ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತ್ರಾಸಿ ಕಡೆಯಿಂದ ಕುಂದಾಪುರ ಕಡೆಗೆ ತೆರಳುತ್ತಿದ್ದ ಖಾಸಗಿ ಬಸ್ಸಿಗೆ ಲಾರಿ ಡಿಕ್ಕಿಯಾದ ಪರಿಣಾಮ ಬಸ್ಸಿನಲ್ಲಿ ಶಾಲೆಗೆ ತೆರಳುತ್ತಿದ್ದ ವಿದ್ಯಾರ್ಥಿಗಳಿಗೆ ಗಂಭೀರ ಗಾಯಗಳಾದ ಘಟನೆ ಶನಿವಾರ ತಲ್ಲೂರು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬೆಳಿಗ್ಗೆ ನಡೆದಿದೆ.
ತಲ್ಲೂರು ಪ್ರವಾಸಿ ಪೆಟ್ರೋಲ್ ಬಂಕ್ ಎದುರು ಬೈಂದೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ಎ.ಕೆ.ಎಂ.ಎಸ್ ಸಂಸ್ಥೆಯ ಬಸ್ಸಿಗೆ ಹಿಂಬದಿಯಿಂದ ಬರುತ್ತಿದ್ದ ಲಾರಿ ಡಿಕ್ಕಿ ಹೊಡಿದಿದ್ದು, ಬಸ್ಸಿನಲ್ಲಿದ್ದ ಹಲವು ವಿದ್ಯಾರ್ಥಿಗಳಿಗೆ ಗಾಯಗಳಾಗಿದೆ. ಅಪಘಾತದ ತೀವ್ರತೆಗೆ ಬಸ್ಸಿನ ಹಿಂಭಾಗ ಹಾಗೂ ಲಾರಿಯ ಮುಂಭಾಗ ಸಂಪೂರ್ಣ ನುಜ್ಜುಗುಜ್ಜಾಗಿದೆ. ಗಾಯಾಳುಗಳನ್ನು ಕುಂದಾಪುರದ ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಭೀರ ಗಾಯಗೊಂಡಿದ್ದ ಕುಂದಾಪುರದ ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಪ್ರಸಾದ್ ಎಂಬಾತ ಗಂಭೀರ ಗಾಯಗೊಂಡು ಮಣಿಪಾಲದ ಆಸ್ಪತ್ರೆಗೆ ದಾಖಲಾಗಿದ್ದಾನೆ. ಅದೇ ಕಾಲೇಜಿನ ವಿದ್ಯಾರ್ಥಿಗಳಾದ ಶ್ರೇಯಸ್ ಪೂಜಾರಿ, ದೀಪಶ್ರೀ, ತನುಷ್, ಪ್ರೀತಮ್, ಕೋಟ ಆಶ್ರಿತಾ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿನಿಯರಾದ ಅಶ್ವಿನಿ ಹಾಗೂ ಅಶ್ಮಿತಾ, ಇತರ ಪ್ರಯಾಣಿಕರಾದ ಶಿವರಾಂ, ವಿದ್ಯಾ, ಸತೀಶ್, ದೀಪ ಹಾಗೂ ಸುಕ್ರ ಎಂಬುವವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ತಲ್ಲೂರಿನ ಪೆಟ್ರೋಲ್ ಬಂಕ್ ಎದುರು ಪ್ರಯಾಣಿಕರೋರ್ವರನ್ನು ಹತ್ತಿಸಿಕೊಳ್ಳಲು ಬಸ್ಸ ನಿಲ್ಲಿಸಿದ್ದು, ಪ್ರಯಾಣಿಕ ಬಸ್ ಹತ್ತಿದ ಬಳಿಕ ಯಾವುದೇ ಮುನ್ಸೂಚನೆ ನೀಡದೇ ಬಸ್ ಚಲಾಯಿಸಲಾಗಿದೆ. ಇದೇ ಸಂದರ್ಭದಲ್ಲಿ ಹಿಂಬದಿಯಲ್ಲಿ ಬರುತ್ತಿದ್ದ ಲಾರಿ ಬ್ರೇಕ್ ಹಾಕಿದ್ದರೂ ನಿಯಂತ್ರಿಸಲು ಸಾಧ್ಯವಾಗದೇ ಬಸ್ ಹಿಂಭಾಗಕ್ಕೆ ಡಿಕ್ಕಿಯಾಗಿದೆ. /ಕುಂದಾಪ್ರ ಡಾಟ್ ಕಾಂ/
ಸಂಚಾರ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕುಂದಾಪುರದ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.