ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಜಿಲ್ಲೆಯ ಲಾರಿ ಚಾಲಕ – ಮಾಲೀಕರ ಸಂಕಷ್ಟಗಳಿಗೆ ಸ್ಪಂದಿಸದ ಜಿಲ್ಲಾಡಳಿತದ ವಿರುದ್ಧ ಕೋಟ, ಕೋಟೇಶ್ವರ, ಹೆಮ್ಮಾಡಿ, ಬೈಂದೂರು, ಬ್ರಹ್ಮಾವರ, ಕಾರ್ಕಳ ಸೇರಿದಂತೆ ವಿವಿಧ ಭಾಗಗಳಲ್ಲಿ ಲಾರಿ ಮಾಲೀಕರು ಹಾಗೂ ಚಾಲಕರು ಕಟ್ಟಡ ಸಾಮಾಗ್ರಿ ಸಾಗಾಟ ಸ್ಥಗಿತಗೊಳಿಸಿ ಬುಧವಾರದಿಂದ ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭಿಸಿದ್ದಾರೆ.
ಮರಳು, ಕಲ್ಲು, ಕಬ್ಬಿಣ, ಕೆಂಪು ಕಲ್ಲು, ಜೆಲ್ಲಿ, ಕೆಂಪು ಮಣ್ಣು ಸಾಗಿಸುವ ವ್ಯವಹಾರದಲ್ಲಿ 5000ಕ್ಕೂ ಅಧಿಕ ವಾಹನಗಳು ತೊಡಗಿಕೊಂಡಿದೆ. ಸಾಗಾಟ ಪರವಾನಿಗೆ, ಟ್ರಿಪ್ ಶೀಟ್ ಮೊದಲಾದ ಕಾರಣಗಳನ್ನು ಮುಂದೊಡ್ಡಿ ಪೊಲೀಸರು ವಾಹನ ವಶಪಡಿಸಿಕೊಳ್ಳುತ್ತಿದ್ದಾರೆ. ಲಾರಿ ಮಾಲಿಕರಿಗೆ 50,000ಕ್ಕೂ ಅಧಿಕ ದಂಡ ವಿಧಿಸುತ್ತಿದ್ದಾರೆ. ವಾಸ್ತವ ಅರಿವಿರುವ ಸರಕಾರ ಹಾಗೂ ಜಿಲ್ಲಾಡಳಿತ ಈ ಬಗ್ಗೆ ಸ್ಪಂದಿಸದೇ ಮೌನ ವಹಿಸಿದ್ದು, ಲಾರಿ ಮಾಲೀಕ ಚಾಲಕರನ್ನು ಸಂಕಷ್ಟಕ್ಕೆ ನೂಕಿದೆ ಎಂದು ಪ್ರತಿಭಟನಾ ನಿರತರು ಆರೋಪಿಸಿದ್ದಾರೆ.
ಕೂಲಿ ಕಾರ್ಮಿಕರಿಗೆ ಉದ್ಯೋಗವಿಲ್ಲ:
ಜಿಲ್ಲಾಡಳಿತ ಕಾನೂನು ಬಿಗುಗೊಳಿಸಿರುವುದರಿಂದ ಮರಳು, ಕಲ್ಲು, ಕೆಂಪು ಕಲ್ಲು, ಜೆಲ್ಲಿ, ಕೆಂಪು ಮಣ್ಣು ಮೊದಲಾದ ಕಟ್ಟಡ ಸಾಮಾಗ್ರಿಗಳನ್ನು ತೆಗೆಯುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ಸಾವಿರಾರು ಕೂಲಿ ಕಾರ್ಮಿಕರು ಸಂಕಷ್ಟ ಎದುರಿಸುವಂತಾಗಿದೆ. ನಿತ್ಯದ ದುಡಿಮೆಯನ್ನೇ ನಂಬಿ ಬದುಕುವ ಕೂಲಿ ಕಾರ್ಮಿಕರು 2-3 ವಾರದಿಂದ ಕೆಲಸವಿಲ್ಲದೇ ಕುಳಿತಿದ್ದಾರೆ. ಜಿಲ್ಲೆಯಲ್ಲಿ 5000ಕ್ಕೂ ಅಧಿಕ ಲಾರಿಗಳು ಸಂಚರಿಸುತ್ತಿದ್ದು, ಚಾಲಕ, ಕ್ಲೀನರ್, ಲೋಡರ್ಸ್, ಹೆಲ್ಪರ್ ಸೇರಿದಂತೆ 30,000ಕ್ಕೂ ಅಧಿಕ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿದೆ.
ವ್ಯವಹಾರಗಳಿಗೆ ಹೊಡೆತ:
ಜಿಲ್ಲೆಯಲ್ಲಿ ಕಟ್ಟಡ ಸಾಮಾಗ್ರಿ ಸಾಗಾಟ, ಕೆಂಪುಕಲ್ಲು, ಜೆಲ್ಲಿ, ಮರಳು ಗಣಿಗಾರಿಕೆ ಉದ್ಯಮದಿಂದ ಪರೋಕ್ಷವಾಗಿ ಹೋಟೆಲ್, ಗ್ಯಾರೇಜ್ ಹಾಗೂ ಇನ್ನಿತರ ಸ್ಥಳೀಯ ಉದ್ಯಮಗಳಿಗೆ ನಿರಂತರ ವ್ಯವಹಾರ ದೊರೆಯುತ್ತಿತ್ತು. ವಾಹನ ಸ್ಥಗಿತದಿಂದಾಗಿ ಅವಲಂಬಿತ ವ್ಯವಹಾರವೂ ಕ್ಷೀಣಗೊಂಡಿದೆ.
