ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಂದು ಆಧುನಿಕ ಜಗತ್ತಿಗೆ ರಾಷ್ಟ್ರಪಿತ ಗಾಂಧೀಜಿ ನೀಡಿದ ಕೊಡುಗೆ ಮಹೋನ್ನತವಾದುದು. ಸತ್ಯ, ಅಹಿಂಸೆ, ಶಾಂತಿಯ ಮೂಲಕ ಜಗತ್ತಿಗೆ ಮಾದರಿಯಾದ ವ್ಯಕ್ತಿತ್ವವನ್ನು ಹೊಂದಿದವರು. ತನ್ನ ಬದುಕಿನಲ್ಲಿ ಸ್ವಚ್ಚತಾ ಮಹತ್ವವನ್ನು ಕುರಿತು ಇಡೀ ದೇಶದಲ್ಲಿ ಅರಿವು ಜಾಗೃತಿಯನ್ನು ತನ್ನ ಬದುಕಿನುದ್ದಕ್ಕೂ ಮೂಡಿಸಿದರು ಎಂದು ಸುಜ್ಞಾನ್ ಎಜುಕೇಶನಲ್ ಟ್ರಸ್ಟ್‌ನ ಅಧ್ಯಕ್ಷರಾದ ಡಾ. ರಮೇಶ್ ಶೆಟ್ಟಿ ಹೇಳಿದರು.
ಸುಜ್ಞಾನ್ ಎಜುಕೇಶನ್ ಟ್ರಸ್ಟ್ ಕುಂದಾಪುರ, ಸುಜ್ಞಾನ ಪದವಿಪೂರ್ವ ಕಾಲೇಜು ಮತ್ತು ವಿದ್ಯಾರಣ್ಯ (ಲಿಟ್ಲ್ ಸ್ಟಾರ್) ಇಂಗ್ಲಿಷ್ ಮೀಡಿಯಂ ಸ್ಕೂಲ್ ಯಡಾಡಿ ಮತ್ಯಾಡಿ ಜೊತೆಯಾಗಿ ಆಯೋಜಿಸಿದ ಗಾಂಧಿ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮ ದಿನಾಚರಣೆ ಪ್ರಯುಕ್ತ ನಡೆದ ಸ್ವಚ್ಚತಾ ಅಭಿಯಾನ – ಜನಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಸಭೆಯಲ್ಲಿ ಅಭ್ಯಾಗತರಾಗಿದ್ದ ಸುಜ್ಞಾನ್ ಎಜುಕೇಶನಲ್ ಟ್ರಸ್ಟ್‌ನ ಖಜಾಂಚಿ ಭರತ್ ಶೆಟ್ಟಿ ಮಾತನಾಡುತ್ತಾ “ಗಾಂಧೀಜಿ ಮತ್ತು ಲಾಲ್ ಬಹುದ್ದೂರ್ ಶಾಸ್ತ್ರಿಯವರು ಭಾರತಕ್ಕೆ ನೀಡಿದ ಕೊಡುಗೆ ಅನನ್ಯವಾದುದು. ಪರಿಸರ ಸ್ವಚ್ಚತೆ ಪ್ರತಿಯೊಬ್ಬರ ಆಧ್ಯತೆಯಾಗಬೇಕು” ಎಂದರು.
ಸಮಾರಂಭ ಅಧ್ಯಕ್ಷತೆಯನ್ನು ಹೊಂಬಾಡಿ – ಮಂಡಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಯಂತಿ ಶೆಟ್ಟಿ ವಹಿಸಿದ್ದರು. ಪಿ.ಡಬ್ಲ್ಯೂ.ಡಿ ಪ್ರಥಮ ದರ್ಜೆ ಗುತ್ತಿಗೆದಾರರಾಗಿರುವ ಬಿ. ಅರುಣ್ ಕುಮಾರ್ ಹೆಗ್ಡೆ ಅವರು ಕಾರ್ಯಕ್ರಮ ಉದ್ಘಾಟಿಸಿದರು.
ವೇದಿಕೆಯಲ್ಲಿ ಸುಜ್ಞಾನ್ ಎಜುಕೇಶನಲ್ ಟ್ರಸ್ಟ್‌ನ ಕಾರ್ಯದರ್ಶಿ ಪ್ರತಾಪ್ ಚಂದ್ರ ಶೆಟ್ಟಿ, ಸುಜ್ಞಾನ ಪದವಿ ಪೂರ್ವ ಕಾಲೇಜಿನ ಪ್ರಭಾರ ಪ್ರಾಂಶುಪಾಲರಾದ ರಂಜನ್ ಶೆಟ್ಟಿ ಉಪಸ್ಥಿತರಿದ್ದರು.
ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕ ಪ್ರದೀಪ್ ಕೆ. ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕನ್ನಡ ಶಿಕ್ಷಕ ಸಂತೋಷ್ ಕುಮಾರ್ ಕೋಟ ಕಾರ್ಯಕ್ರಮ ನಿರ್ವಹಿಸಿದರು.
ಸಭಾ ಕಾರ್ಯಕ್ರಮದ ತರುವಾಯ ಸಂಸ್ಥೆಯ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಉಪನ್ಯಾಸಕರು, ಬೋಧಕೇತರ ಸಿಬ್ಬಂದಿಗಳು ಗುಡ್ಡೆಯಂಗಡಿ ವೃತ್ತದಿಂದ ಮೊರಾರ್ಜಿ ದೇಸಾಯಿ ವಸತಿ ಶಾಲೆಯವರೆಗಿನ ರಸ್ತೆಯ ಎರಡೂ ಬದಿಗಳಲ್ಲಿನ ಪ್ಲಾಸ್ಟಿಕ್, ಕಸಗಳನ್ನು ತೆಗೆದು ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗಿಯಾದರು.