ಕುಂದಾಪುರ: ಬೀಡಿ ಕಾರ್ಮಿಕರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸದೆ ಕಾರ್ಮಿಕರ ಬದುಕು ಕಸಿಯುವ ಕೇಂದ್ರ ಸರ್ಕಾರದ ನಡೆ ವಿರೋಧಿಸಿ ಬೀಡಿ ಕಾರ್ಮಿಕರ ನಿಯೋಜಿತ ಹಕ್ಕೊತ್ತಾಯಗಳ ಜೊತೆಗೆ ಕುಂದಾಪುರ ತಾಲೂಕಿನ ಬೀಡಿ ಕಾರ್ಮಿಕರು ಕುಂದಾಪುರ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಬೀಡಿ ಉದ್ಯಮ ಪಾರಂಪರಿಕ ಕೈಗಾರಿಕೆಯಾಗಿದ್ದು, ರಾಜ್ಯದಲ್ಲಿ ಬೀಡಿ ಕಾರ್ಮಿಕರು ತಂಬಾಕು ಬೆಳೆಗಾರರು, ತಂಬಾಕು ಸಂಸ್ಥಾಪಕ, ಬೀಡಿ ಲೇಬರ್ ಹೀಗೇ ಲೆಕ್ಕ ಹಾಕಿದರೆ ಸರಿ ಸುಮಾರು 12ರಂದ 13 ಲಕ್ಷ ಜನರಿಗೆ ಉದ್ಯೋಗದ ಮೂಲಕ ಮೂವತ್ತು ಲಕ್ಷ ಜನರ ಊಟದ ದಾರಿಯಾಗಿದೆ. ಕಾರ್ಮಿಕ ಆಧಾರಿತ ಬೀಡಿ ಕೈಗಾರಿಕೆಯಲ್ಲಿ ಬೀಡಿ ಸುತ್ತುವ ಕಾರ್ಮಿಕರು ಸುಮಾರು 10 ಲಕ್ಷ ಜನರಿದ್ದು, ಶೇ. 94ರಷ್ಟು ಮಹಿಳೆಯರಿದ್ದಾರೆ. ಸಂಸಾರದ ನಿರ್ವಹಣೆಯ ಹೊಣೆ ಹೊತ್ತ ಮಕ್ಕಳ ಶಿಕ್ಷಣ, ಆರೋಗ್ಯ, ಆಹಾರಕ್ಕಾಗಿ ಬೀಡಿ ಕಟ್ಟುವುದರಿಂದ ಬರುವ ಆದಾಯವನ್ನೇ ಅವಲಂಭಿಸಿದ್ದಾರೆ. ಈ ಕಾರ್ಮಿಕರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸದೆ ಕೇಂದ್ರ ಸರ್ಕಾರ ಬೀಡಿ ಕಾರ್ಮಿಕರ ಬದುಕು ಕಸಿಯಹೊರಟಿರುವುದು ಖಂಡನೀಯ ಎಂದು ಸಿಐಟಿಯು ಮುಖಂಡ ವೆಂಕಟೇಶ್ ಕೋಣಿ ಪ್ರತಿಭಟನೆ ಸಂದರ್ಭ ಆರೋಪಿಸಿದರು. (ಕುಂದಾಪ್ರ ಡಾಟ್ ಕಾಂ)
