಂಡ್ ಕೂಕಂಡಿ. ಅಷ್ಟೋತ್ತಿಗೆ ಡ್ರೈವರ್ ಗಜಕ್ಕಾ ಬ್ರೇಕ್ ಹಾಕ್ದ. 15 ನಿಮಿಷ ಮಾತ್ರ ನಿಲ್ಸತ್ತ್” ಅಂದೇಳಿ ಕಂಡಕ್ಟರ್ ಕೂಗುಕ್ ಶುರು ಮಾಡ್ದ. ಎಲ್ಲ ಅರ್ದಂಬರ್ದ ನಿದ್ರಿ ಕಣ್ಣೆಗ್ ಎದ್ದ್ ವಟ-ವಟ ಅಂಬುಕ್ ಶುರು ಮಾಡ್ರ್. ಮನಿಯಿಂದ ಬಪ್ಪತಿಗೆ, ಬೆಂಗಳೂರಿಗ್ ಹ್ವಾಪು ಕುಶಿಯಲ್ಲ್ ಉಚ್ಚಿ ಹೊಯ್ಕಂಡೆ ಬರ್ಲಿಲ್ಲ. ಬೆಂಗಳೂರಿಗೆ ಹ್ವಾಪಾಲೊರಿಗೆ ಕಾದ್ರೆ ಮದ್ಯ ದಾರೆಗೆ ಬಂದ್ರೆ ಕಷ್ಟ ಅಂದೆಳಿ, ಪಕ್ಕದ ಮನೆಯವನ ಹತ್ರ “ನಾನ್ ಉಚ್ಚಿ ಹೊಯ್ಕಂಡ್ ಬತ್ತಿ. ಒಂಚೂರ್ ಏಳಿ ” ಅಂದೆ. “ನಿದ್ರಿ ಕಣ್ಣೆಗೆ ಕಾಲ್ ಒಂಚೂರ್ ವಾರಿ ಮಾಡಿ “ನೀವೊಳ್ಸ್” ಅನ್ನೋ ಹಾಗೆ “ಹೊಯಿ, ಬೇಗ ಬಾ…“ ಅಂದರು. ಹೊರಗಡೆ ಬಂದ್ ಟಾಯ್ಲೆಟ್ ಹತ್ರ ಹೊಯಿ ಎಲ್ಲ ಆರಾಮ್ ಆಯಿ ಮುಗ್ಸಿ ಅಲ್ಲಿಂದ ಹೊರಗ್ ಬಂದ್ರೆ, ಎದೆ ಒಂದ್ಸಲ ಜಗ್ಗ್ ಅಂತ್. ನಾನ್ ಬಂದ ಬಸ್ಸಿನ ತರಹದ ಹತ್ತಾರು ಬಸ್ಸ್ ಸಾಲಾಗಿ ನಿಂತಿತ್. “ಅಯ್ಯೋ ದೇವ್ರೆ, ನಾನ್ ಬಂದ್ ಬಸ್ ಯಾವ್ದ್ ಇದ್ರೆಗೆ, ಎಲ್ಲ ಒಂದೇ ತರ ಇತ್ತಲೆ.. ನಾನ್ ಈಗ ಯಾವ್ ಬಸ್ ಹತ್ತುದು .. ” ಅಂದೇಳಿ ಹೆದ್ರಿಕೆಗೆ ಮರ್ಕುಕೆ ಶುರು ಮಾಡಿದೆ. ಎಲ್ಲ ಬಸ್ಸು ಬೆಂಗಳೂರಿಗೆ ಹ್ವಾತಿದ್ದೋ. ಹಾಂಗು ಹೀಂಗು ಎರಡು ಮೂರು ಬಸ್ಸು ಹತ್ತಿ ನಾನ್ ಕೂತ ಜಾಗ ಹುಡ್ಕದಿ. ಇವು ಯಾವುದು ಅಲ್ಲ, ಅಷ್ಟರೊಳಗೆ ಇನ್ನೊಂದ್ ಬಸ್ಸು ಹೊರ್ಟಾಯೆತ್. ನನ್ನ್ ಕಣ್ಣೆಗ್ ಕಣ್ಣೀರಿನ ಕೋಡಿ ಧಾರಾಕಾರವಾಗಿ ಬಪ್ಪುಕ್ ಶುರು ಅಯ್ತ್. ಇನ್ನೆಂತ ಸಾವುದು, ಇಲ್ಲೇ ಇಪ್ಪುದಯ್ತಾ ಕಾಂತ್ ಅಂದೆಳಿ ಕಿಶೆಗ್ ಎಷ್ಟಪ ದುಡ್ಡ್ ಇತ್ತ್ ಅಂತ ಬೆಳ್ಚುಕ್ ಶುರು ಮಾಡ್ದೆ. “ಅಯ್ಯೋ.. ಪರ್ಸನ್ನು ಬಸ್ಸಲ್ಲೆ ಬಿಟ್ಟಿದಿ. ಇನ್ನ್ ನನ್ನ್ ವಾಲಿಕಳಿತ್..” ಅಂತ ಯೋಚ್ನಿ ಮಾಡ್ತಾ ಇಪ್ಪತಿಗ್, “ಗಡಾ.. ಅಲ್ಲ್ ಎಂತ ಮಾಡ್ತಿದ್ದೆ, ಬಸ್ ಹೊರ್ಡತ್ತಿಗಾ, ಬೇಗ ಬಾ..” ಅಂದೆಳಿ ಪಕ್ಕದ್ ಮನಿ ರಮೇಶಣ್ಣ ಕೂಗದ್ದ್ ಕೆಂಡದ್ದೇ ತಡ, ಹ್ವಾದ್ ಜೀವ ಬಂದಂಗ್ ಆಯ್ತ್. ಎದ್ನೋ, ಬಿದ್ನೋ ಅಂದೆಳಿ ಓಡಿ ಹೊಯಿ ನನ್ನ ಸೀಟೆಗ್ ಕೂತ್ಕಂಡಿ. “ಅಲ್ಲ ಗಡಾ, ಉಚ್ಚಿ ಹೊಯ್ಕ ಬತ್ತಿ ಅಂದನ್, ಅಲ್ಲ್ ನಿತ್ಕಂಡ್ ಎಂತ ಮಾಡ್ತಿದ್ದೆ, ಇನ್ನ್ ಒಂದ್ ನಿಮಿಷ ಬಿಟ್ಟಿರೆ, ಇಲ್ಲೇ ಇರ್ಕಿದಿತ್ ನೀನ್” ಅಂದೆಳಿ ಮತ್ತ್ ಕುಯ್ಯುಕ್ ಶುರು ಮಾಡ್ರ್ ರಮೇಶಣ್ಣ. “ಎಲ್ಲ ಬಂದ್ರ, ಆ ರೈಟ್, ರೈಟ್..” ಅಂದೆಳಿ ಬಸ್ಸ್ ಹೊರಟೆ ಬಿಡ್ತ್. ಅವತ್ತೇ ಶಪಥ ಮಾಡಿದೆ, ಇನ್ನೆಂದೂ ಎಷ್ಟೇ ಉಚ್ಚಿ ಬಂದ್ರೂ, ಬಸ್ಸಿಂದ ಕೆಳಗೆ ಇಳುದಿಲ್ಲ ಅಂದೆಳಿ. (ಕುಂದಾಪ್ರ ಡಾಟ್ ಕಾಂ ಅಂಕಣ)
ಅಂತೂ ಇಂತೂ, ಬಿಸೋ ದೊಣ್ಣೆಯಿಂದ ತಪ್ಪಸ್ಕಂಡ ಹಾಗೆ, ಬಸ್ miss ಆಪುದನ್ನ ತಪ್ಪಸ್ಕಂಡ್, ಬೆಂಗಳೂಗಿಗೆ ಹ್ವಾಪು ಆಸೆ, ನಿರಾಶೆ ಆಗದೆ ಕಡೆಗೂ ಹ್ವಾತಿದ್ದಿ ಅನ್ನೋ ಖುಷಿಯಲ್ಲಿ ಕಣ್ಣ್ ಮುಚ್ಕಂಡ್ ಮನಿಕಂಡಿ. ಬಸ್ಸಿಂದ ಬಸ್ಸಿಗೆ ಹತ್ತಿ-ಇಳ್ದ್ ತುಂಬಾ ಸುಸ್ತ್ ಆದದ್ದಾಕ್ಕೋ ಏನೋ, ಕಣ್ಣ್ ಮುಚ್ಚಿದ ಕೂಡ್ಲೆ ಒಳ್ಳೆ ನಿದ್ರಿ ಬಂತ್. “ಯಾರು ಯಶವಂತಪುರ ಇಳಿಬೇಕು, ಬೇಗ ಮುಂದೆ ಬನ್ನಿ.. ಬೇಗ ಬೇಗ..” ಅಂದೆಳಿ ಬಸ್ಸಿನನ್ ವರ್ಲುಕ್ ಶುರು ಮಾಡುಕು ಎಚ್ಚರ ಆಯ್ತ್. ಅದೇನೋ ಕುಶಿ, ಅದೇನೋ ಆಸೆ, ಅದೇನೋ ಕಸಿ-ವಿಸಿ. ಕಣ್ಣು ಬಿಟ್ಟು ನೋಡಿದರೆ ಬೆಂಗಳೂರಿನ ಬೆಳಿಗ್ಗೆ. ಒಳ್ಳೆ ಕೊಡಿ ಹಬ್ಬದಲ್ಲಿ ಜನ ಸೇರಿದ ಹಾಗೆ ಯಶವಂತಪುರ ರೈಲ್ವೇ ಸ್ಟೇಷನ್ ನಲ್ಲಿ ಜನವೋ ಜನ. ಅಷ್ಟ್ ದೊಡ್ಡ ರೈಲನ್ನ ಇದೆ ಮೊದಲ್ ಕಾಂತಿದ್ದದ್ದ್. ಬೇಳೂರಿಗೆ ಸಕ್ಕರೆ-ಸೀಮೆ ಎಣ್ಣೆ ತಪ್ಪುಕ್ ಹ್ವಾಪತಿಗೆ ಕಂಡದ್ದ್ ರೈಲ್. ಅದು ಬಿಟ್ರೆ, ಇಷ್ಟ್ ಹತ್ರದಿಂದ ಕಂಡದ್ದ್ ಇಲ್ಲೇ. ಈಚಿಗೆ ರಸ್ತೆ ತುಂಬಾ ಗಾಡಿಗಳ್ ಕೀಕೀ.. ಪೊಂಕ್ ಪೊಂಕ್.. ಶಬ್ದ. ರಿಕ್ಷಾದವರು ಹೊಗೆ ಬಿಡುದ್ರೊಳಗೆ ಹಿಂದೆ ಇದ್ದರೆಲ್ಲ ಕಪ್ಪ್ ಆತ್ರ್. ರೋಡ್ ಪಕ್ಕದಲ್ಲೇ ಹೂವು, ತರಕಾರಿ ಅಂಗಡಿ, ಆ ಸ್ಟೋರ್, ಈ ಹೊಟೇಲ್, ಬಟ್ಟಿ ಅಂಗಡಿ, ಒಂದಾ ಎರಡಾ. ಅಂಗಡಿಗಳ ರಾಶಿ. ಬರಿ ಕುಂದಾಪ್ರ ಪ್ಯಾಟಿ ಕಂಡನಿಗೆ ಇದು ಒಂಥರಾ ಬೇರೆ ದೇಶ ಕಂಡಂಗಗೇ ಆಯ್ತ್. ಬೆಳಿಗ್ಗೆ ಬೆಳಿಗ್ಗೆ ಶೂ ಹಯ್ಕಂಡ್ ಜಾಗಿಂಗ್ ಮಾಡು ಅಜ್ಜ-ಅಜ್ಜಿ, ಎಲ್ಲ ಹೊಸತು. ಊರೆಗ್ ಬೆಳಿಗ್ಗೆ ಎದ್ದ್ ಗದ್ದೆಗ್ ಹೊಯಿ ಕೆಲ್ಸ ಮಾಡುದ್ ಬಿಟ್ಟ್ ಇಲ್ಲ್ ಬಂದ್ ಹೀಂಗೆಲ್ಲ ಮಾಡಿ ಹೊಟ್ಟಿ ಕರಗಿಸ್ತಾರಲ್ಲ ಅನ್ನಸ್ತ್. “ಅದು ಎಂಥಾ ಮರ್ರೆ”, ಮಂಡಿ ಕೆಳಗೆ ಮಾಡಿ ಆ ದೊಡ್ಡ ಬಿಲ್ಡಿಂಗನ್ನೇ ಕಾಂಬುಕ್ ಶುರು ಮಾಡ್ದಿ, ಅಯ್ಯೋ ಅದರ ತುದಿಯೆ ತೋರುದಿಲ್ಲ. ಇದನ್ನ ಯಾವ ಮೇಸ್ತ್ರಿ ಕಟ್ಟದ್ದ್ ಮರ್ರೆ.. ಅಂದ್ಕಂಡಿ. ರಸ್ತೆ ಉದ್ದಕ್ಕೂ ಇದ್ದ ಮರಗಳು, ಅಲ್ಲಲ್ಲೆ ಇದ್ದ ಪಾರ್ಕು, ಅಬ್ಬ ಕಣ್ಣಿನ ರೆಪ್ಪೆ ಮುಚ್ಚದೆ ಕಾಂತ ಅಯ್ಕಂಡೆ. (ಕುಂದಾಪ್ರ ಡಾಟ್ ಕಾಂ ಅಂಕಣ)
ನೀವು ಏನೇ ಹೇಳಿ, ಬೆಂಗಳೂರು ಎಷ್ಟೇ ಗಬ್ಬೆದ್ದುಹೋಗಿದ್ರೂ, ಎಷ್ಟೇ ಮಲೀನವಾದ್ರೂ, ಅದರ ತಣ್ಣನೆಯ ವಾತಾವರಣ, ಸೊಬಗು, ಎಂತವರನ್ನೂ ಆಕರ್ಷಿಸುದಂತು ಸತ್ಯ. ನೀವೇನಂತ್ರಿ?.
ಚಿತ್ರ: ಅಂತರ್ಜಾಲ ಕೃಪೆ
Wonderfull article, keep writing .You have wonderful talent .