ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಸಾಧನೆ ಮಾಡುವ ಛಲ ಹಾಗೂ ಮನಸ್ಸು ಹರೇಕಳ ಹಾಜಬ್ಬರಂತೆ ಅಕ್ಷರಕ್ರಾಂತಿ ಹಾಗೂ ತುಳಸಿ ಗೌಡರಂತೆ ಪರಿಸರ ಕಾಳಜಿವಹಿಸಲು ಸಾಧ್ಯವಿದೆ. ಅದಕ್ಕೆ ಶ್ರೀಮಂತಿಕೆ, ಜಾತಿ, ಧರ್ಮ, ಭಾಷೆಯ ಅಗತ್ಯತೆಯಿಲ್ಲ ಎಂದು ಕುಂದಾಪುರ ಡಾ. ಬಿ.ಬಿ.ಹೆಗ್ಡೆ ಪ್ರಥಮದರ್ಜೆ ಕಾಲೇಜಿನ ಉಪಪ್ರಾಂಶುಪಾಲ ಚೇತನ್ ಶೆಟ್ಟಿ ಕೋವಾಡಿ ಹೇಳಿದರು.
ಉಪ್ಪುಂದ ಮಾತೃಶ್ರೀ ಸಭಾಭವನದಲ್ಲಿ ಶನಿವಾರ ಇಲ್ಲಿನ ಉಪ್ಪುಂದ ಜೆಸಿಐ 2022-23ನೇ ಸಾಲಿನ 100 ಕಾರ್ಯಕ್ರಮದಲ್ಲಿ ಮಾತನಾಡಿ, ಪದ್ಮಶ್ರೀ ಪುರಸ್ಕೃತರಾದ ಇವರಿಬ್ಬರೂ ಕಡು ಬಡತನದಲ್ಲಿ ಅತ್ಯಂತ ಹಿಂದುಳಿದ ಕುಗ್ರಾಮದಲ್ಲಿ ಜನಿಸಿ, ನಿರಕ್ಷರಕುಕ್ಷಿಗಳಾದರೂ ಕೂಡ ತಾವು ಕಟ್ಟಿದಕೊಂಡ ಕನಸಿನ ಜತೆಗೆ ಸಮಾಜ ಸೇವೆ ಮೂಲಕ ಪ್ರಸ್ತುತ ದೇಶವೇ ಗುರುತಿಸಿದ ಮಾದರಿ ವ್ಯಕ್ತಿಗಳಾಗಿದ್ದಾರೆ. ಅವರ ತತ್ವಾದರ್ಶಗಳನ್ನು ಇಂದಿನ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಇವರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದರು.
ಪದ್ಮಶ್ರೀ ಪುರಸ್ಕೃತ ಅಕ್ಷರ ಸಂತ ಹರೇಕಳ ಹಾಜಬ್ಬ ಹಾಗೂ ವೃಕ್ಷಮಾತೆ ತುಳಸಿಗೌಡ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು. 100ನೇ ಕಾರ್ಯಕ್ರಮದ ಅಂಗವಾಗಿ ಸ್ಥಳೀಯ 1000 ಶಾಲಾ ವಿದ್ಯಾರ್ಥಿಗಳಿಗೆ ಗೀಡಗಳನ್ನು ವಿತರಿಸಲಾಯಿತು. ಕಾರ್ಯಕ್ರಮಕ್ಕೂ ಮೊದಲು ಗಿಡ ನೆಟ್ಟು ನೀರೆರೆಯಲಾಯಿತು.
ಜೆಸಿಐ ಅಧ್ಯಕ್ಷ ಪ್ರದೀಪ ಶೆಟ್ಟಿ ಕಾರಿಕಟ್ಟೆ ಅಧ್ಯಕ್ಷತೆವಹಿಸಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿ, ಜೆಸಿಐ ಮೂಲಕ ಹಲವು ಸಾರ್ಥಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡ ಬಗ್ಗೆ ನಮಗೆ ಖುಷಿ ಇದೆ. 100 ಕಾರ್ಯಕ್ರಮದ ಸಂದರ್ಭ ಇಬ್ಬರು ಮಹಾನ್ ಸಾಧಕರು ನಮ್ಮೊಂದಿಗಿರುವುದು ಒಂದು ಆಶೀರ್ವಾದವೇ ಸರಿ ಎಂದು ಭಾವಿಸುತ್ತೇನೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥ ಜಿ. ಸಮಾರಂಭ ಉದ್ಘಾಟಿಸಿ ಶುಭಕೋರಿದರು. ಜೆಸಿಐ ಉಪ್ಪುಂದ 200 ದಿನಗಳಲ್ಲಿ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕವಾಗಿ ಮಾಡಿದ 99 ವಿವಿಧ ಕಾರ್ಯಕ್ರಮಗಳ ಹಿನ್ನೋಟ ವಿಡಿಯೋ ಚಿತ್ರಣವನ್ನು ಹಾಜಬ್ಬ ಬಿಡುಗಡೆಗೊಳಿಸಿದರು. ನೂರನೇ ಕಾರ್ಯಕ್ರಮದ ನೆನಪಿಗಾಗಿ ಸ್ಥಳೀಯ ವಿದ್ಯಾರ್ಥಿಗಳಿಗೆ ಗಿಡಗಳನ್ನು ವಿತರಿಸಲಾಯಿತು. ಜೆಸಿಐ ಅಧ್ಯಕ್ಷ ಪ್ರದೀಪ್ ಶೆಟ್ಟಿ ಕಾರಿಕಟ್ಟೆ ಅವರನ್ನು ಸನ್ಮಾನಿಸಲಾಯಿತು.
ಬೈಂದೂರು ಉಪ ವಲಯ ಅರಣ್ಯಾಧಿಕಾರಿ ರವಿರಾಜ್, ಜಿಸಿಐ ಕುಂದಾಪುರ ಸಿಟಿ ಸ್ಥಾಪಕಾಧ್ಯಕ್ಷ ಹುಸೈನ್ ಹೈಕಾಡಿ, ಬೈಂದೂರು ರೋಟರಿ ಕ್ಲಬ್ ಅಧ್ಯಕ್ಷ ಶಿರೂರು ಪ್ರಸಾದ ಪ್ರಭು, ಉದ್ಯಮಿ ನೆಲ್ಯಾಡಿ ದಿವಾಕರ ಶೆಟ್ಟಿ, ಸಭಾಭವನದ ಮಾಲಕ ಯು. ಎ. ಮಂಜು ದೇವಾಡಿಗ, ಉಪ್ಪುಂದ ಜೆಸಿಐ ನಿಕಟಪೂವಾಧ್ಯಕ್ಷ ನಾಗರಾಜ ಪೂಜಾರಿ ಉಬ್ಝೇರಿ, ಮಹಿಳಾ ಜೆಸಿ ಸಂಯೋಜಕಿ ರೇಖಾ, ಜೆಜೆಸಿ ಅಧ್ಯಕ್ಷೆ ನಿಶಾ ಸಂತೋಷ್ ಶೆಟ್ಟಿ ಇದ್ದರು.
ಜೆಸಿಐ ಪೂರ್ವಾಧ್ಯಕ್ಷ ಸುಬ್ರಹ್ಮಣ್ಯ ಜಿ. ನಿರೂಪಿಸಿ, ಕಾರ್ಯದರ್ಶಿ ಪುರಂದರ ಉಪ್ಪುಂದ ವಂದಿಸಿದರು.