ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕುಂದಾಪುರ ಪುರಸಭೆಯ ಎರಡನೇ ಅವಧಿಯ ಅಧ್ಯಕ್ಷರಾಗಿ ಬಿಜೆಪಿಯ ಮೋಹನದಾಸ್ ಶೆಣೈ, ಉಪಾಧ್ಯಕ್ಷರಾಗಿ ಬಿಜೆಪಿಯ ಸಾಮಾನ್ಯ ಮಹಿಳಾ ಸದಸ್ಯೆ ವನಿತಾ ಎಸ್ ಬಿಲ್ಲವ ಆಯ್ಕೆಯಾಗಿದ್ದಾರೆ.
ಮೋಹನ್ದಾಸ್ ಶೆಣೈ ಅವರು ಕಾಂಗ್ರೆಸ್ ಅಭ್ಯರ್ಥಿ ಚಂದ್ರಶೇಖರ್ ಖಾರ್ವಿ ಅವರನ್ನು 16-8 ಮತಗಳ ಅಂತರದಲ್ಲಿ ಸೋಲಿಸಿದರು. ವನಿತಾ ಬಿಲ್ಲವ ಅವರು
ಕಾಂಗ್ರೆಸ್ ಪಕ್ಷದ ಕಮಲಾ ಪೂಜಾರಿಯವರನ್ನು ಅದೇ ಅಂತರದಲ್ಲಿ ಸೋಲಿಸಿದ್ದರು. ಚುನಾವಣೆಯ ಸಂದರ್ಭ ಪುರಸಭೆಯ ಸದಸ್ಯೆ ಲಕ್ಷ್ಮೀಬಾಯಿ ಗೈರು ಹಾಜರಾಗಿದ್ದರು. ಕುಂದಾಪ್ರ ಡಾಟ್ ಕಾಂ
ಕಳೆದ ಒಂದೂವರೆ ವರ್ಷದಿಂದ ಆಡಳಿತ ಮಂಡಳಿ ಆಯ್ಕೆಯಾಗಿರಲಿಲ್ಲ. ಕುಂದಾಪುರ ಪುರಸಭೆಯಲ್ಲಿ ಒಟ್ಟು 23 ಸ್ಥಾನಗಳಿವೆ. ಅದರಲ್ಲಿ 14 ಜನ ಬಿಜೆಪಿ ಸದಸ್ಯರಿದ್ದಾರೆ. 8 ಕಾಂಗ್ರೆಸ್ ಸದಸ್ಯರು ಹಾಗೂ 1 ಪಕ್ಷೇತರ ಸದಸ್ಯ ಕುಂದಾಪುರ ಶಾಸಕರು ಹಾಗೂ ಸಂಸದರು ಸೇರಿದಂತೆ ಇಬ್ಬರಿಗೆ ಮತದಾನದ ಅವಕಾಶವಿತ್ತು. ಒಟ್ಟು 25 ಮತದಾರರಿದ್ದು, ನಿರೀಕ್ಷೆಯಂತೆ ಬಿಜೆಪಿಯ ಮೋಹನದಾಸ್ ಶೆಣೈ ಅವರಿಗೆ ಬಿಜೆಪಿಯ 14 ಮತ್ತು ಶಾಸಕ, ಸಂಸದರ 2 ಮತಗಳು ಸೇರಿ 16 ಮತಗಳು ಲಭಿಸಿವೆ. ಕಾಂಗ್ರೆಸ್ ಸದಸ್ಯ ಚಂದ್ರಶೇಖರ್ ಖಾರ್ವಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದು, ಕಾಂಗ್ರೆಸ್ಸಿನ 8 ಮತಗಳು ಬಿದ್ದಿವೆ. ಕುಂದಾಪುರ ತಹಸೀಲ್ದಾರ್ ಶೋಭಾ ಲಕ್ಷ್ಮೀ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು. ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ, ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಡಿ ಉಪಸ್ಥಿತರಿದ್ದರು. ಪುರಸಭೆ ಮುಖ್ಯಾಧಿಕಾರಿ ಆನಂದ ನಿರ್ವಹಿಸಿದರು.
ಮೋಹನದಾಸ್ ಶೆಣೈ ಅವರು ನಾಲ್ಕು ಬಾರಿ ಪುರಸಭೆಯ ಸದಸ್ಯರಾಗಿ, ಎರಡು ಬಾರಿ ಪುರಸಭೆಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಇದೀಗ ಮೂರನೇ ಬಾರಿಗೆ ಅಧ್ಯಕ್ಷರಾದಂತಾಗಿದೆ.