ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳು ಕೋಡಿ ಇದರ ಆಶ್ರಯದಲ್ಲಿ”ದೀಪಾವಳಿ ಆಚರಣೆ” ವಿಶೇಷವಾಗಿ ಜರುಗಿತು.
ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ವಿಶ್ವಸ್ಥ ಮಂಡಳಿ ಸದಸ್ಯರಾದ ಸಿದ್ದೀಕ್ ಬ್ಯಾರಿ ಇವರು ಕಾರ್ಯಕ್ರಮವನ್ನುದ್ದೇಶಿಸಿ “ಹಬ್ಬಗಳು ಸೌಹಾರ್ದತೆಯ ಮೂಲ ಸಂಕೇತಗಳು, ನಮ್ಮ ಮನದಲ್ಲಿಯ ಅಜ್ಞಾನ ಹಾಗೂ ಅಂಧಕಾರಗಳು ದೂರವಾಗಿ ವಿಶ್ವಕುಟುಂಬಿಯಾಗಬೇಕು ಇದರ ಮೂಲಕ ನಾವು ವಿಶ್ವಶಾಂತಿಯನ್ನು ಕಾಣುವಂತಾಗಬೇಕು ಎಂದು ನುಡಿದರು”.
ಬ್ಯಾರೀಸ್ ವಿಶ್ವಸ್ಥ ಮಂಡಳಿ ಸದಸ್ಯರಾದ ಡಾ. ಆಸೀಫ್ ಬ್ಯಾರಿ ಇವರು “ಕವಿ ಬೇಂದ್ರೆ ಅವರ ಅಮೃತವಾಣಿಯಂತೆ ನಾವು ಮನುಷ್ಯರಾಗಿ ಹುಟ್ಟಿಲ್ಲ, ಮನುಷ್ಯರಾಗಲು ಹುಟ್ಟಿರುವ ಕಾರಣ ಸೌಹಾರ್ದ ಗುಣಗಳನ್ನು ಬೆಳೆಸಿಕೊಳ್ಳಬೇಕು ಅದು ನಮ್ಮೆಲ್ಲಾ ಹಬ್ಬಗಳಿಂದ ಮಾತ್ರ ಸಾಧ್ಯ” ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ಹಾಗೂ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಹಾಜಿ ಕೆ. ಎಂ ಅಬ್ದುಲ್ ರೆಹಮಾನ್ ಇವರು ದೀಪಾವಳಿ ಹಾಗೂ ಕನ್ನಡ ರಾಜ್ಯೋತ್ಸವ ಆಚರಣೆಯ ಶುಭಾಶಯ ಕೋರಿದರು.
ಬ್ಯಾರೀಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿಯರು ಡಿ. ಎಸ್. ಕರ್ಕಿಯ ‘ಹಚ್ಚೇವು ಕನ್ನಡದ ದೀಪ’ ಹಾಗೂ ಪದವಿ ವಿದ್ಯಾರ್ಥಿನಿಯರ ದೀಪಾವಳಿ ಶುಭಕಾಮನೆಯ ಗಾಯನಗಳು ಕಾರ್ಯಕ್ರಮಕ್ಕೆ ಒಂದೆಡೆ ಮೆರುಗು ತಂದರೆ ವೇದಿಕೆ ಮೇಲಿನ ರಂಗೋಲಿ, ಪುಷ್ಪಾಲಂಕಾರ ಹಾಗೂ ದೀಪಾಲಂಕಾರಗಳು ಮತ್ತು ವರ್ಣಮಯ ಗೂಡುದೀಪಗಳು ವಿದ್ಯಾರ್ಥಿಗಳ ಕೈಚಳಕಕ್ಕೆ ಸಾಕ್ಷಿಯಾಯಿತು.
ಸಮಾರಂಭದ ವೇದಿಕೆಯಲ್ಲಿ ಬ್ಯಾರೀಸ್ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರಾದ ಸಿದ್ದಪ್ಪ ಕೆ. ಎಸ್, ಬ್ಯಾರೀಸ್ ಪದವಿ ಪ್ರಾಂಶುಪಾಲೆ ಶಬೀನಾ ಹೆಚ್, ಕನ್ನಡ ಅನುದಾನಿತ ಪ್ರೌಢಶಾಲೆ ಪ್ರಾಂಶುಪಾಲ ಜಯಶೀಲ ಶೆಟ್ಟಿ, ಬ್ಯಾರೀಸ್ ಆಂಗ್ಲ ಮಾಧ್ಯಮ ಶಾಲೆ ಹಾಗೂ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಅಶ್ವಿನಿ ಶೆಟ್ಟಿ, ವಿಜ್ಞಾನ ವಿಭಾಗದ ಮುಖ್ಯಸ್ಥೆ ಡಾ. ಪೂರ್ಣಿಮಾ ಟಿ. ಹಾಗೂ ಬ್ಯಾರೀಸ್ ಆಂಗ್ಲ ಮಾಧ್ಯಮ ಶಾಲಾ ಮುಖ್ಯ ಸಲಹೆಗಾರ ಹಾಜಿ. ಅಬ್ಬುಷೇಕ್ ಸಾಹೇಬ್ ಉಪಸ್ಥಿತರಿದ್ದರು.
ಕನ್ನಡ ಉಪನ್ಯಾಸಕ ಡಾ. ಸಂದೀಪ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.