ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಉಡುಪಿಯ ಶಾರದಾ ವಸತಿ ಶಾಲೆಯಲ್ಲಿ ನಡೆದ ಉಡುಪಿ ಜಿಲ್ಲಾ ಅಂತರ್ ಶಾಲಾ ಬಾಸ್ಕೆಟ್ ಬಾಲ್ ಪಂದ್ಯಾವಳಿಯಲ್ಲಿ ಹಟ್ಟಿಯಂಗಡಿಯ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯು ಅವಳಿ ರನ್ನರ್ ಅಪ್ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿತು.
14 ವರ್ಷದೊಳಗಿನ ಬಾಲಕ ಮತ್ತು 17 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ದ್ವಿತೀಯ ಸ್ಥಾನದೊಂದಿಗೆ ರನ್ನರ್ ಅಪ್ ಪ್ರಶಸ್ತಿ ಹಾಗೂ 17 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಮೂರನೇ ಸ್ಥಾನ ಪಡೆದು ಸಂಭ್ರಮಿಸಿತು.
14 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಪ್ರಕಾಶ್ ಬೆಸ್ಟ್ ಶೂಟರ್ ಹಾಗೂ 17 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಅಪೂರ್ವ ಶಿಂದೆ ಬೆಸ್ಟ್ ಡಿಫೆಂಡರ್ ಗೌರವಕ್ಕೆ ಪಾತ್ರರಾದರು.
ವಿದ್ಯಾರ್ಥಿಗಳ ಈ ಅಭೂತಪೂರ್ವ ಸಾಧನೆಗೆ ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿಗಳೂ ಹಾಗೂ ಶಾಲಾ ಪ್ರಾಂಶುಪಾಲರಾದ ಶರಣ ಕುಮಾರ ಅಭಿನಂದನೆಗಳನ್ನು ಸಲ್ಲಿಸುತ್ತಾ “ಕಳೆದ ಹಲವಾರು ವರ್ಷಗಳಿಂದ ನಮ್ಮ ಸಂಸ್ಥೆಯು ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಕ್ರೀಡಾ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆಗೈಯುತ್ತಿದೆ. ನಮ್ಮ ವಿದ್ಯಾರ್ಥಿಗಳು ದೈಹಿಕ ಮತ್ತು ಮಾನಸಿಕ ಸದೃಢತೆಯನ್ನು ಹೊಂದಿರುವುದರಿಂದಲೇ ಈ ಸಾಧನೆ ಸಾಧ್ಯವಾಗಿದೆ. ಈ ಗೆಲುವು ಖುಷಿ ಮತ್ತು ಜವಾಬ್ದಾರಿ ಎರಡನ್ನೂ ಹೆಚ್ಚಿಸಿದೆ. ಮುಂದಿನ ಸವಾಲುಗಳಿಗೆ ಸೂಕ್ತ ಸಿದ್ಧತೆ ನಡೆಸುತ್ತೇವೆ” ಎಂದರು.