ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕಾರೊಂದು ಓವರ್‌ಟೇಕ್ ಮಾಡುವ ಭರದಲ್ಲಿ ನಡೆದ ಸರಣಿ ಅಪಘಾತದಲ್ಲಿ ರಿಕ್ಷಾದಲ್ಲಿ ಸಂಚರಿಸುತ್ತಿದ್ದ ಯುವತಿ ಸಾವನ್ನಪ್ಪಿದ ಘಟನೆ ತಾಲೂಕಿನ ಮೂಡ್ಲಕಟ್ಟೆ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ. ಘಟನೆಯಲ್ಲಿ ಅಂಪಾರು ಗ್ರಾಮದ ಯುವತಿ ಅಂಬಿಕಾ (22) ಮೃತಪಟ್ಟಿದ್ದು, ಆಕೆಯ ಸಹೋದರ ಶಾಂತರಾಮ ಹಾಗೂ ಸಂಬಂಧಿ ನಯನಕುಮಾರ್ ಗಂಭೀರ ಗಾಯಗೊಂಡಿದ್ದಾರೆ.
ಮೂಡ್ಲಕಟ್ಟೆ ಸಮೀಪ ಶುಕ್ರವಾರ ಸಂಜೆ ವೇಳೆಗೆ ಬಸ್ರೂರು ಕಡೆಯಿಯಿಂದ ಬರುತ್ತಿದ್ದ ಕಾರು ಚಾಲಕ ಮುಂಭಾಗದ ಇನ್ನೊಂದು ಕಾರನ್ನು ಓವರ್ ಟೇಕ್ ಮಾಡುತ್ತಿದ್ದ ವೇಳೆ ಎದುರಿನಿಂದ ಬರುತ್ತಿದ್ದ ಆಟೋರಿಕ್ಷಾಕ್ಕೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿಯ ರಭಸಕ್ಕೆ ಆಟೋ ರಿಕ್ಷಾ ಎದುರಿದ್ದ ಕಾರಿನ ಮೇಲೆ ಪಲ್ಟಿಯಾಗಿದೆ. ಪರಿಣಾಮ ರಿಕ್ಷಾದಲ್ಲಿದ್ದ ಅಂಬಿಕಾ ಗಂಭೀರ ಗಾಯಗೊಂಡು ಸಾವನ್ನಪ್ಪಿದ್ದಾರೆ. ರಿಕ್ಷಾದಲ್ಲಿದ್ದ ಶಾಂತಾರಾಮ್ ಹಾಗೂ ನಯನ್ ಕುಮಾರ್ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮೃತ ಅಂಬಿಕಾ ಅವರು ವಡೇರಹೋಬಳಿಯ ಸಂಬಂಧಿಯ ಮನೆಯಿಂದ ಸಹೋದರ ಶಾಂತಾರಾಮ ಹಾಗೂ ನಯನಕುಮಾರ್ ಜೊತೆಗೆ ಆಟೋದಲ್ಲಿ ತನ್ನ ಮನೆಯಾದ ಅಂಪಾರಿಗೆ ಪ್ರಯಾಣಿಸುತ್ತಿದ್ದು, ಈ ವೇಳೆ ಅವಘಡ ನಡೆದಿದೆ. ಕುಂದಾಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.