ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಭಂಡಾರ್ಕಾರ್ಸ್ ಪದವಿ ಕಾಲೇಜಿನಲ್ಲಿ ರಾಜ್ಯೋತ್ಸವ ಜಿಲ್ಲಾ ಪ್ರಶಸ್ತಿಗೆ ಭಾಜನರಾದ ಅಭಿನಂದನ್ ಶೆಟ್ಟಿ ಮತ್ತು ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯರಾಗಿ ಆಯ್ಕೆಯಾಗಿರುವ ಯು.ಸುರೇಂದ್ರ ಶೆಣೈ ಅವರಿಗೆ ಇಂದು ಸನ್ಮಾನ ಕಾರ್ಯಕ್ರಮ ನಡೆಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಭಂಡಾರ್ಕಾರ್ಸ್ ಕಾಲೇಜಿನ ವಿಶ್ವಸ್ಥ ಮಂಡಳಿಯ ಸದಸ್ಯರಾದ ಅಭಿನಂದನ್ ಶೆಟ್ಟಿ, ಯಶಸ್ಸು, ಹಣ ಸ್ಥಾನ ಮಾನ ಮತ್ತು ಸಂಪತ್ತಿಗಿಂತ ಮೊದಲು ಬದುಕಲು ಕಲಿಯಬೇಕು. ನಿಮ್ಮ ಮುಂದಿನ ಭವಿಷ್ಯ ರೂಪಿಸುವ ಅಂಶಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಜೀವನವನ್ನು ಸಾರ್ಥಕ್ಯಗೊಳಿಸುವತ್ತ ಗಮನ ಇರಬೇಕು. ನಕಾರಾತ್ಮಕವಾದ ಡ್ರಗ್ಸ್ ಮತ್ತು ಮಾದಕ ಜಗತ್ತಿನ ಕುರಿತು ಜಾಗೃತರಾಗಿರಬೇಕು. ಅವುಗಳಿಂದ ದೂರವಿದ್ದು ನಿಮ್ಮ ಹಿರಿಯರು ಪೋಷಕರು ಮತ್ತು ಶಿಕ್ಷಕರ ಒಳ್ಳೆಯ ಆಶಯವನ್ನು ಪರಿಪೂರ್ಣವಾಗಿ ಪೂರ್ಣಗೊಳಿಸಿ. ಶಿಕ್ಷಣ ಎಲ್ಲವನ್ನೂ ಕೊಡುತ್ತದೆ. ನೀವು ಈ ಶಿಕ್ಷಣದ ಮೂಲಕ ಶಿಸ್ತು ಮತ್ತು ಸಂಯಮ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಆಡಳಿತ ಮಂಡಳಿಯ ಸದಸ್ಯರಾದ ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯರಾಗಿ ಆಯ್ಕೆಯಾಗಿರುವ ಯು. ಎಸ್ ಶೆಣೈ ಮಾತನಾಡಿ, ನೀತಿವಂತರಾಗಿ ಬದುಕಬೇಕು. ಪಾಠ ಮತ್ತು ಪಾಠೇತರ ಚಟುವಟಿಕೆಗಳಲ್ಲಿ ಭಾಗವಹಿಸಿ ಆತ್ಮವಿಶ್ವಾಸ ಬೆಳೆಸಿಕೊಳ್ಳಿ. ಹಿರಿಯರು ಸಂತೋಷ ಮತ್ತು ಗೌರವ ಪಡುವ ಹಾಗೆ ಬೆಳೆಯಿರಿ ಎಂದು ಆಶಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಕಾಲೇಜಿನ ವಿಶ್ವಸ್ಥ ಮಂಡಳಿಯ ಸದಸ್ಯರಾದ ಕೆ. ದೇವಿದಾಸ ಕಾಮತ್ ವಹಿಸಿದ್ದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಭಂಡಾರ್ಕಾರ್ಸ್ ಕಾಲೇಜಿನ ವಿಶ್ವಸ್ಥ ಮಂಡಳಿಯ ಸದಸ್ಯರಾದ ರಾಜೇಂದ್ರ ತೋಳಾರ್, ಸದಾನಂದ ಚಾತ್ರ ಉಪಸ್ಥಿತರಿದ್ದರು.
ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಶುಭಕರಾಚಾರಿ ಸ್ವಾಗತಿಸಿದರು. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ. ಜಿ.ಎಮ್.ಗೊಂಡ ವಂದಿಸಿದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಸತ್ಯನಾರಾಯಣ ಮತ್ತು ಇತಿಹಾಸ ವಿಭಾಗದ ಮುಖ್ಯಸ್ಥರಾದ ಗೋಪಾಲ ಕೆ. ಸನ್ಮಾನಿತರನ್ನು ಪರಿಚಯಿಸಿದರು.