ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಸ್ಥಳೀಯ ಕೇಬಲ್ ಟಿ.ವಿ ನೆಟ್‌ವರ್ಕ್ ಚಾನೆಲ್‌ಗಳಲ್ಲಿ ಅನಪೇಕ್ಷಿತ ಸುದ್ದಿಗಳನ್ನು ಪ್ರಸಾರ ಮಾಡಿದ್ದಲ್ಲಿ ಅಂತಹ ಕೇಬಲ್ ಟಿ.ವಿ ಆಪರೇಟರ್ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಹೇಳಿದರು.
ಅವರು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಕೇಬಲ್ ಟೆಲಿವಿಷನ್ ನಿರ್ವಹಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಕೇಬಲ್ ಟಿ.ವಿ ಯಲ್ಲಿ ಪ್ರಸಾರ ವಾಗುವ ಯಾವುದೇ ಕಾರ್ಯಕ್ರಮಗಳು ಸಮಾಜದಲ್ಲಿ ಶಾಂತಿ ಭಂಗ ತರುವ ಯಾವುದೇ ಸಮುದಾಯಗಳ ಮಧ್ಯೆ ವೈರತ್ವ ತರುವ, ನೋವು ಉಂಟು ಮಾಡುವಂತಹ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವಂತಿಲ್ಲ ಹಾಗೂ ಜಾಹೀರಾತುಗಳು ಸಂಹಿತೆಗೆ ಅನುಗುಣವಾಗಿಲ್ಲದೇ ಇದ್ದಲ್ಲಿ ಅಥವಾ ಯಾವುದೇ ಆಧಾರವಿಲ್ಲದೇ ವಿವಿಧ ಧರ್ಮ , ಜನಾಂಗ, ಭಾಷೆ ಅಥವಾ ಪ್ರಾದೇಶಿಕ ಗುಂಪುಗಳ ಅಥವಾ ಜಾತಿ ನಡುವೆ ವೈಷ್ಯಮ್ಯದ ಅಥವಾ ವೈರತ್ವದ ಭಾವನೆಗಳನ್ನು ಬೆಳೆಸುವಂತಿದ್ದಲ್ಲಿ ಅವುಗಳನ್ನು ಪ್ರಸಾರ ಮಾಡುವಂತಿಲ್ಲ ಎಂದರು.
ಕೇಬಲ್ ಆಪ್‌ರೇಟರ್ಗಳ ಗ್ರಾಹಕರುಗಳು ನಿಗಧಿಪಡಿಸಿದ ದರವನ್ನು ವಸೂಲಿ ಮಾಡಬೇಕು. ಉತ್ತಮ ಗುಣಮಟ್ಟದ ನೆಟ್‌ವರ್ಕ್ ಸಿಗ್ನಲ್‌ಗಳನ್ನು ಒದಗಿಸಬೇಕು. ಈ ಬಗ್ಗೆ ದೂರುಗಳು ಬಂದಲ್ಲಿ ಕೇಬಲ್ ಆಪರೇಟರ್‌ಗಳನ್ನು ಹೊಣೆಗಾರರನ್ನಾಗಿ ಮಾಡಿ, ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಕೇಬಲ್ ಟೆಲಿವಿಷನ್ ನೆಟ್‌ವರ್ಕ್ ಕಾರ್ಯಕ್ರಮ ಕಾಯಿದೆಗಳು ಹಾಗೂ ನಿಯಮಗಳನ್ನು ಚಾಚೂ ತಪ್ಪದೇ ಪಾಲಿಸಬೇಕು. ಒಂದೊಮ್ಮೆ ನಿಯಮ ಉಲ್ಲಂಘಿಸಿದ್ದಲ್ಲಿ ಕಾನೂನಿನಡಿಯಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು.
ಸಮಿತಿಯ ಕಾರ್ಯದರ್ಶಿ ಹಾಗೂ ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್ ಬಿ ಮಾತನಾಡಿ, ಸ್ಥಳೀಯ ಟಿ.ವಿ ಕಾರ್ಯಕ್ರಮಗಳ ಮೇಲೆ ಗಮನ ನೀಡಲಾಗಿದೆ. ಕೇಬಲ್ ಟಿ.ವಿ ಆಪರೇಟರ್‌ಗಳು ಗ್ರಾಹಕರೊಂದಿಗೆ ಸಂಯಮದೊAದಿಗೆ ವರ್ತಿಸಿ, ಗುಣಮಟ್ಟದ ಸೇವೆಗಳನ್ನು ಒದಗಿಸಬೇಕು ಎಂದರು.
ಕೇಬಲ್ ಟಿ.ವಿ ಸಂಬAಧಿಸಿದAತೆ ಸಾರ್ವಜನಿಕರು ಯಾವುದೇ ರೀತಿಯ ದೂರುಗಳಿದ್ದಲ್ಲಿ ಜಿಲ್ಲಾ ಮಟ್ಟದ ದೂರು ಕೋಶವನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ನಾಯರ್‌ಕೆರೆ, ಬ್ರಹ್ಮಗಿರಿ, ಉಡುಪಿ ಕಚೇರಿಯಲ್ಲಿ ತೆರೆಯಲಾಗಿದೆ. ಇಲ್ಲಿ ದೂರುಗಳನ್ನು ನೀಡಬಹುದಾಗಿದೆ ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್, ಪವರ್ ಸಂಸ್ಥೆಯ ಸಾಧನಾ ಕಿಣಿ, ಶಿಕ್ಷಣ ತಜ್ಞ ರಾಮಕೃಷ್ಣ ರಾವ್, ವಿಶ್ವಾಸದ ಮನೆಯ ಅಧ್ಯಕ್ಷ ಮ್ಯಾಥೀವ್ ಕ್ಯಾಸ್ತಲೀನ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.