ಪ್ರತ್ಯೇಕ ನೀತಿ ಅಗತ್ಯ:
ರಾಜ್ಯದಲ್ಲಿ ಮರಳು ಹಾಗೂ ಇನ್ನಿತರ ಕಟ್ಟಡ ಸಾಮಾಗ್ರಿಗಳ ಗಣಿಗಾರಿಕೆಗೆ ಪ್ರತ್ಯೇಕ ನೀತಿ ಅಗತ್ಯವಿದೆ. ಕರಾವಳಿ ಭಾಗದಲ್ಲಿ ಸಿ.ಆರ್.ಝಡ್ ಕಾನೂನಿನ ಕಾರಣಕ್ಕೆ ಅಗತ್ಯಕ್ಕೆ ತಕ್ಕಷ್ಟು ಮರಳು ತೆಗೆಯಲು ಸಾಧ್ಯವಿಲ್ಲ. ಕೆಂಪುಕಲ್ಲು, ಜೆಲ್ಲಿ ಗಣಿಗಾರಿಕೆಗೆ ಹಲವು ತೊಡಕುಗಳಿವೆ. ಮನೆ, ಕಟ್ಟಡ ಕಟ್ಟುವವರಿಗೆ ಕಲ್ಲು ಮರಳಿನ ಅಗತ್ಯವಿದ್ದು ಬೇಡಿಕೆ ಹೆಚ್ಚಿರುವುದರಿಂದ ಸಕ್ರಮಕ್ಕಿಂತ ಅಕ್ರಮವೇ ಹೆಚ್ಚು ಎನ್ನುವ ಪರಿಸ್ಥಿತಿ ಇದೆ.
ಪರವಾನಿಕೆ ಪಡೆಯುವಲ್ಲಿನ ಜಟಿಲತೆ ಹಾಗೂ ಗಣಿ, ಪೊಲೀಸ್, ಕಂದಾಯ, ಅರಣ್ಯ ಇಲಾಖಾ ಅಧಿಕಾರಿಗಳ ಲಂಚಬಾಕತನ ಮತ್ತು ಗಣಿ ಉದ್ದಿಮೆದಾರರ ಅತಿಯಾಸೆ ಅಕ್ರಮ ಗಣಿಗಾರಿಕೆಗೆ ಹೆಚ್ಚು ಪ್ರಾಶಸ್ತ್ಯ ನೀಡುವಂತಾಗಿದೆ. ಕಟ್ಟಡ ಸಾಮಾಗ್ರಿಗಳ ಬೇಡಿಕೆ ಇದ್ದರೂ ಪೂರೈಸಲಾಗದ ಪರಿಸ್ಥಿತಿ ಇದ್ದು ಸರಕಾರವೂ ಇದಕ್ಕೆ ಸರಿಯಾದ ನೀತಿ ರೂಪಿಸದೇ ಪರೋಕ್ಷವಾಗಿ ಅಕ್ರಮಕ್ಕೆ ಅನುವು ಮಾಡಿಕೊಡುತ್ತಿದೆ. ಸರಕಾರದ ಬೊಕ್ಕಸಕ್ಕೆ ನಷ್ಟವಾಗುತ್ತಿದ್ದರೆ, ಅಕ್ರಮದಲ್ಲಿ ತೊಡಗಿರುವವರ ಜೇಬು ಮಾತ್ರ ತುಂಬುತ್ತಿದೆ.
* ಕಟ್ಟಡ ಸಾಮಾಗ್ರಿ ಸಾಗಾಟ ಉದ್ಯಮವನ್ನೇ ನಂಬಿ ಸಾವಿರಾರು ಕುಟುಂಬಗಳು ಬದುಕುತ್ತಿವೆ. ಮನೆ ಕಟ್ಟಡ ನಿರ್ಮಿಸುವವರು ಕಟ್ಟಡ ನಿರ್ಮಿಸುವವರಿಗೆ ಕಲ್ಲು ಮಣ್ಣು ಮರಳು ಇಲ್ಲದೇ ಕಾಮಗಾರಿ ನಡೆಸಲು ಸಾಧ್ಯವಿಲ್ಲ. ಜಟಿಲ ಕಾನೂನು ಸಡಿಲಗೊಳಿಸಲಿ ಇಲ್ಲವೇ ಮಾನವೀಯತೆ ನೆಲೆಯಲ್ಲಿ ಸಾಗಾಟಕ್ಕೆ ಸರಕಾರ ಅನುವು ಮಾಡಿಕೊಡಲಿ. ಇದನ್ನೇ ನಂಬಿ ಬದುಕುತ್ತಿರುವ ಚಾಲಕರು, ಕೂಲಿ ಕಾರ್ಮಿಕರ ಹೊಟ್ಟೆಯ ಮೇಲೆ ಹೊಡೆಯಬೇಡಿ. ಜಿಲ್ಲಾಡಳಿತ ಸಮಸ್ಯೆ ಆಲಿಸುವ ತನಕ ನಮ್ಮ ಪ್ರತಿಭಟನೆ ಮುಂದುವರಿಯಲಿದೆ – ಸುಧೀರ್ ಮಲ್ಯಾಡಿ, ಕೋಟದಲ್ಲಿ ಪ್ರತಿಭಟನಾ ನಿರತ ಲಾರಿ ಮಾಲಿಕ