ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ನಮ್ಮ ಕುಂದಾಪ್ರ ಕನ್ನಡ ಬಳಗ ಗಲ್ಫ್ ವತಿಯಿಂದ ಯಶಸ್ವಿಯಾಗಿ ಆಯೋಜಿಸಲಾಗುತ್ತಿರುವ ಕುಂದಗನ್ನಡ ಉತ್ಸವವನ್ನು ಈ ಭಾರಿಯೂ ಅದ್ದೂರಿಯಾಗಿ ನಡೆಸಲಾಗುತ್ತಿದ್ದು, ಹಲವು ಕಾರ್ಯಕ್ರಮಗಳನ್ನು ಒಳಗೊಂಡಿದೆ ಎಂದು ಕುಂದಾಪ್ರ ಕನ್ನಡ ಬಳಗದ ಮುಂದಾಳು ಎನ್.ರಘುರಾಮ ದೇವಾಡಿಗ ರಘುರಾಮ ದೇವಾಡಿಗ ಹೇಳಿದರು.
ಅಕ್ಟೋಬರ್ 29ರಂದು ಯುಎಇ ಅಜ್ಮನ್ ನಗರದಲ್ಲಿ ಬೆಳಿಗ್ಗೆ 11ರಿಂದ ಸಂಜೆ 6 ಗಂಟೆಯ ತನಕ ನಡೆಯಲಿರುವ ಕಾರ್ಯಕ್ರಮದಲ್ಲಿ ವಿಶೇಷ ಆಕರ್ಷಣೆಯಾಗಿ ಗಲ್ಫ್ ದೇಶದಲ್ಲಿ ಮಂದರ್ತಿ ಮೇಳದಿಂದ ಮೊದಲ ಭಾರಿಗೆ ಯಕ್ಷಗಾನ ಪ್ರದರ್ಶನ ಆಯೋಜಿಸಲಾಗಿದೆ. ಮೇಳದ ಕಲಾವಿದರು ಹಾಗೂ ಅನಿವಾಸಿ ಭಾರತೀಯ ಕಲಾವಿದರಿಂದ ‘ಪಾಪಣ್ಣ ವಿಜಯ – ಗುಣಸುಂದರಿ’ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ಅಂದು ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ವಿವಿಧ ಗಣ್ಯರು ಭಾಗವಹಿಸಲಿದ್ದು ಕುಂದಗನ್ನಡ ಉತ್ಸವದಲ್ಲಿ ಮೂವರು ಎಲೆಮರೆಯ ಸಾಧಕರಿಗೆ ಕುಂದಾಪ್ರ ಕನ್ನಡ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಪಡುಕೋಣೆಯ ಖ್ಯಾತ ನಾಟಿ ವೈದ್ಯ ಮ್ಯಾಕ್ಸಿಮ್ ಒಲಿವೆರಾ, ಗೋಪ್ರೇಮಿ ಸಮಾಜ ಸೇವಕ ಸಂಜೀವ ದೇವಾಡಿಗ ಹಾಗೂ ಜೀವರಕ್ಷಕ ಮುಳುಗುತಜ್ಞ ದಿನೇಶ್ ಖಾರ್ವಿ ಅವರನ್ನು ಕುಂದಾಪ್ರ ಕನ್ನಡ ರತ್ನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದರು.
ಪತ್ರಕರ್ತ ಅರುಣ್ ಕುಮಾರ್ ಶಿರೂರು ಮಾತನಾಡಿ, ನಮ್ಮ ಕುಂದಾಪ್ರ ಕನ್ನಡ ಬಳಗ ಆರಂಭವಾದ ದಿನದಿಂದಲೂ ಹತ್ತಾರು ಸಾಮಾಜಿಕ ಚಟುವಟಿಕೆಗಳನ್ನು ಆಯೋಜಿಸಿದೆ. ಆರೋಗ್ಯ, ಶಿಕ್ಷಣ ಕ್ಷೇತ್ರಕ್ಕೆ ಹಲವಾರು ಕೊಡುಗೆಗಳನ್ನು ನೀಡಿದೆ. ವಿಶೇಷವಾಗಿ ಅರಬ್ ದೇಶಗಳಲ್ಲಿ ಉದ್ಯೋಗಕ್ಕಾಗಿ ನೆಲೆಸಿರುವ ಕುಂದನಾಡಿಗರಿಗೆ ಸಮಸ್ಯೆಗಳು ಎದುರಾದಾಗ ಮತ್ತು ತುರ್ತು ಸಂದರ್ಭಗಳಲ್ಲಿ ಅನಿವಾಸಿಗಳಿಗೆ ಸ್ಪಂದನೆ ನೀಡಲಾಗುತ್ತಿದೆ. ಕೋವಿಡ್ ಸಂದರ್ಭದಲ್ಲಿ ತುರ್ತಾಗಿ ಊರಿಗೆ ಮರಳುವವರಿಗೆ ವಿಮಾನ ವ್ಯವಸ್ಥೆ, ಉಡುಪಿ ಜಿಲ್ಲೆಯ ಆಸ್ಪತ್ರೆಗಳಿಗೆ ಮಾಸ್ಕ್, ಕಿಟ್ ಮೊದಲಾದವುಗಳನ್ನು ವಿತರಿಸಲಾಗಿದೆ ಎಂದರು.
ನಮ್ಮ ಕುಂದಾಪ್ರ ಕನ್ನಡ ಬಳಗ ಗಲ್ಫ್ ವತಿಯಿಂದ ಆಯೋಜಿಸಲಾಗುತ್ತಿರುವ ಈ ಅದ್ದೂರಿ ಸಮಾರಂಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಸದನ್ ಕಾರ್ಯದರ್ಶಿ ಸುಧಾಕರ ಪೂಜಾರಿ, ಪೋಷಕರು, ಗೌರವಾಧ್ಯಕ್ಷರು ಸೇರಿದಂತೆ ವಿವಿಧ ಗಲ್ಫ್ ರಾಷ್ಟ್ರಗಳಲ್ಲಿ ನೆಲೆಸಿರುವ ಸದಸ್ಯರು ಭಾಗವಹಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬಳಗದ ಸದಸ್ಯರಾದ ಶೀನ ದೇವಾಡಿಗ, ಸುಧಾಕರ ಆಚಾರ್ಯ, ತಮ್ಮಯ್ಯ ದೇವಾಡಿಗ ಉಪಸ್ಥಿತರಿದ್ದರು.