ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ರಾಷ್ಟ್ರೀಯ ಹೆದ್ದಾರಿ 66ರ ದುರ್ಗಾಂಬಾ ಬಸ್ ಡಿಪೋ ಎದುರು ಬಸ್ ಹಾಗೂ ಬೈಕಿನ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರ ಪುರಸಭೆಯ ಪೌರ ಕಾರ್ಮಿಕ ಸಾವನ್ನಪ್ಪಿದ ಘಟನೆ ಗುರುವಾರ ರಾತ್ರಿ ನಡೆದಿದೆ. ಬಾರ್ಕೂರಿನ ಬಂಡಿಮಠ ನಿವಾಸಿ ಶಂಕರ ಹಾಗೂ ಬೀಚು ಎಂಬುವರ ಪುತ್ರ ಸುಂದರ್ (39) ಮೃತ ದುರ್ದೈವಿ.
ಕಳೆದ 15 ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ಕುಂದಾಪುರದ ಪುರಸಭೆಯಲ್ಲಿ ಪೌರಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಸುಂದರ್, ಮೂರು ತಿಂಗಳ ಹಿಂದಷ್ಟೇ ಖಾಯಂ ಪೌರಕಾರ್ಮಿಕರಾಗಿ ನೇಮಕಗೊಂಡಿದ್ದರು.
ಗುರುವಾರ ಸಂಜೆ ತನ್ನ ಮನೆಯಾದ ಬಂಡಿಮಠದಿಂದ ಬೈಕಿನಲ್ಲಿ ಕುಂದಾಪುರಕ್ಕೆ ವಾಪಸ್ ಬರುತ್ತಿದ್ದರು. ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಹಂಗಳೂರಿನ ದುರ್ಗಾಂಬ ಬಸ್ ಡಿಪೋ ಎದುರುಗಡೆ ಹೆದ್ದಾರಿಯಿಂದ ಸರ್ವಿಸ್ ರಸ್ತೆ ಕಡೆಗೆ ಬೈಕನ್ನು ತಿರುಗಿಸುತ್ತಿದ್ದ ವೇಳೆ ಕುಂದಾಪುರದಿಂದ ಡಿಪೋಗೆ ತೆರಳುತ್ತಿದ್ದ ದುರ್ಗಾಂಬಾ ಬಸ್ ಹೆದ್ದಾರಿಯಿಂದ ತಿರುವು ಪಡೆದುಕೊಳ್ಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಬೈಕ್ ಸವಾರ ಸುಂದರ್ ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ.
ಕುಂದಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.