ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಂದಿನ ಪೀಳಿಗೆಯನ್ನು ತಿದ್ದುವ ಕೆಲಸ ಮಾಡದಿದ್ದರೆ ಭವಿಷ್ಯದ ಸಮಾಜ ಕಲ್ಪಿಸಿಕೊಳ್ಳುವುದು ಕಷ್ಟ. ಈ ನಿಟ್ಟಿನಲ್ಲಿ ಮೌಲ್ಯಾಧಾರಿತ ಶಿಕ್ಷಣದ ಅಗತ್ಯವಿದ್ದು, ರೋಟರಿ ಜಿಲ್ಲೆಯಿಂದ ಮೌಲ್ಯಾಧಾರಿತ ಶಿಕ್ಷಣ ನೀಡಲು ಒತ್ತು ನೀಡಲಾಗುತ್ತಿದೆ ಎಂದು ರೋಟರಿ ಜಿಲ್ಲೆ 3182ರ ಗವರ್ನರ್ ಬಿ.ಸಿ. ಗೀತಾ ಹೇಳಿದರು.
ಅವರು ಇಲ್ಲಿನ ಅಂಬಿಕಾ ಇಂಟರ್ನ್ಯಾಷನಲ್ನಲ್ಲಿ ಬುಧವಾರ ಜರುಗಿದ ಜಿಲ್ಲಾ ಗವರ್ನರ್ ಅಧಿಕೃತ ಭೇಟಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ ಈ ಭಾರಿ ನಾಲ್ಕು ಯೋಜನೆ ಹಮ್ಮಿಕೊಳ್ಳಲಾಗುತ್ತಿದ್ದು, ಮಣ್ಣಿನ ಫಲವತ್ತತೆಯ ಪರೀಕ್ಷೆ, ತ್ಯಾಜ್ಯ ನಿರ್ವಹಣಾ ಘಟಕಕ್ಕೆ ಪ್ರಾಮುಖ್ಯತೆ ನೀಡಲಾಗುತ್ತಿದೆ. ಬೈಂದೂರು ರೋಟರಿ ಕ್ಲಬ್ ಗುಣಾತ್ಮಕ ಕಾರ್ಯಕ್ರಮ ಆಯೋಜನೆಗೆ ಒತ್ತು ನೀಡಿರುವುದು ಸಂತಸ ತಂದಿದೆ ಎಂದರು.
ಬೈಂದೂರು ರೋಟರಿ ಕ್ಲಬ್ಗೆ ಭೇಟಿ ನೀಡಿದ ಗವರ್ನರ್ ಅವರನ್ನು ಸ್ವಾಗತಿಸಿಕೊಳ್ಳಲಾಯಿತು. ಬಳಿಕ ಶಿರೂರು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಳವಡಿಸಲಾದ ಸ್ಯಾನಿಟರಿ ನ್ಯಾಪ್ಕಿನ್ ಡೆಸ್ಟ್ರಾಯ್ ಯುನಿಟ್ ಉದ್ಘಾಟಿಸಿದರು. ಬಳಿಕ ಕ್ಲೋಸ್ ಡೋರ್ ಮಿಟಿಂಗ್, ಕ್ಲಬ್ ಅಸ್ಸೆಂಬ್ಲಿಯಲ್ಲಿ ಭಾಗವಹಿಸಿದರು.
ಬೈಂದೂರು ರೋಟರಿ ಟ್ರಸ್ಟ್ ವತಿಯಿಂದ ಇಂಜಿನಿಯರಿಂಗ್ ಕಲಿಯುತ್ತಿರುವ ನಾಲ್ವರು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು. ಓರ್ವ ಇಂಜಿನಿಯರಿಂಗ್ ವಿದ್ಯಾರ್ಥಿಗೆ ಧನಸಹಾಯ, ಮುಲ್ಲಿಬಾರು ಶಾಲೆಯ ಓರ್ವ ಗೌರವ ಶಿಕ್ಷಕರಿಗೆ 1 ವರ್ಷದ ಸಂಭಾವನೆ ನೀಡಲಾಯಿತು. ಬಿಂದುವಾಣಿ ಬುಲೆಟಿನ್ ಬಿಡುಗಡೆಗೊಳಿಸಲಾಯಿತು.
ವಲಯ 1ರ ಸಹಾಯಕ ಗವರ್ನರ್ ಡಾ. ಸಂದೀಪ್ ಶೆಟ್ಟಿ, ವಲಯ ಸೇನಾನಿ ರಂಜಿತ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರೋಟರಿ ಬೈಂದೂರು ಅಧ್ಯಕ್ಷ ಪ್ರಸಾದ್ ಪ್ರಭು ಸ್ವಾಗತಿಸಿದರು. ಕಾರ್ಯದರ್ಶಿ ಸುಬ್ರಹ್ಮಣ್ಯ ಜಿ. ಉಪ್ಪುಂದ, ವರದಿ ವಾಚಿಸಿ ವಂದಿಸಿದರು. ಮಂಜುನಾಥ ಮಹಾಲೆ ಕಾರ್ಯಕ್ರಮ ನಿರೂಪಿಸಿದರು.