ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಉಡುಪಿಯ ರನ್ನರ್ಸ್ ಕ್ಲಬ್ ಮತ್ತು ಲೊಂಬಾರ್ಡ್ ಸ್ಮಾರಕ ಆಸ್ಪತ್ರೆಯ ಸಹಯೋಗದಲ್ಲಿ ಆಸ್ಪತ್ರೆಯ 101 ನೇ ವಾರ್ಷಿಕೋತ್ಸವದ ಪ್ರಯುಕ್ತ ಆಯೋಜಿಸಿದ ‘ಉಡುಪಿ ಮ್ಯಾರಥಾನ್-2024’ ಸ್ಪರ್ಧೆಯಲ್ಲಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದು, 14 ವರ್ಷದೊಳಗಿನವರ ವಿಭಾಗದಲ್ಲಿ 8 ನೇ ತರಗತಿಯ ಸಿದ್ದಲಿಂಗ ವಾಲೀಕಾರ್ ತೃತೀಯ ಸ್ಥಾನದೊಂದಿಗೆ 2000 ರೂಪಾಯಿಗಳ ನಗದು ಬಹುಮಾನವನ್ನು ಪಡೆದರು.
ದೇಶದಾದ್ಯಂತ ಸುಮಾರು 1500 ಸ್ಪರ್ಧಿಗಳು ವಿವಿಧ ವಿಭಾಗಗಳಲ್ಲಿ ಇದರಲ್ಲಿ ಸ್ಪರ್ಧಿಸಿದ್ದು, ಮುಂಜಾನೆ 5 ಗಂಟೆಗೆ ಮಲ್ಪೆಯ ಸೀವಾಕ್ ನಿಂದ ಆರಂಭಗೊಂಡು ಪಡುಕೆರೆ, ಉದ್ಯಾವರ, ಮಟ್ಟು ಮಾರ್ಗವಾಗಿ ಸಾಗಿ, ಪುನಃ ಮಲ್ಪೆ ಸೀ ವಾಕ್ ನಲ್ಲಿ ಮುಕ್ತಾಯಗೊಂಡಿತು.
ಈ ಸಂದರ್ಭದಲ್ಲಿ ಮಾತನಾಡಿದ ಲೊಂಬಾರ್ಡ್ ಸ್ಮಾರಕ ಆಸ್ಪತ್ರೆಯ ನಿರ್ದೇಶಕ ಡಾ ಸುಶೀಲ್ ಜಾತಣ್ಣ “ಚಿಕಿತ್ಸೆಯ ಜೊತೆಗೆ ನಾವು ರೋಗಗಳನ್ನು ತಡೆಗಟ್ಟುವ ಬಗ್ಗೆಯೂ ಗಮನ ಹರಿಸುತ್ತೇವೆ. ವ್ಯಾಯಾಮವು ಅನೇಕ ಪ್ರಯೋಜನಗಳನ್ನು ಹೊಂದಿದೆ. ಮುಖ್ಯವಾಗಿ ಇಂದಿನ ಜೀವನಶೈಲಿಯಿಂದ ಹೃದ್ರೋಗ ಹೆಚ್ಚುತ್ತಿದೆ. ಈ ಮ್ಯಾರಥಾನ್ ಮೂಲಕ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸುಧಾರಿಸುವುದು ನಮ್ಮ ಉದ್ದೇಶವಾಗಿದೆ” ಎಂದು ತಿಳಿಸಿದರು.
ಈ ಮ್ಯಾರಥಾನ್ ನಲ್ಲಿ ತೃತೀಯ ಸ್ಥಾನವನ್ನು ಪಡೆದು ಸಂಸ್ಥೆಗೆ ಕೀರ್ತಿ ತಂದ ಸಿದ್ದಲಿಂಗ ವಾಲಿಕಾರ್ ನನ್ನು ಶ್ರೀ ಸಿದ್ಧಿಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿಗಳು ಹಾಗೂ ಶಾಲಾ ಪ್ರಾಂಶುಪಾಲರಾದ ಶರಣ ಕುಮಾರ ಅಭಿನಂದಿಸಿದರು.