ಕೋಪ್ಟಾ 2015ನ್ನು ಕುರುಡಾಗಿ ಜ್ಯಾರಿಗೆ ತರಬಾರದು. ಪುನರ್ ವಸತಿ, ಪರ್ಯಾಯ ವ್ಯವಸ್ಥೆ ರೂಪಿಸಲು ಕೇಂದ್ರ ಸರ್ಕಾರವನ್ನು ಒತ್ತಾಯಿಸಲು ರಾಜ್ಯ ಬೀಡಿ ಕಾರ್ಮಿಕರ ನಿಯೋಗವನ್ನು ರಾಜ್ಯ ಸರ್ಕಾರ ಕೇಂದ್ರಕ್ಕೆ ಕೊಂಡೊಯ್ಯಬೇಕು, ರಾಜ್ಯ ಸರ್ಕಾರ ಬೀಡಿ ಕಾರ್ಮಿಕರ ಸಮಸ್ಯೆ, ಪರಿಹಾರ, ಶಾಸನಾತ್ಮಕ ಸೌಲಭ್ಯ ರೂಪಿಸಲು ರಾಜ್ಯ ಮಟ್ಟದ ಸಲಹಾ ಸಮಿತಿ ರಚಿಸಬೇಕು. ಜಿಲ್ಲಾ ಹಾಗೂ ತಾಲೂಕು ಮಟ್ಟದ ತ್ರಿಪಕ್ಷೀಯ ಸಮಿತಿಗಳನ್ನು ರಚಿಸಬೇಕು, ಪಿಎಫ್ ರಹಿತ ಕಾರ್ಮಿಕರಿಗೆ ಪಶ್ಚಿಮ ಬಂಗಾಳ, ಕೇರಳ ರಾಜ್ಯಗಳ ಮಾದರಿಯಲ್ಲಿ ಮಾಸಿಕ ಕನಿಷ್ಟ 1000 ಪಿಂಚಣಿ ನೀಡುವ ಯೋಜನೆ ರೂಪಿಸಬೇಕು, ರಾಜ್ಯ ಸರ್ಕಾರ 2015-16ನೇ ಸಾಲಿನ ಬೀಡಿ ಕಾರ್ಮಿಕರ ತುಟ್ಟಿ ಭತ್ಯೆ ನೀಡದಂತೆ ಮಾಡಿದ ಆದೇಶ ಹಿಂಪಡೆಯಬೇಕು. ಬೀಡಿ ಕಾರ್ಮಿಕರ ಕ್ಷೇಮಾಭಿವೃದ್ಧಿ ನಿಧಿ ನೀಡುವ ವಿದ್ಯಾರ್ಥಿ ವೇತನ ಯೋಜನೆ ಸಮರ್ಪಕ ಜ್ಯಾರಿಗೆ ಹಾಗೂ ಚಿಕಿತ್ಸೆ ವೆಚ್ಚ ಮರುಪಾವತಿ ಸಂಬಂಧಿಸಿ ಅರ್ಜಿಸಲ್ಲಿಕೆಯ ಕ್ರಮವನ್ನು ಸರಳೀಕರಣಗೊಳಿಸಬೇಕು ಎನ್ನುವ ಮನವಿಯನ್ನು ಪ್ರತಿಭಟನಾಕಾರರು ಇದೇ ಸಂದರ್ಭ ಇಲಾಖೆ ಹಾಗೂ ಸರ್ಕಾರಕ್ಕೆ ಸಲ್ಲಿಸಿದರು.
ಈ ಸಂದರ್ಭ ಬೀಡಿ ಕಾರ್ಮಿಕರ ಸಂಘದ ಅಧ್ಯಕ್ಷ ಮಹಾಬಲ ವಡೇರ ಹೋಬಳಿ, ಪ್ರಧಾನ ಕಾರ್ಯದರ್ಶಿ ಬಲ್ಕೀಸ್, ಖಜಾಂಚಿ ಗಿರಿಜಾ, ಕಾರ್ಮಿಕ ಸಂಘಟನೆಯ ಮುಖಂಡ ಸತೀಶ್ ತೆಕ್ಕಟ್ಟೆ ಸೇರಿದಂತೆ ನೂರಾರು ಕಾರ್ಮಿಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಪ್ರತಿಭಟನೆಗೆ ಮುನ್ನ ಬಸ್ ನಿಲ್ದಾಣದಿಂದ ತಾಲೂಕು ಕಚೇರಿಯ ವರೆಗೆ ಘೋಷಣೆಗಳನ್ನು ಕೂಗುತ್ತಾ ತಾಲೂಕು ಕಚೇರಿಗೆ ಕಾಲ್ನಡಿಗೆಯ ಪ್ರತಿಭಟನೆಯಲ್ಲಿ ಸಾಗಿ ಬಂದರು.