ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ರಾಜ್ಯ ಸರಕಾರ ಹಾಗೂ ಜಿಲ್ಲಾಡಳಿತ ಶಾಸಕರ ಸಾಂವಿಧಾನಿಕ ಹಕ್ಕುಗಳನ್ನು ಮೊಟಕುಗೊಳಿಸಲು ಯತ್ನಿಸುತ್ತಿದೆ ಎಂದು ಆರೋಪಿಸಿ ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಗುರುರಾಜ ಗಂಟಿಹೊಳೆ ಅವರು ಬೈಂದೂರು ಆಡಳಿತ ಸೌಧದ ಎದುರು ಸೋಮವಾರ ಅಹೋರಾತ್ರಿ ಪ್ರತಿಭಟನೆ ಕೈಗೊಂಡಿದ್ದಾರೆ.
ಈ ವೇಳೆ ಅವರು ಮಾತನಾಡಿ, ಜನರು ಕರೆದಲ್ಲಿಗೆ ತೆರಳಿ ಅಹವಾಲುಗಳನ್ನು ಸ್ವೀಕರಿಸುತ್ತೇನೆ. ಅವರ ಅನುಕೂಲಕ್ಕಾಗಿಯೇ ಕ್ಷೇತ್ರದ ನಾಲ್ಕು ಭಾಗಗಳಲ್ಲಿ ಕಛೇರಿ ತೆರೆದು ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಲಾಗುತ್ತಿದೆ. ಅಧಿಕಾರಿಗಳಿಗೂ ಕೂಡ ಜನರ ಸಮಸ್ಯೆಗೆ ಸ್ಪಂದಿಸುವ ಜವಾಬ್ದಾರಿ ಇದ್ದು, ಸಾರ್ವಜನಿಕರ ಸಮಸ್ಯೆಗಳ ಪರಿಹಾರಕ್ಕಾಗಿ ನಾನು ಕರೆದಲ್ಲಿಗೆ ಬರುವುದು ಅವರ ಕರ್ತವ್ಯವಾಗಿದೆ. ಆದರೆ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರದ ಅಧಿಕಾರದಲ್ಲಿ ಇರುವುದನ್ನು ಬಳಸಿಕೊಂಡು ಸ್ಥಳೀಯ ಕಾಂಗ್ರೆಸ್ ನಾಯಕರು ಅಧಿಕಾರಿಗಳ ದಾರಿ ತಪ್ಪಿಸುತ್ತಿದ್ದು, ಶಾಸಕರು ಆಯೋಜಿಸುವ ಸಭೆಗಳಿಗೆ ತೆರಳದಂತೆ ಪರೋಕ್ಷವಾಗಿ ಒತ್ತಡ ಹಾಕುತ್ತಲೇ ಬಂದಿದ್ದಾರೆ ಎಂದು ಆರೋಪಿಸಿದರು.




ಹಿಂದಿನ ಸರಕಾರದ ಅವಧಿಯಲ್ಲಿ ಬೈಂದೂರು ಕ್ಷೇತ್ರಕ್ಕೆ ರೂ. 3 ಸಾವಿರ ಕೋಟಿ ಅನುದಾನ ಬಂದಿದ್ದು, ಈ ಅವಧಿಯಲ್ಲಿ ಒಂದು ವರ್ಷ ಕಳೆದರೂ ಯಾವುದೇ ಅನುದಾನ ಬಂದಿಲ್ಲ. ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಾರ್ವಜನಿಕರ ಕೆಲಸಗಳನ್ನು ಮಾಡಬೇಕಾದ ಅನಿವಾರ್ಯತೆ ಇದ್ದು, ಸ್ಥಳೀಯ ಕಾಂಗ್ರೆಸ್ ನಾಯಕರು ಇದಕ್ಕೆ ಹಸ್ತಕ್ಷೇಪ ಮಾಡುತ್ತಿದ್ದಾರೆ. ಶಾಸಕರ ಹಕ್ಕನ್ನು ಮೊಟಕುಗಳಿಸುವ ಪ್ರಯತ್ನಕ್ಕೆ ಕೈಹಾಕಿದರೆ ಸುಮ್ಮನೆ ಕುಳಿತುಕೊಳ್ಳಲು ಸಾಧ್ಯವಿಲ್ಲ ಎಂದು ಎಚ್ಚರಿಸಿದರು.
ಬೈಂದೂರು ಪಟ್ಟಣ ಪಂಚಾಯತಿ ವ್ಯಾಪ್ತಿಯ ವಿವಿಧ ಸಮಸ್ಯೆಗಳ ಬಗ್ಗೆ ಚರ್ಚಿಸಲು ಶಾಸಕರು ಉಪ್ಪುಂದದಲ್ಲಿರುವ ತಮ್ಮ ಖಾಸಗಿ ಕಛೇರಿ ʼಕಾರ್ಯಕರ್ತʼದಲ್ಲಿ ಅಧಿಕಾರಿಗಳ ಸಭೆ ಕರೆದಿದ್ದರು. ಆ ಸಭೆಗೆ ಅಧಿಕಾರಿಗಳು ಭಾಗವಹಿಸದಂತೆ ಜಿಲ್ಲಾಡಳಿತ ಮೌಖಿಕ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಸಭೆ ರದ್ದುಗೊಂಡಿತ್ತು. ಇದು ಶಾಸಕರ ಹಕ್ಕುಚ್ಯುತಿ ಎಂದು ಆರೋಪಿಸಿ ಬೈಂದೂರಿನ ಆಡಳಿತ ಸೌಧದ ಎದುರು ಅಹೋರಾತ್ರಿ ಧರಣಿ ನಡೆಸಿದ್ದಾರೆ.

ತಹಶಿಲ್ದಾರರಿಂದ ಮನವೊಲಿಕೆ:
ಈ ಮಧ್ಯೆ ಪ್ರತಿಭಟನೆ ಕೈಬಿಡುವಂತೆ ಬೈಂದೂರು ತಹಶಿಲ್ದಾರ್ ಪ್ರದೀರ್ ಆರ್. ಅವರು ಶಾಸಕ ಗಂಟಿಹೊಳೆ ಅವರ ಮನವೊಲಿಸುವ ಪ್ರಯತ್ನ ಮಾಡಿದ್ದು, ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬಂದು ಸೂಕ್ತ ಉತ್ತರ ನೀಡುವ ತನಕ ಪ್ರತಿಭಟನೆ ಕೈಬಿಡುವ ಪ್ರಶ್ನೆಯೇ ಇಲ್ಲ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ತಹಶಿಲ್ದಾರ್ ಘಟನೆಯ ಬಗ್ಗೆ ಜಿಲ್ಲಾಧಿಕಾರಿಗಳಿಗೆ ವರದಿ ನೀಡಲಾಗುವುದು ಎಂದರು.
ಈ ವೇಳೆ ಬಿಜೆಪಿ ಮುಖಂಡರುಗಳಾದ ಸದಾನಂದ ಉಪ್ಪಿನಕುದ್ರು, ಬಿ.ಎಸ್. ಸುರೇಶ್ ಶೆಟ್ಟಿ, ಪುಷ್ಪರಾಜ ಶೆಟ್ಟಿ, ಉಮೇಶ್ ಶೆಟ್ಟಿ ಕಲ್ಗದ್ದೆ, ಶಿವರಾಜ ಪೂಜಾರಿ ಇನ್ನಿತರರು ಉಪಸ್ಥಿತರಿದ್ದರು.















