ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮೂಡುಬಿದಿರೆ ವಿದ್ಯಾಗಿರಿಯಲ್ಲಿ ನ.10ರಂದು ನಡೆಯಲಿರುವ ಗದ್ದಿಗೆ ಕರಾವಳಿ ಮರಾಟಿ ಸಮಾವೇಶ-2024ನ್ನು ಬೈಂದೂರು – ಕುಂದಾಪುರ ಮರಾಟಿ ಸಂಘ ಬಹಿಷ್ಕರಿಸಿ ಸಮಾವೇಶದಲ್ಲಿ ಪಾಲ್ಗೊಳ್ಳದಿರುವ ನಿರ್ಣಯ ಕೈಗೊಂಡಿದೆ.
ಗದ್ದಿಗೆ ಕರಾವಳಿ ಮರಾಟಿ ಸಮಾವೇಶ ಆಯೋಜಿಸುವವರು ಮರಾಠಿ ಸಮುದಾಯದ ಆರಾಧ್ಯ ದೇವಿ ತುಲಾಜಾ ಭವಾನಿಯ ಭಾವಚಿತ್ರ, ಸಮುದಾಯದ ಆದರ್ಶ ಪುರುಷ ಶಿವಾಜಿ ಮಹಾರಾಜರ ಕಡೆಗಣನೆ ಮರಾಠಿ ಸಮುದಾಯದ ಆಚಾರ ವಿಚಾರ ಸಂಸ್ಕೃತಿ ಸಂಸ್ಕಾರಗ ಗಾಳಿಗೆ ತೂರಿ ಸರ್ವಾಧಿಕಾರದ ಧೋರಣೆಯಿಂದ ಕಾರ್ಯಕ್ರಮ ಮಾಡುತ್ತಿರುವುದು ನಮಗೆ ನೋವು ತಂದಿದೆ. ಇದು ನೇತೃತ್ವ ವಹಿಸಿರುವ ಕೆಲವೇ ಕೆಲವು ಮುಖಂಡರು ತಮ್ಮ ಉದ್ದೇಶ ಈಡೇರಿಸಿಕೊಳ್ಳುವ ನಿಟ್ಟಿನಲ್ಲಿ ಸಮಾವೇಶ ಆಯೋಜಿಸಿದಂತೆ ಕಾಣುತ್ತಿದೆ. ಅವಿಭಜಿತ ದಕ್ಷಿಣ ಕನ್ನಡ ಉಡುಪಿ ಜಿಲ್ಲೆಯ ಮರಾಟಿಗರನ್ನು ಒಗ್ಗಟ್ಟಾಗಿಸಿಕೊಂಡು ಕಾರ್ಯಕ್ರಮವನ್ನು ಮಾಡಿಲ್ಲ. ಇದು ಮರಾಟಿಗರ ಏಳಿಗೆಗೆ ಪೂರಕವಾಗಿ ಇಲ್ಲದೆ ಇರುವುದರಿಂದ ಗದ್ದಿಗೆ ಕರಾವಳಿ ಮರಾಟಿ ಸಮಾವೇಶ-2024 ಈ ಕಾರ್ಯಕ್ರಮವನ್ನು ಬಹಿಷ್ಕರಿಸುವುದಾಗಿ ಬೈಂದೂರು ಮರಾಟಿ ಸಂಘದ ಅಧ್ಯಕ್ಷ ಭೋಜ ನಾಯ್ಕ್ ಹಾಗೂ ಕಾರ್ಯಕಾರಿ ಸಮಿತಿ ತಿಳಿಸಿದೆ.