ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ದೇಶ ಹಾಗೂ ವ್ಯಕ್ತಿಯ ಆರ್ಥಿಕ, ದೈಹಿಕ ಹಾಗೂ ಮಾನಸಿಕ ಆರೋಗ್ಯ ಚೆನ್ನಾಗಿದ್ದಾಗ ಮಾತ್ರ ವಾಸ್ತಾವಿಕ ಪರಿಸ್ಥಿತಿಗಳು ಆರೋಗ್ಯಕರವಾಗಿರುತ್ತದೆ ಎಂದು ಉಡುಪಿ ಜಿಲ್ಲಾ ಹೆಚ್ಚುವರಿ ಎಸ್.ಪಿ ಸಿದ್ದಲಿಂಗಪ್ಪ ಎಸ್.ಟಿ ಅಭಿಪ್ರಾಯ ವ್ಯಕ್ತಪಡಿಸಿದರು.
ವಕ್ವಾಡಿಯ ಗುರುಕುಲ ವಿದ್ಯಾಸಂಸ್ಥೆಯ ಕ್ರೀಡಾಂಗಣದಲ್ಲಿ ನಡೆದ ಗುರುಕುಲ ಪಬ್ಲಿಕ್ ಸ್ಕೂಲ್ ಹಾಗೂ ಪದವಿ ಪೂರ್ವ ಕಾಲೇಜಿನ 19 ವರ್ಷದ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗುರಿ, ತಾಳ್ಮೆ ಹಾಗೂ ನಿರಂತರ ಪರಿಶ್ರಮ ಇರಬೇಕು. ವಿದ್ಯಾರ್ಥಿಗಳಿಗೆ ಪಠ್ಯ ಅಭ್ಯಾಸಗಳ ಜೊತೆಯಲ್ಲಿ ದೈಹಿಕ ಹಾಗೂ ಮಾನಸಿಕ ಆರೋಗ್ಯವರ್ಧನೆಗೆ ಪೂರಕವಾಗಿರುವ ಪಠ್ಯೇತರ ಚಟುವಟಿಕೆಗಳು ಅಗತ್ಯವಾಗಿದೆ. ನಿರಂತರ ಕ್ರೀಡಾ ಅಭ್ಯಾಸಗಳನ್ನು ಹೊಂದಿರುವ ಕ್ರೀಡಾಪಟುಗಳು ಜೀವನದಲ್ಲಿ ಯಶಸ್ಸು ಸಾಧಿಸುತ್ತಾರೆ. ಗೆಲ್ಲುವ ಗುರಿಯೊಂದಿಗೆ ಕ್ರೀಡೆಯಲ್ಲಿ ಭಾಗವಹಿಸುವುದೆ ಮುಖ್ಯ ಎನ್ನುವ ಮನೋಭಾವ ರೂಢಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಅವರು ಸಲಹೆ ನೀಡಿದರು.
ಬಾಂಡ್ಯ ಎಜುಕೇಷನ್ ಟ್ರಸ್ಟ್ ನ ಜಂಟಿ ಆಡಳಿತ ಟ್ರಸ್ಟಿ ಬಾಂಡ್ಯ ಸುಭಾಶ್ಚಂದ್ರ ಶೆಟ್ಟಿ ಅವರು ಕ್ರೀಡೆಯಲ್ಲಿ ಭಾಗವಹಿಸುವುದೇ ಗುರಿಯಾಗಿರಬೇಕು. ಬದ್ದತೆ ಹಾಗೂ ಗುರಿಯನ್ನು ಹೊಂದಿರುವ ಪ್ರತಿಯೊಬ್ಬರೂ ಜೀವನದಲ್ಲಿ ಯಶಸ್ಸು ಸಾಧಿಸುತ್ತಾರೆ ಎಂದರು.
ಈ ಸಂದರ್ಭದಲ್ಲಿ ಬಾಂಡ್ಯ ಎಜುಕೇಷನ್ ಟ್ರಸ್ಟ್ ನ ಜಂಟಿ ಕಾರ್ಯನಿರ್ವಾಹಕಿ ಅನುಪಮಾ ಎಸ್. ಶೆಟ್ಟಿ, ಗುರುಕುಲ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರಾದ ಕೆ.ಸಿ ರಾಜೇಶ್, ಗುರುಕುಲ ಪಿಯು ಕಾಲೇಜಿನ ಪ್ರಾಂಶುಪಾಲ ಅವಿನಾಶ್ ಆಚಾರ್ಯ, ಗುರುಕುಲ ಪಬ್ಲಿಕ್ ಸ್ಕೂಲ್ ಪ್ರಾಂಶುಪಾಲ ಸುನೀಲ್ ಪ್ಯಾಟ್ರಿಕ್ ಉಪಸ್ಥಿತರಿದ್ದರು.
ಸಂಸ್ಥೆಯ ಧ್ವಜಾರೋಹಣ ನೆರವೇರಿಸಿ, ಪಥ ಸಂಚಲನ ತಂಡಗಳಿಂದ ಗೌರವ ರಕ್ಷೆ ಸ್ವೀಕರಿಸಿ, ಕ್ರೀಡಾ ಜ್ಯೋತಿಯನ್ನು ಹಸ್ತಾಂತರಿಸಿದ ಹೆಚ್ಚುವರಿ ಎಸ್.ಪಿ ಅವರು ಬಣ್ಣದ ಬಲೂನ್ ಗಳನ್ನು ಗಗನಕ್ಕೆ ಹಾರಿಸಿ ಬಿಡುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದ್ದರು.
ಶಾಲೆಯ ಕ್ರೀಡಾ ವಿದ್ಯಾರ್ಥಿಗಳ ತಂಡದ ಕ್ಯಾಪ್ಟನ್ ಭರತ್ ಬಿ.ಎಸ್ ಪಥಸಂಚಲನಕ್ಕೆ ಅನುಮತಿ ಪಡೆದರು. ವಿದ್ಯಾರ್ಥಿಗಳು ವಿವಿಧ ತಂಡಗಳಲ್ಲಿ ಪದೇ ಸಂಚಲನ ನಡೆಸಿ ಗೌರವ ರಕ್ಷೆ ನೀಡಿದರು. ಶಾಲೆಯ ಕ್ರೀಡಾ ನಾಯಕ ಈಶ್ವರ ಎನ್.ಆರ್ ವಚನ ಸ್ವೀಕರಿಸಿದರು. ವಿದ್ಯಾರ್ಥಿಗಳ ಸಾಮೂಹಿಕ ಭಾಗವಹಿಸುವಿಕೆಯಲ್ಲಿ ಏರೋಬಿಕ್ಸ್ ಪ್ರದರ್ಶನ ನಡೆಯಿತು.
ಸಹ ಶಿಕ್ಷಕಿ ಸುಜಾತ ಕಿರಣ್ ಶೆಟ್ಟಿ ನಿರೂಪಿಸಿ, ಉಪನ್ಯಾಸಕಿ ದೀಪಾ ಆರ್. ಕಾಮತ್ ಸ್ವಾಗತಿಸಿ, ಸಹ ಶಿಕ್ಷಕಿ ಚೇತನಾ ಶೆಣೈ ವಂದಿಸಿದರು.