ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೆಂಗಳೂರು: 15ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಅದ್ದೂರಿ ಚಾಲನೆ ಸಿಕ್ಕಿದೆ. ಈ ಬಾರಿ ಬೆಂಗಳೂರು ಚಿತ್ರೋತ್ಸವಕ್ಕೆ ನಟ ಡಾಲಿ ಧನಂಜಯ್ ಅವರನ್ನು ಈ ಬಾರಿಯ ಚಿತ್ರೋತ್ಸವಕ್ಕೆ ರಾಯಭಾರಿಯಾಗಿ ಸರ್ಕಾರ ಘೋಷಿಸಿದೆ. ಡಾಲಿ ಧನಂಜಯ್ ಅವರನ್ನು ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ರಾಯಭಾರಿಯಾಗಿ ನೇಮಕ ಮಾಡಿರುವುದು ಅವರ ಅಭಿಮಾನಿಗಳಿಗೆ, ಸಿನಿಮಾ ಪ್ರೇಮಿಗಳಿಗೆ ಖುಷಿ ತಂದಿದೆ.
ವಿಧಾನಸೌಧದ ಮುಂಭಾಗದಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಬೆಂಗಳೂರು ಅಂತರರಾಷ್ಟ್ರೀಯ ಚಿತ್ರೋತ್ಸವಕ್ಕೆ ಅದ್ದೂರಿ ಚಾಲನೆ ನೀಡಿದರು.
ಸಿಎಂ ಸಿದ್ದರಾಮಯ್ಯ ಅವರ ಜೊತೆಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಡಾಲಿ ಧನಂಜಯ, ಸಾಧು ಕೋಕಿಲ, ಆರಾಧನಾ ಸೇರಿದಂತೆ ಅನೇಕ ಸಿನಿ ಗಣ್ಯರು ಉಪಸ್ಥಿತರಿದ್ದರು.
ಈ ಬಾರಿ ಚಿತ್ರೋತ್ಸವಕ್ಕೆ ರಾಯಭಾರಿಯಾಗಿ ಆಯ್ಕೆಯಾಗಿರುವ ಡಾಲಿ ಧನಂಜಯ ಮಾತನಾಡಿ ಚಿತ್ರೋದ್ಯಮದ ಪರವಾಗಿ ಒಂದಿಷ್ಟು ಬೇಡಿಕೆಗಳನ್ನು ಸಿಎಂ ಮುಂದಿಟ್ಟರು.
‘ಕೊರೊನಾ ಬಳಿಕ ಸಬ್ಸಿಡಿಯನ್ನು ನಿಲ್ಲಿಸಲಾಗಿದೆ, ಇದರ ಜೊತೆಗೆ ಪ್ರಶಸ್ತಿ ಕೂಡ ನಿಂತಿದೆ. ಕಲಾವಿದರಿಗೆ ಪ್ರೋತ್ಸಾಹ ಕೂಡ ತುಂಬಾ ಮುಖ್ಯ. ಕಾಂತರ, ಕೆಜಿಎಫ್ ಅಂತಹ ಸಿನಿಮಾಗಳು ರಾಷ್ಟ್ರಮಟ್ಟದಲ್ಲಿ ಗುರುತಿಸುವಂತೆ ಮಾಡಿದೆ. ಇದರ ಜೊತೆಗೆ ಸರ್ಕಾರದ ಪ್ರೋತ್ಸಾಹ ಕೂಡ ತುಂಬಾ ಮುಖ್ಯ. ಸದ್ಯ ನಿಂತಿರುವ ಪ್ರಶಸ್ತಿ ಮತ್ತು ಸಬ್ಸಿಡಿಯನ್ನು ಮುಂದುವರಿಸಬೇಕೆಂದು ಚಿತ್ರರಂಗದ ಪರವಾಗಿ ನಾನು ಸಿಎಂ ಬಳಿ ಕೇಳಿಕೊಳ್ಳುತ್ತಿದ್ದೇನೆ’ ಎಂದರು.
ಧನಂಜಯ್ ಮಾತುಗಳಿಗೆ ಸಿಎಂ ಸಿದ್ದರಾಮಯ್ಯ ಅಲ್ಲೇ ಸಮ್ಮತಿ ಸೂಚಿಸಿದರು. ಚಿತ್ರೋತ್ಸವ ಉದ್ಘಾಟನೆ ಮಾಡಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ‘ಚಿತ್ರೋತ್ಸವಕ್ಕೆ ಸರ್ಕಾರ ಎಲ್ಲಾ ರೀತಿಯ ಸಹಾಯವನ್ನು ನೀಡಿದೆ, ಮುಂದೆಯೂ ಸಹ ಚಿತ್ರರಂಗಕ್ಕೆ ಎಲ್ಲಾ ರೀತಿಯ ಸಹಾಯವನ್ನು ಮಾಡಲಿದೆ. ಕನ್ನಡ ಚಿತ್ರರಂಗಕ್ಕೆ ಎಲ್ಲಾ ರೀತಿಯ ಬೆಂಬಲ, ಹಣಕಾಸಿನ ಸಹಕಾರವನ್ನು ಕೊಡುತ್ತೇನೆ. 2019 ರಿಂದ ಚಲನಚಿತ್ರ ಪ್ರಶಸ್ತಿಗಳನ್ನು ಕೊಟ್ಟಿಲ್ಲ. ಈಗ ನಾನು ಕಮಿಟಿಗಳನ್ನು ಮಾಡಿದ್ದೇನೆ. ಆ ಕಮಿಟಿ ವರದಿ ಕೊಟ್ಟ ತಕ್ಷಣ ಎಲ್ಲಾ ವರ್ಷದ ಪ್ರಶಸ್ತಿಗಳನ್ನು ಕೊಡುತ್ತೇವೆ’ ಎಂದರು.
ಚಲನಚಿತ್ರೋತ್ಸವ ಮಾರ್ಚ್ 7 ರವರೆಗೆ ನಡೆಯಲಿದೆ. ಈ ಬಾರಿ 50ಕ್ಕೂ ಹೆಚ್ಚು ರಾಷ್ಟ್ರಗಳಿಂದ ಆಸ್ಕರ್ ಪ್ರಶಸ್ತಿಗೆ ನಾಮಾಂಕಿತವಾದ ಸಿನಿಮಾಗಳೂ ಸೇರಿದಂತೆ 200ಕ್ಕೂ ಹೆಚ್ಚು ಚಲನಚಿತ್ರಗಳು ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿವೆ. ವಿಶ್ವದ ಪ್ರತಿಷ್ಠಿತ ಚಲನಚಿತ್ರೋತ್ಸವಗಳಲ್ಲಿ ಪಾಲ್ಗೊಂಡಿದ್ದ ಅತ್ಯುತ್ತಮ ಚಲನಚಿತ್ರಗಳು 15ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾಗವಹಿಸುತ್ತಿವೆ.