ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ಆನೆಗುಡ್ಡೆ ಶ್ರೀವಿನಾಯಕ ದೇವಸ್ಥಾನದಲ್ಲಿ ಕೆಲವು ದಿನಗಳ ಹಿಂದೆ ನಡೆದ ಪರ್ಸ್ ನಲ್ಲಿದ್ದ ಕರಿಮಣಿ ಸರ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಮಹಿಳಾ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಹುಬ್ಬಳ್ಳಿ ಬೆಂಡಗೇರಿ ಮೂಲದ ಬೀಬಿ ಜಾನ್(58) ಹಾಗೂ ಪಾರವ್ವ (54) ಎಂದು ಗುರುತಿಸಲಾಗಿದೆ. ಮದುವೆ ನಿಮಿತ್ತ ಖರೀದಿಸಿ ತಂದ ಕರಿಮಣಿ ಸರವನ್ನು ಬ್ಯಾಗಿನಲ್ಲಿಟ್ಟು ಡಿ.27ರಂದು ಆನೆಗುಡ್ಡೆ ಶ್ರೀವಿನಾಯಕ ದೇವಸ್ಥಾನದ ಪೂಜೆಗೆ ಹೋಗಿದ್ದ ವೇಳೆ ಕಳ್ಳರು ಚಿನ್ನಾಭರಣವಿದ್ದ ಪರ್ಸ್ ಕಳವು ಮಾಡಿದ್ದರು. ಕುಂದಾಪುರ ಪೊಲೀಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ತನಿಖೆ ಕೈಗೆತ್ತಿಕೊಂಡ ಪೊಲೀಸರ ತಂಡವು ಸಿಸಿಟಿವಿ ಮತ್ತು ಇತರ ತಾಂತ್ರಿಕ ದಾಖಲೆ ವಿಶ್ಲೇಷಿಸಿ, ಪ್ರಕರಣ ದಾಖಲಾದ ಮೂರೇ ದಿನದಲ್ಲಿ ಆರೋಪಿಗಳನ್ನು ಬಂಧಿಸಿದರು. ಇವರಿಂದ ಕಳವುಗೈದ 3.5 ಲಕ್ಷ ಮೌಲ್ಯದ 51.900 ಗ್ರಾಂ ತೂಕದ ಚಿನ್ನದ ಕರಿಮಣಿಯನ್ನು ಪೊಲೀಸರು ವಶಕ್ಕೆ ಪಡೆದು ಕೊಂಡಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಈ ಕಾರ್ಯಾಚರಣೆಯನ್ನು ಉಡುಪಿ ಎಸ್ಪಿ ಡಾ. ಅರುಣ್ ಕೆ ಅವರ ಮಾರ್ಗದರ್ಶನದಲ್ಲಿ ಹೆಚ್ಚುವರಿ ಎಸ್ಪಿಗಳಾದ ಪರಮೇಶ್ವರ ಹೆಗಡೆ, ಎಸ್.ಟಿ. ಸಿದ್ಧಲಿಂಗಪ್ಪ ನಿರ್ದೇಶನದಲ್ಲಿ, ಕುಂದಾಪುರ ಡಿವೈಎಸ್ಪಿ ಕೆ.ಯು.ಬೆಳ್ಳಿಯಪ್ಪನೇತೃತ್ವದಲ್ಲಿ ಕುಂದಾಪುರ ನಗರ ಠಾಣೆ ನಿರೀಕ್ಷಕ ಯು.ಬಿ.ನಂದಕುಮಾರ್, ಉಪ ನಿರೀಕ್ಷಕ ವಿನಯ್ ಎಂ.ಕೊರ್ಲಹಳ್ಳಿ, ಕ್ರೈಂ ವಿಭಾಗದ ಎಸ್ಸೈ ಪ್ರಸಾದ್ ಕುಮಾರ್ ಕೆ., ಸಿಬ್ಬಂದಿಗಳಾದ ಸಂತೋಷ್ ಕುಮಾರ್, ಶ್ರೀಧರ್, ರಾಮ ಪೂಜಾರಿ, ಮೋನಿಕಾ, ಪದ್ಮಾವತಿ ನಡೆಸಿದ್ದಾರೆ.